Tuesday, 5th November 2024

Muda Case: ಮುಡಾ ಹಗರಣದ ಸಿಬಿಐ ತನಿಖೆ ಕೋರಿ ಅರ್ಜಿ; ಸಿಎಂಗೆ ಹೈಕೋರ್ಟ್ ನೋಟಿಸ್‌, ವಿಚಾರಣೆ ನ.26ಕ್ಕೆ ಮುಂದೂಡಿಕೆ

Muda Case

ಬೆಂಗಳೂರು: ಮುಡಾ ಹಗರಣವನ್ನು (Muda Case) ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾ.ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠವು, ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿದೆ. ಇದೇ ವೇಳೆ ನವೆಂಬರ್‌ 25ರವರೆಗೆ ನಡೆದಿರುವ ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತಕ್ಕೆ ನ್ಯಾಯಾಲಯ ಸೂಚಿಸಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಮತ್ತು ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕೆ.ಜಿ. ರಾಘವನ್‌ ಅವರು ವಾದ ಮಂಡಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ನ್ಯಾಯಮೂರ್ತಿಗಳು, ಲೋಕಾಯುಕ್ತರು ತನಿಖೆ ನಡೆಸುತ್ತಿಲ್ಲವೇ ಎಂದು ಪ್ರಶ್ನಿಸಿದರು. ಆಗ ರಾಘವನ್‌ ಅವರು, ಸದ್ಯ ಮೈಸೂರು ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಇಂತಹ ಪ್ರಕರಣದಲ್ಲಿ ತನಿಖಾ ಪ್ರಕ್ರಿಯೆಯು ಸಾರ್ವಜನಿಕ ನಂಬಿಕೆ ಉಳಿಯುಂತೆ ನಡೆಯಬೇಕಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದರು.

ಇದನ್ನು ಆಲಿಸಿದ ಪೀಠವು, ಕೇಂದ್ರ ಸರ್ಕಾರ, ರಾಜ್ಯ ಗೃಹ ಇಲಾಖೆ, ಸಿಬಿಐ, ಲೋಕಾಯುಕ್ತ, ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಮತ್ತು ಜಮೀನು ಮಾಲೀಕ ಜೆ.ದೇವರಾಜುಗೆ ತುರ್ತು ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ನವೆಂಬರ್ 26 ಕ್ಕೆ ಹೈಕೋರ್ಟ್ ಮುಂದೂಡಿತು.

ಈ ಸುದ್ದಿಯನ್ನೂ ಓದಿ | Self Harming: ಸಚಿವರ ಸಹಾಯಕನ ಹೆಸರು ಬರೆದಿಟ್ಟು ಸರ್ಕಾರಿ ನೌಕರ ಕಚೇರಿಯಲ್ಲೇ ಆತ್ಮಹತ್ಯೆ

ನ.6ಕ್ಕೆ ವಿಚಾರಣೆಗೆ ಬರಲು ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಸಮನ್ಸ್

ಮುಡಾ ನಿವೇಶನ ಹಗರಣದ (Muda Case) ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ, ನ. 6ರಂದು ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಮನ್ಸ್ ನೀಡಿದೆ. ಬುಧವಾರ ಬೆಳಗ್ಗೆ ಮೈಸೂರಿನ ಕಚೇರಿಯಲ್ಲಿ ವಿಚಾರಣೆಗೆ ಬರುವಂತೆ ಸಿಎಂ ಅವರಿಗೆ ಸಮನ್ಸ್ ನೀಡಲಾಗಿದೆ.

ಪ್ರಕರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿ ಆಗಿದ್ದಾರೆ. ಉಳಿದ ಮೂವರು ಆರೋಪಿಗಳಾದ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ, ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನಿನ ಮಾಲೀಕ ದೇವರಾಜು ಅವರ ವಿಚಾರಣೆಯು ಈಗಾಗಲೇ ಮುಗಿದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸೂಚನೆಯಂತೆ ಲೋಕಾಯುಕ್ತ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಡಿಸೆಂಬರ್ ಅಂತ್ಯಕ್ಕೆ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಬೇಕಿದೆ.