ಬೆಂಗಳೂರು: ಬೆಂಗಳೂರಿನಲ್ಲಿ ಶ್ರೀಮಂತರ ಡ್ರಿಂಕ್ ಆ್ಯಂಡ್ ಡ್ರೈವ್ (drink and drive) ಖಯಾಲಿಗೆ ಮತ್ತೊಂದು ಬಲಿಯಾಗಿದ್ದು, ಮಹಿಳೆಯೊಬ್ಬರು (road Accident) ಸಾವಿಗೀಡಾಗಿದ್ದಾರೆ. ಇದೀಗ, ಕೇಸ್ ವಾಪಸ್ ಪಡೆಯುವಂತೆ ಆರೋಪಿಯ (hit and run) ಕಡೆಯವರು ಮಹಿಳೆಯ ಕುಟುಂಬದವರಿಗೆ ಕೋಟ್ಯಂತರ ರೂಪಾಯಿಗಳ ಆಮಿಷ ಒಡ್ಡಿರುವುದು ಬಯಲಿಗೆ ಬಂದಿದೆ.
ಬೆಂಗಳೂರಿನ ಕೆಂಗೇರಿ ಬಸ್ ನಿಲ್ದಾಣದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. 30 ವರ್ಷದ ಸಂಧ್ಯಾ ಎಂಬ ಮಹಿಳೆ ಇದರಲ್ಲಿ ದುರಂತ ಅಂತ್ಯ ಕಂಡಿದ್ದರು. ಯಾವ ತಪ್ಪೂ ಮಾಡದ ಟೆಕ್ಕಿ ಸಂಧ್ಯಾ ಅವರ ಮೇಲೆ, ಕುಡಿದು ಬೆನ್ಜ್ ಕಾರು ಓಡಿಸುತ್ತಿದ್ದಾತ ಅಟ್ಟಹಾಸ ಮೆರೆದಿದ್ದ. ಕಾರು ಗುದ್ದಿದ ರಭಸಕ್ಕೆ ಸಂಧ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಮೂಲಗಳ ಪ್ರಕಾರ ಭಾನುವಾರ ಸಂಜೆ 6.45ಕ್ಕೆ ಆರೋಪಿ ಧನುಷ್ ಹಾಗೂ ಗೆಳೆಯರು ಕುಡಿದು ಬೆನ್ಜ್ ಕಾರು ಚಾಲನೆ ಮಾಡುತ್ತಿದ್ದರು. ಆರೋಪಿ ಧನುಷ್ ಹಾಗೂ ಗೆಳೆಯರು ಭರ್ಜರಿ ಪಾರ್ಟಿ ಮುಗಿಸಿ ರೋಡ್ನಲ್ಲಿ ಅತಿವೇಗದಲ್ಲಿ ಡ್ರೈವಿಂಗ್ ಮಾಡುತ್ತಿದ್ದರು. ಕೆಂಗೇರಿ ಬಸ್ ನಿಲ್ದಾಣದ ಬಳಿ ಟೆಕ್ಕಿ ಸಂಧ್ಯಾ ಅವರು ರಸ್ತೆ ಕ್ರಾಸ್ ಮಾಡುತ್ತಿದ್ದರು. ಸ್ಪೀಡಾಗಿ ಬರುತ್ತಿದ್ದ ಬೆನ್ಜ್ ಕಾರು ಸಂಧ್ಯಾಗೆ ಗುದ್ದಿದೆ. ಬೆನ್ಜ್ ಕಾರು ಗುದ್ದಿದ ರಭಸಕ್ಕೆ ಮೇಲೆ ಹಾರಿಬಿದ್ದ ಸಂಧ್ಯಾ ಅವರ ದೇಹ ನುಜ್ಜುಗುಜ್ಜಾಗಿದೆ.
ಕೂಡಲೇ ಸಂಧ್ಯಾ ಸ್ನೇಹಿತರು, ಸ್ಥಳೀಯರು ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಂಧ್ಯಾ ಒಬ್ಬರಿಗೇ ಅಲ್ಲ ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೂ ಬೆನ್ಜ್ ಕಾರು ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಸೈಯ್ಯದ್ ಎಂಬ ವ್ಯಕ್ತಿಗೂ ಗಾಯಗಳಾಗಿದ್ದು, ಕುಡಿದ ಮತ್ತಲ್ಲಿ ಅತಿವೇಗವಾಗಿ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ.
ಅತ್ಯಂತ ವೇಗವಾಗಿ ಬೆನ್ಜ್ ಕಾರು ಓಡಿಸುತ್ತಿದ್ದ ಆರೋಪಿ ಧನುಷ್ ಹಾಗೂ ಸ್ನೇಹಿತರು ಅಪಘಾತವೆಸಗಿ ಎಸ್ಕೇಪ್ ಆಗಲು ಯತ್ನಿಸಿದಾಗ, ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಧನುಷ್ ಹಾಗೂ ಸ್ನೇಹಿತರು ಕುಡಿದ ಅಮಲಿನಲ್ಲಿದ್ದರು. ಅಪಘಾತದ ಬಳಿಕ ಪೊಲೀಸರ ಪರೀಕ್ಷೆಯಲ್ಲೂ ಆರೋಪಿಗಳು ಕುಡಿದಿರೋದು ಪತ್ತೆಯಾಗಿದೆ. BNS 105 ಅಡಿಯಲ್ಲಿ ಆರೋಪಿ ಧನುಷ್ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಅಪಘಾತಕ್ಕೆ ಕಾರಣವಾದ ಬೆನ್ಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಚಾಲಕನನ್ನು ಪೊಲೀಸರು ಮದ್ಯಪಾನ ಪರೀಕ್ಷೆಗೊಳಪಡಿಸಿದ್ದು ಈ ವೇಳೆ ಆರೋಪಿ ಚಾಲಕನ ಆಲ್ಕೋಮೀಟರ್ ಪರೀಕ್ಷೆಯು 177 mg / 100 ml ರಕ್ತದ ಆಲ್ಕೋಹಾಲ್ ಅಂಶವನ್ನು ಹೊಂದಿತ್ತು ಎಂದು ತೋರಿಸಿದೆ.
ಕಾರು ಚಲಾಯಿಸುತ್ತಿದ್ದ ಆರೋಪಿ ಧನುಷ್, ಕೋಟ್ಯಾಧಿಪತಿ ಪರಮಶಿವಯ್ಯ ಎಂಬವರ ಒಬ್ಬನೇ ಪುತ್ರ. ಸಂಧ್ಯಾಗೆ ಗುದ್ದಿರುವ ಬೆಂಜ್ ಕಾರು LV ಟ್ರಾವೆಲ್ಸ್ಗೆ ಸೇರಿದ್ದು ಎನ್ನಲಾಗಿದೆ. ಟ್ರಾವೆಲ್ಸ್ ಮಾಲೀಕರಾಗಿರುವ ಪರಮಶಿವಯ್ಯ ಅವರು ಅತ್ಯಂತ ಪ್ರೀತಿಯಿಂದ ಒಬ್ಬನೇ ಮಗನನ್ನು ಬೆಳೆಸಿದ್ದಾರೆ. ಅದೇ ಮಮತೆಯಲ್ಲಿ ಐಷಾರಾಮಿ ಬೆಂಜ್ ಕಾರನ್ನು ಕೊಡಿಸಿದ್ದಾರೆ. ಇದೇ ಕಾರು ಇದೀಗ ಅಪಘಾತ ಮಾಡಿದೆ.
ಸಂಧ್ಯಾ ಅವರ ದುರಂತ ಸಾವಿಗೆ ಸಂಬಂಧಿಸಿದಂತೆ ಸಂಧ್ಯಾ ಸಹೋದರ ಪೊಲೀಸ್ ದೂರು ದಾಖಲಿಸಿದ್ದು, ಇದೀಗ ಕೇಸ್ ವಾಪಸ್ ಪಡೆಯುವಂತೆ ಆರೋಪಿ ಧನುಷ್ ಸಂಬಂಧಿಕರು ಕೋಟಿ ಕೋಟಿ ಆಫರ್ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ʼಕಾರು ಮಾಲೀಕರ ಕಡೆಯವರು ಬಂದು ಎಫ್ಐಆರ್ ಮಾಡಬೇಡಿ. ದುಡ್ಡು ಕೊಡ್ತೀವಿ ಅಂತಾ ಹೇಳಿದ್ದರು. ನಮಗೆ ದುಡ್ಡು ಬೇಡ, ಸಂಧ್ಯಾ ಬೇಕು. ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ಹಾಕಲು ಮುಂದಾಗಿದ್ದೆವು. ಮೊದಲು ಅಲ್ಲಿ ಎಫ್ಐಆರ್ ಹಾಕೋದಕ್ಕೆ ಹಿಂದೇಟು ಹಾಕಿದ್ದು, ಬಳಿಕ ಎಫ್ಐಆರ್ ದಾಖಲು ಮಾಡಿಕೊಂಡ್ರುʼ ಎಂದು ಸಂಧ್ಯಾ ಸಹೋದರ ಹೇಳಿದ್ದಾರೆ.