ಜಬಲ್ಪುರ: ಮಾರುತಿ ವ್ಯಾನ್ (Maruti van) ಒಂದಕ್ಕೆ ಗ್ಯಾಸ್ ತಂಬಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಬಳಿಕ ಅದು ಸ್ಪೋಟಗೊಂಡ (Jabalpur Van Explode Inciden) ಭೀಕರ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದ (Jabalpur) ಕಾಟಂಗಿ ಬೈಪಾಸ್ ಬಳಿ ಸೋಮವಾರ (ನ.05) ರಂದು ವರದಿಯಾಗಿದೆ. ಈ ಸ್ಪೋಟದ ಬೆನ್ನಲ್ಲೇ ಘಟನಾ ಸ್ಥಳದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಆಸುಪಾಸಿನ ಪ್ರದೇಶದಲ್ಲಿ ಟೆನ್ಸ್ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಇನ್ನು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
ಆದರೆ, ಸಂಚಾರ ನಿಬಿಡ ರಸ್ತೆ ಬದಿಯಲ್ಲಿ ಈ ಸ್ಪೋಟ ಸಂಭವಿಸಿದ ಕಾರಣ ಘಟನೆಯ ಬಳಿಕ ಸುತ್ತಮುತ್ತ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ವ್ಯತ್ಯಯವಾಗಿತ್ತು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಇಲ್ಲಿ ಹೊತ್ತಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಸುತ್ತೆಲ್ಲಾ ವ್ಯಾಪಿಸಿಕೊಂಡಿತು ಮತ್ತು ಬೆಂಕಿಯ ತೀವ್ರತೆಗೆ ವ್ಯಾನ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಾಹಿತಿ ಲಭಿಸಿದ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಘಟಕದ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸುವಲ್ಲಿ ಹರಸಾಹಸಪಟ್ಟರು. ಅದೃಷ್ಟವಶಾತ್ ಈ ದುರ್ಘಟನೆ ಯಾವುದೇ ಪ್ರಾಣಹಾನಿಗೆ ಕಾರಣವಾಗಿಲ್ಲವಾದರೂ, ಗ್ಯಾಸ್ ಮರುಪೂರಣ ಸಂದರ್ಭದಲ್ಲಿನ ಸುರಕ್ಷತೆಗಳ ಕರಿತಾಗಿ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನೆಗೆ ನಿಖರವಾದ ಕಾರಣ ಏನೆಂಬುದರ ಬಗ್ಗೆ ತಿಳಿದುಕೊಳ್ಳಲು ತನಿಖೆ ಪ್ರಾರಂಭಗೊಂಡಿದೆ.
ಓಮ್ನಿ ಕಾರಿಗೆ ಬೆಂಕಿ ಹತ್ತಿಕೊಂಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿರುವಂತೆ – ಓಮ್ನಿ ಹೊತ್ತಿ ಉರಿಯುತ್ತಿದ್ದು ಸುತ್ತಲೂ ಜನರು ಆತಂಕಿತರಾಗಿ ನೋಡುತ್ತಿದ್ದಾರೆ ಮತ್ತು ಒಂದು ಹಂತದಲ್ಲಿ ಅಲ್ಲೊಂದು ಸ್ಪೋಟ ಸಂಭವಿಸುತ್ತದೆ, ಅಲ್ಲಿಗೆ ಈ ವಿಡಿಯೋ ಕೊನೆಗೊಂಡಿದೆ.
ವಾಹನಗಳಿಗೆ ಬೆಂಕಿ ಹತ್ತಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆಂಬಂತಾಗಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲೂ ಕಳೆದ ಅಕ್ಟೋಬರ್ 30ರಂದು ಟ್ರಕ್ ಒಂದಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಜೀವಂತ ಸುಟ್ಟು ಕರಕಲಾಗಿದ್ದರು. ಈ ಟ್ರಕ್ ಕರ್ನಾಟಕದ ಬಿಜಾಪುರದಿಂದ ಹರ್ಯಾಣದ ಫರಿದಾಬಾದ್ ಗೆ ನೀರುಳ್ಳಿಯನ್ನು ಸಾಗಿಸುತ್ತಿತ್ತು.
ಅಕ್ಟೋಬರ್ 15ರಂದು ನಡೆದ ಇನ್ನೊಂದು ದುರ್ಘಟನೆಯಲ್ಲಿ, ನಿಂತಿದ್ದ ಬಸ್ ಒಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡ ಪರಿಣಾಮ ಬಸ್ ಹೊತ್ತಿ ಉರಿದ ಘಟನೆ ಗ್ವಾಲಿಯರ್ ನ ಪಾಂಡವ್ ಬಸ್ ನಿಲ್ದಾಣದಲ್ಲಿ ಸಂಭವಿಸಿತ್ತು, ಅದೃಷ್ಟವಶಾತ್ ಈ ದುರ್ಘಟನೆಯಲ್ಲೂ ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ.
ಇದನ್ನೂ ಓದಿ: ಬಿಡಿಗಾಸಿಲ್ಲದಿದ್ರೂ ಮೂರು-ಮೂರು ಜನ ಗರ್ಲ್‌ಫ್ರೆಂಡ್ಸ್… ಇಂಪ್ರೆಸ್ ಮಾಡೋಕೆ ಕೊಡ್ಲೇ ಬೇಕು ಕಾಸ್ಟ್ಲಿ ಗಿಫ್ಟ್- ತಲೆಕೆಟ್ಟ ಯುವಕ ಮಾಡಿದ್ದೇನು ಗೊತ್ತಾ?