Tuesday, 5th November 2024

Parliament Winter Session: ನ. 25ರಿಂದ ಡಿ. 20ರ ತನಕ ಸಂಸತ್ತಿನ ಚಳಿಗಾಲದ ಅಧಿವೇಶನ

Parliament Winter Session

ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನ. 25ರಂದು ಆರಂಭವಾಗಿ ಡಿ. 20ರ ತನಕ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಸಂವಿಧಾನ ಅಂಗೀಕಾರದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಸೆಂಟ್ರಲ್ ಹಾಲ್‌ನಲ್ಲಿ ಅಧಿವೇಶನದ 2ನೇ ದಿನವಾದ ನ. 26ರಂದು ಸಂವಿಧಾನ ದಿನದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಸೇರಿದಂತೆ 4 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ನಂತರ ನಡೆಯುತ್ತಿರುವ ಮೊದಲ ಸಂಸತ್‌ ಅಧಿವೇಶನ ಇದಾಗಿರಲಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶ ನ. 23ರಂದು ಘೋಷಣೆಯಾಗಲಿದೆ.

“ಭಾರತ ಸರ್ಕಾರದ ಶಿಫಾರಸಿನ ಮೇರೆಗೆ 2024ರ ಚಳಿಗಾಲದ ಅಧಿವೇಶನಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ಕರೆಯುವ ಪ್ರಸ್ತಾಪವನ್ನು ರಾಷ್ಟ್ರಪತಿ ಅನುಮೋದಿಸಿದ್ದಾರೆ. 2024ರ ನ. 25ರಿಂದ ಡಿ. 20ರವರೆಗೆ ಅಧಿವೇಶನ ನಡೆಯಲಿದೆ. ನ. 26ರಂದು ಸಂವಿಧಾನ ದಿನವನ್ನು ಸಂವಿಧಾನ್ ಸದನದ ಸೆಂಟ್ರಲ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು” ಎಂದು ರಿಜಿಜು ಹೇಳಿದ್ದಾರೆ.

ವಕ್ಫ್ ಮಸೂದೆಯ ವಿವಾದಾತ್ಮಕ ತಿದ್ದುಪಡಿ ಮತ್ತು ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾಪದ ನಿಬಂಧನೆಗಳು ಈ ಅಧಿವೇಶನದಲ್ಲಿ ತೀವ್ರ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ವಕ್ಫ್ ಮಸೂದೆಯ ತಿದ್ದುಪಡಿಗಳನ್ನು ಪ್ರಸ್ತುತ ಆಡಳಿತಾರೂಢ ಬಿಜೆಪಿಯ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿ ಅಧ್ಯಯನ ಮಾಡುತ್ತಿದೆ. ಸಮಿತಿಯು ನ. 29ರೊಳಗೆ ತನ್ನ ವರದಿಯನ್ನು ಸಂಸತ್ತಿಗೆ ಸಲ್ಲಿಸಬೇಕಾಗಿದೆ.

ವಕ್ಫ್ ಮಸೂದೆಯಲ್ಲಿ ಏನೆಲ್ಲ ತಿದ್ದುಪಡಿ?

ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್‌ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪ್ರತಿಯೊಂದು ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು ಸೇರಿದಂತೆ ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವ ಬಗ್ಗೆ ಪ್ರಸ್ತಾವಿಸಲಾಗಿದೆ. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರಲು ಯೋಜಿಸಿದೆ.

ʻಒಂದು ರಾಷ್ಟ್ರ, ಒಂದು ಚುನಾವಣೆ’ ಎಂದರೇನು?

ಸರಳವಾಗಿ ಹೇಳುವುದಾದರೆ ಭಾರತದ ಲೋಕಸಭೆ ಮತ್ತು ಎಲ್ಲ ವಿಧಾನಸಭೆಗಳ ಸದಸ್ಯರ ಆಯ್ಕೆಗೆ ಮತದಾನ ಏಕಕಾಲದಲ್ಲಿ ನಡೆಸುವುದೇ ʻಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆ. ಏಕಕಾಲದಲ್ಲಿ ಸಾಧ್ಯವಾಗದಿದ್ದರೆ ಒಂದೇ ವರ್ಷದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಸದ್ಯ ಈ ಎರಡೂ ಮಸೂದೆಗಳಿಗೆ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಸಂಸತ್‌ನಲ್ಲಿಯೂ ಈ ಬಗ್ಗೆ ಕೋಲಾಹಾಲ ನಡೆಯುವ ಎಲ್ಲ ಸಾಧ್ಯತೆಯೂ ಇದೆ.

ಈ ಸುದ್ದಿಯನ್ನೂ ಓದಿ: One Nation One Election: ಒಂದು ದೇಶ ಒಂದು ಚುನಾವಣೆ ಅಪ್ರಾಯೋಗಿಕ ನೀತಿ ಎಂದು ಖರ್ಗೆ ಟೀಕೆ; ಬಿಜೆಪಿ ತಿರುಗೇಟು