Thursday, 21st November 2024

Shiggaon By Election: ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಅಷ್ಟೇ ಸತ್ಯ ಎಂದ ಸಿದ್ದರಾಮಯ್ಯ

Shiggaon By Election

ಶಿಗ್ಗಾಂವಿ: ಯಡಿಯೂರಪ್ಪ (BS Yediyurappa) ಅವರನ್ನು ರಾಜಕೀಯವಾಗಿ ಮುಗಿಸಲು ಬಸವರಾಜ ಬೊಮ್ಮಾಯಿ (Basavaraja Bommai) ಪ್ಲಾನ್ ಮಾಡಿದ್ದರು. ಹಾಗಾಗಿ ಜತೆಯಲ್ಲಿದ್ದೇ ಯಡಿಯೂರಪ್ಪ ಅವರಿಗೆ ಟಕ್ಕರ್‌ ಕೊಟ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವ್ಯಂಗ್ಯವಾಡಿದರು.‌ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ (Shiggaon By Election) ಚಂದಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವಿಗೆ ಪ್ರಚಾರ ಕೈಗೊಂಡು ಅವರು ಮಾತನಾಡಿದರು.

ಮೋದಿ ಮಹಾನ್ ಸುಳ್ಳುಗಾರ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎಂದು ದೇವೇಗೌಡರು ಹೇಳಿದ್ದರು. ಈಗ ಇಬ್ಬರೂ ಭಾಯಿ ಭಾಯಿ ಆಗಿದ್ದಾರೆ. ನರೇಂದ್ರ ಮೋದಿ ಕುಟುಂಬ ರಾಜಕಾರಣದ ಬಗ್ಗೆ ಭರ್ಜರಿ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನಿಗೆ ಟಿಕೆಟ್ ನೀಡಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲವೇ ಮೋದಿಯವರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Ayodhya Ram Mandir: ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ; ಡ್ರೋನ್‍ನಲ್ಲಿ ಸೆರೆಯಾಯ್ತು ಈ ಅದ್ಭುತ ದೃಶ್ಯ!

ನಾನು ನಾಡಿನ ಜನತೆಯ ಪ್ರೀತಿ, ಆಗ್ರಹಗಳಿಗೆ ಬಗ್ಗುತ್ತೇನೆಯೇ ಹೊರತು ಬಿಜೆಪಿ ಮತ್ತು ದೇವೇಗೌಡರ ಷಡ್ಯಂತ್ರಗಳಿಗೆ ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ಎಲ್ಲಿಯವರೆಗೆ ರಾಜ್ಯದ ಜನರ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೂ ನಾನು ಬಿಜೆಪಿ ಕುತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಸಿಎಂ ಘೋಷಿಸಿದರು.

ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡ್ತೀನಾ?

40 ವರ್ಷಗಳಿಂದ ನಾನು ಮಂತ್ರಿಯಾಗಿದ್ದೀನಿ, ಮುಖ್ಯಮಂತ್ರಿಯಾಗಿದ್ದೀನಿ. ಸಣ್ಣ ಕಪ್ಪು ಚುಕ್ಕೆ ಕೂಡ ನನ್ನ ಮೇಲಿಲ್ಲ. ಆದರೂ ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡ್ತೀನಾ? ದುಡ್ಡು ಮಾಡಬೇಕು ಎಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ನನ್ನ ತಪ್ಪುಗಳು ಏನೇನೂ ಇಲ್ಲದ ಕಾರಣದಿಂದ ಸುಳ್ಳು ಆರೋಪ ಹೊರಿಸಿ ಷಡ್ಯಂತ್ರ ಹೆಣೆದು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ಗ್ಯಾರಂಟಿ ನನಗಿದೆ ಎಂದು ಸಿಎಂ ತಿಳಿಸಿದರು.

ಜಾತಿ-ಧರ್ಮದ ಹೆಸರಿನಲ್ಲಿ ದ್ವೇಷದ ರಾಜಕಾರಣ

ಚೆಕ್‌ನಲ್ಲಿ ಲಂಚ ಪಡೆದ ವಿಜಯೇಂದ್ರ ಈಗ ನನ್ನ ಬಗ್ಗೆ ಮಾತಾಡುತ್ತಿದ್ದಾರೆ. ವಿಜಯೇಂದ್ರ ಹೇಗೆ ದುಡ್ಡು ಹೊಡ್ಕಂಡು ಕೂತಿದ್ದ ಎನ್ನುವುದನ್ನು ಅವರದೇ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ ಕೇಳಿ. ಚೆಕ್‌ನಲ್ಲಿ ಲಂಚ ಪಡೆದ ವಿಜಯೇಂದ್ರ ಒಂದು ಕಡೆ, ಲೂಟಿ ರವಿ ಮತ್ತೊಂದು ಕಡೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಯೋಗ್ಯತೆ ನಾಡಿನ ಜನತೆಗೆ ಗೊತ್ತಿದೆ. ಅಧಿಕಾರ ಇದ್ದಾಗ ಕೇವಲ ಭ್ರಷ್ಟಾಚಾರ ಆಚರಿಸಿ, ಹಣ ಲೂಟಿ ಮಾಡಿ ಮನೆಗೆ ಹೋದರು. ಈಗ ಜಾತಿ-ಧರ್ಮದ ಹೆಸರಿನಲ್ಲಿ ಬಡವರನ್ನು ಪರಸ್ಪರ ಎತ್ತಿ ಕಟ್ಟಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನುಡಿದಂತೆ ನಡೆದಿದ್ದೇವೆ

ನಾವು ಹಿಂದೆಯೂ ಅಷ್ಟೆ, ಈಗಲೂ ಅಷ್ಟೆ. ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದ ನೈತಿಕತೆ ಆಧಾರದಲ್ಲಿ‌ ಮತ್ತೆ ಜನರ ಬಳಿಗೆ ಬಂದು ಮತ ಕೇಳುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಅವರ ಮಗನಿಗೆ ಓಟು ಕೇಳಲು ಯಾವ ನೈತಿಕತೆ ಇದೆ ಎಂದು ಸಿಎಂ ಪ್ರಶ್ನಿಸಿದರು.

ಮಾತೆತ್ತಿದರೆ ದಮ್ಮು, ತಾಕತ್ತು ಎನ್ನುವ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕಾಗಲಿ, ಕ್ಷೇತ್ರಕ್ಕಾಗಲಿ ಏನು ಕೊಟ್ಟಿದ್ದಾರೆ ಹೇಳಿ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ‌ ಶಕ್ತಿ ನೀಡಿದ್ದೇವೆ. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಬಡವರ ಖಾತೆಗಳಿಗೆ ನೇರವಾಗಿ 56 ಸಾವಿರ ಕೋಟಿ ರೂಪಾಯಿಯನ್ನು ಹಾಕಿದ್ದೇವೆ ಎಂದರು.

ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುವ ಬೊಮ್ಮಾಯಿ

ಬಸವರಾಜ ಬೊಮ್ಮಾಯಿಯನ್ನು ಶಕುನಿ ಎಂದು ಈಗಷ್ಟೆ ಎಲ್ಲಾ ಹೇಳಿದರು. ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುವ ಬೊಮ್ಮಾಯಿ ಅಂಥವರು ರಾಜಕಾರಣದಲ್ಲಿ ಇರಬಾರದು. ಆದ್ದರಿಂದ ಪಠಾಣ್ ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ತಿಳಿಸಿದರು.

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಭ್ಯರ್ಥಿಯನ್ನು ಆರಿಸುವ ಮತ್ತೊಂದು ಅವಕಾಶ ಶಿಗ್ಗಾವಿ ಕ್ಷೇತ್ರದ ಜನತೆಗೆ ಸಿಕ್ಕಿದೆ. ಇಲ್ಲಿನ‌ ಬಿಜೆಪಿ ಅಭ್ಯರ್ಥಿ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ಹಳ್ಳಿ ಬದುಕು ಗೊತ್ತಿಲ್ಲ. ಬಡವರ ಬದುಕು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು ಬಡವರ ಕಷ್ಟ, ಸುಖ ಗೊತ್ತಿರುವವರು‌. ಇವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಸಿಎಂ ತಿಳಿಸಿದರು.

ಈ ಸುದ್ದಿಯನ್ನೂ ಓದಿ | MB Patil: ಹೂಡಿಕೆ ಯೋಜನೆಗಳ ಕ್ಷಿಪ್ರ ಅನುಮೋದನೆಗೆ ಮೈಕ್ರೋಸಾಫ್ಟ್ ಕಂಪನಿಯಿಂದ ಸಾಫ್ಟ್‌ವೇರ್ ಅಭಿವೃದ್ಧಿ

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಈ ಬಾರಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅಷ್ಟೇ ಸತ್ಯ. ಇಲ್ಲಿ ಕಾಂಗ್ರೆಸ್ ಗೆದ್ದರೆ ನನಗೆ, ನನ್ನ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.