Sunday, 24th November 2024

RTO Tumkur: ತುಮಕೂರು ಆರ್‌ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ; ವೆಹಿಕಲ್ ಇನ್‌ಸ್ಪೆಕ್ಟರ್‌ ಅಮಾನತಿಗೆ ಆಗ್ರಹ

RTO Tumkur

ತುಮಕೂರು: ತುಮಕೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದುರಾಡಳಿತ ಹೆಚ್ಚುತ್ತಿದ್ದು, ಕಳೆದ ಐದು ವರ್ಷಗಳಿಂದ ಠಿಕಾಣಿ ಹೂಡಿರುವ ಮೋಟಾರು ವಾಹನ ನಿರೀಕ್ಷಕ (Motor Vehicle Inspector) ಸದ್ರುಲ್ಲಾ ಷರೀಫ್ ಅವರನ್ನು ಅಮಾನತು ಮಾಡುವಂತೆ ತುಮಕೂರು ನಗರ ಮತ್ತು ತಾಲೂಕು ಲಾರಿ ಮಾಲೀಕರ ಸಂಘವು ಸಾರಿಗೆ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದೆ.

ಆರ್‌ಟಿಒ ಕಚೇರಿಯನ್ನು ಭ್ರಷ್ಟಾಚಾರ ತಾಣವನ್ನಾಗಿ ಮಾರ್ಪಡಿಸಿಕೊಂಡಿರುವ ಸದ್ರುಲ್ಲಾ ಷರೀಫ್ ಅವರು ಖಾಸಗಿ ವ್ಯಕ್ತಿಗಳ ಮೂಲಕ ಡಿಎಲ್, ಎಫ್‌ಸಿಗಳನ್ನು ಕಚೇರಿಯ ಹೊರಗಡೆ ಮಾಡುತ್ತಿದ್ದಾರೆ. ಶಾಲಾ-ಕಾಲೇಜು, ವಾಣಿಜ್ಯ ವಾಹನಗಳನ್ನು ಆರ್‌ಟಿಒ ಕಚೇರಿಗೆ ಕರೆಸದೇ, ಶಾಲೆಗಳ ಬಳಿ ಹಾಗೂ ವಾಣಿಜ್ಯ ವಾಹನಗಳು ಇರುವ ಸ್ಥಳಕ್ಕೆ ಹೋಗಿ ಎಫ್‌ಸಿ (ಫಿಟ್ನೆಸ್ ಸರ್ಟಿಫಿಕೇಟ್) ಗಳನ್ನು ನೀಡುತ್ತಿದ್ದು, ಕಾನೂನು ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರಿ ನೌಕರರಲ್ಲದ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಡಿ.ಎಲ್, ಎಫ್.ಸಿ. ಅನುಪಯುಕ್ತ ವಾಹನಗಳ ವರದಿ ತೆಗೆಸಿ ತುಮಕೂರು, ಕುಣಿಗಲ್, ಶಿರಾ ಹಾಗೂ ಗುಬ್ಬಿ ತಾಲೂಕುಗಳ ಕ್ರಷರ್‌ಗಳಿಂದ ಅಧಿಕ ಭಾರ ಸಾಗಾಣಿಕೆಗೆ ಹಣ ಪಡೆಯುತ್ತಿದ್ದಾರೆ ಎಂದು ತುಮಕೂರು ನಗರ ಮತ್ತು ತಾಲೂಕುಗಳ ಲಾರಿ ಮಾಲೀಕರ ಸಂಘ ಆರೋಪಿಸಿದೆ.

ಕಚೇರಿಯಲ್ಲಿರುವ ಅವರ ಕೊಠಡಿಯಲ್ಲಿ ಅನೇಕ ಖಾಸಗಿ ವ್ಯಕ್ತಿಗಳನ್ನು ಕೂರಿಸಿಕೊಂಡು ಸಾರಿಗೆ ಕಚೇರಿಗೆ ಬರುವ ವಾಣಿಜ್ಯ ವಾಹನಗಳಿಗೆ ವಾಹನ ಪರಿಶೀಲಿಸದೆ ಹಣ ಪಡೆದು ಎಫ್.ಸಿ ನೀಡುತ್ತಿದ್ದಾರೆ. ಖಾಸಗಿ ವ್ಯಕ್ತಿಗಳಿಗೆ ತಮ್ಮ ಕೆಲಸಗಳನ್ನು ಹಂಚಿ ಮೇಲುಸ್ತುವಾರಿ ಮಾಡುತ್ತಿದ್ದಾರೆ. ಹೀಗಾಗಿ ಸದ್ರುಲ್ಲಾ ಷರೀಫ್ ಅವರನ್ನು ಅಮಾನತುಗೊಳಿಸಿ, ವಿಚಾರಣೆ ನಡೆಸುವಂತೆ ಸಾರಿಗೆ ಆಯುಕ್ತರಿಗೆ ಕಳೆದ ಆಗಸ್ಟ್ ತಿಂಗಳಲ್ಲಿ ತುಮಕೂರು ನಗರ ಮತ್ತು ಲಾರಿ ಮಾಲೀಕರ ಸಂಘ ಬರೆದಿದ್ದರೂ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ.

ಕಿರಿಯ ಮೋಟಾರು ವಾಹನ ನಿರೀಕ್ಷಕರಾಗಿ ಬಂದ ಸದ್ರುಲ್ಲಾ ಷರೀಫ್, ಹಿರಿಯ ಮೋಟಾರು ವಾಹನ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ಕಳೆದ ಐದು ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇವರನ್ನು ಕೂಡಲೇ ಅಮನಾತು ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.

ಈ ಸುದ್ದಿಯನ್ನೂ ಓದಿ | Viral Video: ಅಬ್ಬಾ…ರೈಲಿನಲ್ಲಿ ಇದೆಂಥಾ ಸ್ಟಂಟ್‌! ನೋಡುಗರು ಫುಲ್‌ ಶಾಕ್‌-ವಿಡಿಯೊ ಇದೆ