Sunday, 24th November 2024

Shocking: ಜ್ಯೋತಿಷಿ ಮಾತು ನಂಬಿ ಪತ್ನಿ, ಮಕ್ಕಳನ್ನೇ ಗುಂಡಿಟ್ಟು ಕೊಂದ ದುರುಳ; ಕಾರಣ ಕೇಳಿ ಪೊಲೀಸರಿಗೂ ಶಾಕ್‌

Shocking

ಲಖನೌ: ಒಂದೆಡೆ ಚಂದ್ರನಲ್ಲಿಗೆ ರಾಕೆಟ್‌ ಉಡಾವಣೆ, ಮಾನವನನ್ನೇ ಹೋಲುವ ರೋಬೋಟ್‌ ತಯಾರಿಯಂತಹ ವೈಜ್ಞಾನಿಕ ಸಾಧನೆ ನಡೆಯುತ್ತಿದೆ. ಮತ್ತೊಂದೆಡೆ ಇಂದಿಗೂ ಮೂಢ ನಂಬಿಕೆ ಆಚರಣೆಯಲ್ಲಿದೆ (Shocking). ಜ್ಯೋತಿಷಿಯ ಮಾತು ನಂಬಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಗುಂಡಿಕ್ಕಿ ಕೊಲೆ ಮಾಡಿರುವ ಅಮಾನವೀಯ, ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆದಿದೆ (Crime News).

ರಾಜೇಂದ್ರ ಗುಪ್ತಾ ಎಂಬಾತ ಸೋಮವಾರ (ನ. 4) ತಡರಾತ್ರಿ ತನ್ನ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಮಗಳನ್ನು ಗುಂಡಿಕ್ಕಿ ಕೊಂದಿದ್ದಾನೆ. ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಭದೈನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾಜೇಂದ್ರ ಗುಪ್ತಾ ಸ್ಥಳದಿಂದ ಪರಾರಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ಮಂಗಳವಾರ (ನ. 5) ನೆರೆಹೊರೆಯವರು ಈ ಕೊಲೆ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಏನಿದು ಘಟನೆ?

ರಾಜೇಂದ್ರ ಗುಪ್ತಾ ತನ್ನ ಪತ್ನಿ ನೀತು ಗುಪ್ತಾ (45), ಪುತ್ರರಾದ ನವನೇಂದ್ರ ಗುಪ್ತಾ (25) ಮತ್ತು ಸುಬೇಂದ್ರ ಗುಪ್ತಾ (15) ಹಾಗೂ ಪುತ್ರಿ ಗೌರಂಗಿ ಗುಪ್ತಾ (16) ಅವರನ್ನು ಕೊಲೆ ಮಾಡಿದ್ದಾನೆ. ಅಚ್ಚರಿ ಎಂದರೆ ಇವರಿರುವ ಬಿಲ್ಡಿಂಗ್‌ನಲ್ಲಿ ಸುಮಾರು 20 ಕುಟುಂಬ ವಾಸಿಸುತ್ತಿದೆ. ಆದರೆ ಘಟನೆ ಯಾರ ಗಮನಕ್ಕೂ ಬಂದಿಲ್ಲ.

ಕಾರಣವೇನು?

ರಾಜೇಂದ್ರ ಪದೇ ಪದೆ ತನ್ನ ಪತ್ನಿಯೊಂದಿಗೆ ವಾಗ್ವಾದ ಮತ್ತು ಜಗಳ ನಡೆಸುತ್ತಿದ್ದ. ಜತೆಗೆ ಇನ್ನೊಂದು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದ. ಆತನ ಯಶಸ್ಸಿಗೆ ಪತ್ನಿ ಅಡ್ಡಿಯಾಗಿದ್ದಾಳೆ ಎಂದು ಜ್ಯೋತಿಷಿಯೊಬ್ಬ ಹೇಳಿದ್ದನಂತೆ. ಅದನ್ನೇ ಆತ ನಂಬಿಕೊಂಡು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಮರುಮದುವೆಯಾಗುವ ಉದ್ದೇಶದಿಂದಲೇ ಆತ ತನ್ನ ಪತ್ನಿ ಮತ್ತು ಮಕ್ಕಳ ಹತ್ಯೆ ಮಾಡಿದ್ದಾನೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.

ರಾಜೇಂದ್ರ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಒಂದೇ ಮನೆಯಲ್ಲಿದ್ದರೆ, ಕುಟುಂಬದ ಇತರ ಸದಸ್ಯರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದುರಂತದ ಬಗ್ಗೆ ಮಾಹಿತಿ ತಿಳಿದ ರಾಜೇಂದ್ರನ ತಾಯಿ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಘಟನೆಯಿಂದ ಅವರೂ ಆಘಾತಕ್ಕೀಡಾಗಿದ್ದಾರೆ. ಭೇಲುಪುರದ ಇನ್ಸ್‌ಪೆಕ್ಟರ್‌ ಮತ್ತು ಇತರ ಅಧಿಕಾರಿಗಳು ಪ್ರಿಶೀಲನೆ ನಡೆಸುತ್ತಿದ್ದು, ತನಿಖೆ ಆರಂಭವಾಗಿದೆ.

ಹಿಂದೆಯೂ ಇದೇ ಥರ ವರ್ತಿಸಿದ್ದ

ರಾಜೇಂದ್ರ ಗುಪ್ತಾ ಈ ರೀತಿಯ ವರ್ತನೆ ತೋರುತ್ತಿರುವುದು ಇದೇ ಮೊದಲ ಸಲವೇನಲ್ಲ. ಈ ಹಿಂದೆ ತನ್ನ ತಂದೆ ಮತ್ತು ಸೆಕ್ಯುರಿಟಿ ಗಾರ್ಡ್‌ ಅನ್ನು ಗುಂಡಿಟ್ಟು ಕೊಲೆ ಮಾಡಿದ್ದ. ಸದ್ಯ ತಲೆ ಮರೆಸಿಕೊಂಡಿರುವ ರಾಜೇಂದ್ರನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆತನ ಮೊಬೈಲ್‌ ಟವರ್‌ ಲೊಕೇಷನ್‌ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ರಾಜೇಂದ್ರ ಗುಪ್ತಾ ಕೃತ್ಯ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಒಕ್ಕೊರಳಿಂದ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಪೋಷಕರೇ ಎಚ್ಚರ… ಎಚ್ಚರ…! ಚೂಯಿಂಗ್‌ ಗಮ್‌ ಗಂಟಲಿಗೆ ಸಿಲುಕಿ 4 ವರ್ಷದ ಮಗು ಸಾವು