Thursday, 7th November 2024

Coconut Oil Benefits: ಸೌಂದರ್ಯ ವರ್ಧಿಸುವ ಕೊಬ್ಬರಿ ಎಣ್ಣೆ ಬಗ್ಗೆ ಇಲ್ಲಿದೆ ಮತ್ತಷ್ಟು ಮಾಹಿತಿ

Coconut Oil Benefits

ಇತ್ತಿಚೆಗಷ್ಟೇ ದೀಪಾವಳಿ ಹಬ್ಬ ಮುಗಿಸಿದ್ದೇವೆ. ಎಲ್ಲರೂ ಅಭ್ಯಂಗ ಸ್ನಾನ ಮಾಡಿದ್ದೇವೆ. ನರಕ ಚತುರ್ದಶಿ, ಯುಗಾದಿ ಮಾತ್ರವಲ್ಲ ಹಿಂದೂ ಶಾಸ್ತ್ರದಲ್ಲಿ ಹೆಚ್ಚಿನ ಹಬ್ಬಹರಿದಿನಗಳಲ್ಲಿ ಅಭ್ಯಂಗ ಸ್ನಾನ (Abhyanga bath) ಮಾಡುವುದು ವಾಡಿಕೆ. ಎಣ್ಣೆ ಸ್ನಾನದ (Coconut Oil Benefits) ಈ ಕ್ರಮ ಕೇವಲ ಚರ್ಮದ ಆರೈಕೆ (Skin care) ಮಾಡುತ್ತೆ ಮಾತ್ರವಲ್ಲ ಇಡೀ ದೇಹದ ಆರೋಗ್ಯ ರಕ್ಷಣೆಯನ್ನೂ ಮಾಡುತ್ತದೆ.

ಎಣ್ಣೆ, ಜಿಡ್ಡು, ಬಿಸಿ ನೀರು ಎನ್ನುವ ರಗಳೆಯೇ ಬೇಡ, ನಮ್ಮ ಚರ್ಮದ ಪೋಷಣೆಗೆ ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಮುಗಳೇ ಸಾಕು ಎನ್ನುವ ಮನೋಭಾವ ಇಂದಿನದ್ದು. ಇಂತಹ ಆಧುನಿಕ ಪರಿಹಾರಗಳೆಲ್ಲ ಇಲ್ಲದ ಕಾಲದಲ್ಲೂ ನಮ್ಮ ಅಜ್ಜ- ಅಜ್ಜಿಯರ ಚರ್ಮ ಮಿರಮಿರನೆ ಮಿಂಚುತ್ತಿತ್ತಲ್ಲ, ಅದು ಹೇಗೆ, ಅವರೇನು ಮಾಡುತ್ತಿದ್ದರು ಎಂಬುದನ್ನು ಗಮನಿಸಿದ್ದೀರಾ?

ಅವರ ಜೀವನಶೈಲಿ, ಆಹಾರ ಎಲ್ಲವೂ ಭಿನ್ನವಾಗಿತ್ತು ಎಂಬುದು ನಿಜವಾಗಿದ್ದರೂ, ಅವರ ಕೆಲವು ಸರಳ ಕ್ರಮಗಳು ದೀರ್ಘಕಾಲದವರೆಗೆ ಬೇಕಾದ ಕಾಳಜಿಯನ್ನು ನಿರ್ವಹಿಸುತ್ತಿದ್ದವು. ಇದರಲ್ಲಿ ಚರ್ಮಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಚ್ಚುವುದು ಕೂಡ ಒಂದು.

ತೆಂಗಿನ ಎಣ್ಣೆಯನ್ನು ಕೇವಲ ಮುಖಕ್ಕೆ ಮಾತ್ರವಲ್ಲ, ಇಡೀ ದೇಹಕ್ಕೆ ಲೇಪಿಸುತ್ತಿದ್ದರಿಂದ ಅವರ ಕೈಕಾಲಿನ ಚರ್ಮವೂ ದೀರ್ಘಕಾಲದವರೆಗೆ ಸುಕ್ಕಾಗದೆ ಉಳಿಯುತ್ತಿತ್ತು. ಈ ಹಳೆಯ ಮಂತ್ರ ಇಂದಿಗೂ ಮಾವಿನಕಾಯಿ ಉದುರಿಸುತ್ತದಾ ಎಂದು ಕೇಳಿದರೆ, ಪ್ರಯೋಗ ಮಾಡಿ ನೋಡುವುದರಲ್ಲಿ ನಷ್ಟವೇನು ಇಲ್ಲವಲ್ಲ !

Coconut Oil Benefits

ಏನು ಪ್ರಯೋಜನ?

ರಾತ್ರಿ ಮಲಗುವ ಮುಂಚೆ ತ್ವಚೆಗೆ ಕೊಬ್ಬರಿ ಎಣ್ಣೆ ಮಸಾಜ್‌ ಮಾಡುವುದು ಅತ್ಯುತ್ತಮ. ಇದು ಚರ್ಮವನ್ನು ಕಳೆಗುಂದದಂತೆ ಮಾಡುತ್ತದೆ. ಅಲ್ಲದೇ ಚರ್ಮದ ಮೃದುತ್ವವನ್ನು ಕಾಪಾಡುತ್ತದೆ. ಬಿಗಿಯಾದ, ಕಾಂತಿಯುಕ್ತ ತ್ವಚೆಯನ್ನು ನೀಡುತ್ತದೆ. ಮಲಗುವ ಮುನ್ನ ಮುಖಕ್ಕೆ ಮಾಡುವಂಥ ಒಳ್ಳೆಯ ಮಸಾಜ್‌ನಿಂದ ಮನಸ್ಸಿನ ಒತ್ತಡವೂ ಕಡಿಮೆಯಾಗಿ ಕಣ್ತುಂಬಾ ನಿದ್ದೆಯೂ ಬರುತ್ತದೆ.

ತ್ವಚೆ ಮೇಲೆ ತೆಂಗಿನ ಎಣ್ಣೆ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ವೃದ್ಧಿಯಾಗಿ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಚರ್ಮದ ಮೇಲ್ಮೈ ಒಣಗದಂತೆ ಕಾಪಾಡಿ, ಚರ್ಮ ಸುಕ್ಕಾಗದಂತೆ ತಡೆಯುತ್ತದೆ.

ಚರ್ಮದ ಮೇಲಿನ ದದ್ದು, ತುರಿಕೆ, ಕೆಂಪಾಗುವುದು ಮೊದಲಾದ ಕಿರಿಕಿರಿಗಳನ್ನು ಶಮನ ಮಾಡುತ್ತದೆ.

ಎಣ್ಣೆಯಲ್ಲಿರುವ ಲಾರಿಕ್ ಆಮ್ಲವು ಚರ್ಮದಲ್ಲಿ ಕೊಲಾಜಿನ್‌ ಉತ್ಪತ್ತಿಯಾಗಲು ನೆರವಾಗುತ್ತದೆ. ಇದರಿಂದ ಚರ್ಮದ ಮೇಲಿನ ಸೂಕ್ಷ್ಮ ನೆರಿಗೆಗಳು ಕಡಿಮೆಯಾಗಿ, ತ್ವಚೆ ಬಿಗಿಯಾಗುತ್ತದೆ. ಕಪ್ಪು ಕಲೆಗಳು ದೂರವಾಗಿ ಮುಖ ಕಾಂತಿಯುಕ್ತವಾಗುತ್ತದೆ.

ರಾತ್ರಿ ಮಲಗುವ ಮುನ್ನ ಮಸಾಜ್‌ಗೆ ಕೊಬ್ಬರಿ ಎಣ್ಣೆಯೇ ಆಗಬೇಕೆಂದಿಲ್ಲ. ಅವರವರ ಚರ್ಮಕ್ಕೆ ಹೊಂದುವಂಥ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆ ಚರ್ಮಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇವುಗಳಲ್ಲಿ ಚರ್ಮಕ್ಕೆ ಪೋಷಣೆ ನೀಡಿ ಪುನರುಜ್ಜೀವನಗೊಳಿಸುವ ಗುಣಗಳು ಹೆಚ್ಚಾಗಿವೆ. ಮಾತ್ರವಲ್ಲ ಉತ್ಕರ್ಷಣ ನಿರೋಧಕಗಳು ಹೆಚ್ಚಿದ್ದಷ್ಟೂ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸುಲಭವಾಗುತ್ತದೆ.

Coconut Oil Benefits

ಮಾಡುವುದು ಹೇಗೆ?

ಮಲಗುವ ಮುನ್ನ ಮುಖದಲ್ಲಿ ಚೆನ್ನಾಗಿ ತೊಳೆಯಬೇಕು. ಇದಕ್ಕಾಗಿ ಯಾವುದಾದರೂ ಮೃದುವಾದ ಕ್ಲೆನ್ಸರ್‌ ಅಥವಾ ಕಡಲೆ ಹಿಟ್ಟು ಬಳಸಿದರೂ ಸಾಕು. ಕಟುವಾದ ರಾಸಾಯನಿಕಗಳು ಚರ್ಮಕ್ಕೆ ಹಾನಿ ಉಂಟು ಮಾಡುತ್ತವೆ.
ಬಳಿಕ ಕೊಬ್ಬರಿ ಎಣ್ಣೆಯನ್ನು ಕೊಂಚ ಬಿಸಿ ಮಾಡಿ. ಇದಕ್ಕಾಗಿ ತೈಲವನ್ನು ನೇರವಾಗಿ ಬಿಸಿ ಮಾಡುವುದು ಸರಿಯಲ್ಲ. ಪಾತ್ರೆಯೊಂದರಲ್ಲಿ ನೀರನ್ನು ಚೆನ್ನಾಗಿ ಬಿಸಿ ಮಾಡಿ. ಅದರೊಳಗೆ ಎಣ್ಣೆಯ ಪಾತ್ರೆಯನ್ನಿಟ್ಟು ತುಸು ಬೆಚ್ಚಗೆ ಮಾಡಿದರೆ ಸಾಕು. ಇದರಿಂದ ಚರ್ಮಕ್ಕೆ ಹೀರಿಕೊಳ್ಳಲು ಸುಲಭವಾಗುತ್ತದೆ.

ಬಳಿಕ ಎಣ್ಣೆಯನ್ನು ಮೇಲ್ಮುಖವಾಗಿ ಮತ್ತು ವೃತ್ತಾಕಾರವಾಗಿ ಮುಖದ ಮೇಲೆ ಮಸಾಜ್‌ ಮಾಡಿ. ಇದರಿಂದ ಸಡಿಲವಾಗಿ ಕೆಳಗೆ ಜಾರಿರುವ ಚರ್ಮ ಬಿಗಿಯಾಗುತ್ತದೆ. ಕೆನ್ನೆಯ ಕೆಳಭಾಗ, ಕಣ್ಣಿನ ಕೆಳಗೆ… ಹೀಗೆ ಸಡಿಲವಾಗಿರುವ ಭಾಗವನ್ನು ನಯವಾಗಿ ಮಸಾಜ್‌ ಮಾಡಿ. ಇದನ್ನು ಗಡಿಬಿಡಿಯಲ್ಲಿ ಮಾಡಬಾರದು.

Hair Care Tips: ನೀಳವಾದ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಹೂವುಗಳನ್ನು ಬಳಸಿ ನೋಡಿ!

ಮಸಾಜ್‌ ಪ್ರಕ್ರಿಯೆಗೆ ಹತ್ತು ನಿಮಿಷವಾದರೂ ಮೀಸಲಿಡಿ. ಇದನ್ನು ಕನಿಷ್ಠ ವಾರಕ್ಕೊಮ್ಮೆ ಅಥವಾ ಎರಡು ಬಾರಿ ತಪ್ಪದೆ ಮಾಡಿ. ದಿನವೂ ತೆಂಗಿನ ಎಣ್ಣೆಯಲ್ಲಿ ಮುಖಕ್ಕೆ ಮಸಾಜ್ ಮಾಡಿದರೆ ನೆಮ್ಮದಿಯ ನಿದ್ದೆ ಕಣ್ಣಿಗಾದರೆ, ಅರಳಿ ನಗುವ ಸರದಿ ತ್ವಚೆಯದ್ದಾಗುವುದು.