ದುಬೈ: ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ(virat kohli) ನೂತನ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ(ICC Test rankings) ಭಾರೀ ಕುಸಿತ ಕಂಡಿದ್ದಾರೆ. ಬರೋಬ್ಬರಿ 8 ಸ್ಥಾನಗಳ ಕುಸಿತದೊಂದಿಗೆ 22ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಮುಂಬೈ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ರಿಷಭ್ ಪಂತ್(750) ಐದು ಸ್ಥಾನಗಳ ಜಿಗಿತದೊಂದಿಗೆ 6ನೇ ಸ್ಥಾನಕ್ಕೇರಿದ್ದಾರೆ. ಶುಭಮನ್ ಗಿಲ್ 4 ಸ್ಥಾನಗಳ ಪ್ರಗತಿಯೊಂದಿಗೆ 16ನೇ ಸ್ಥಾನ ಪಡೆದಿದ್ದಾರೆ.
ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್‌ನಲ್ಲಿ ಗಳಿಸಿದ್ದು ಕೇವಲ 93 ರನ್. ಇದು ಅವರ ಬ್ಯಾಟಿಂಗ್ ಶ್ರೇಯಾಂಕ ಕುಸಿತಕ್ಕೆ ಕಾರಣ. ಕಳೆದ 10 ವರ್ಷದ ಕ್ರಿಕೆಟ್ ಇತಿಹಾಸದಲ್ಲಿ ಕೊಹ್ಲಿ ಇಷ್ಟೊಂದು ಕೆಳ ಮಟ್ಟದ ಸ್ಥಾನ ಪಡೆದಿದ್ದು ಇದೇ ಮೊದಲ ಬಾರಿ. 2014ರಲ್ಲಿ ಒಮ್ಮೆ 24ನೇ ಸ್ಥಾನ ಪಡೆದಿದ್ದರು. ನಾಯಕ ರೋಹಿತ್ ಶರ್ಮಾ(629) ಕೂಡ 2 ಸ್ಥಾನಗಳ ನಷ್ಟದೊಂದಿಗೆ 26ನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಯಶಸ್ವಿ ಜೈಸ್ವಾಲ್(777) ಒಂದು ಸ್ಥಾನದ ಕುಸಿತ ಕಂಡು 4ನೇ ಸ್ಥಾನ ಪಡೆದಿದ್ದಾರೆ. ಜೋ ರೂಟ್(903), ಕೇನ್ ವಿಲಿಯಮ್ಸನ್(804), ಹ್ಯಾರಿ ಬ್ರೂಕ್(778) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ 2 ಸ್ಥಾನಗಳ ಏರಿಕೆ ಕಂಡರೆ, ಆರ್. ಅಶ್ವಿನ್ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಸದ್ಯ ಜಡೇಜಾ(802) 6ನೇ, ಆರ್.ಅಶ್ವಿನ್(815) 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತಿಮ ಪಂದ್ಯವನ್ನಾಡ ಜಸ್‌ಪ್ರೀತ್ ಬುಮ್ರಾ ಈ ಹಿಂದಿನಂತೆ ಮೂರನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ.ಭಾರತೀಯರಾದ ರವೀಂದ್ರ ಜಡೇಜಾ(432) ಮತ್ತು ಆರ್. ಅಶ್ವಿನ್(296) ಕ್ರಮವಾಗಿ ಮೊದಲೆರಡು ಸ್ಥಾನದಲ್ಲೇ ಉಳಿದಿದ್ದಾರೆ.
ಇದನ್ನೂ ಓದಿ IND vs SA: ಸಂಜು-ಅಭಿಷೇಕ್ ಓಪನರ್ಸ್, ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಟಾಪ್-5 ಬ್ಯಾಟರ್
1. ಜೋ ರೂಟ್-ಇಂಗ್ಲೆಂಡ್
2. ಕೇನ್ ವಿಲಿಯಮ್ಸನ್-ನ್ಯೂಜಿಲೆಂಡ್
3. ಹ್ಯಾರಿ ಬ್ರೂಕ್-ಇಂಗ್ಲೆಂಡ್
4. ಯಶಸ್ವಿ ಜೈಸ್ವಾಲ್-ಭಾರತ
5. ಸ್ಟೀವನ್ ಸ್ಮಿತ್-ಆಸ್ಟ್ರೇಲಿಯಾ
ಟಾಪ್-5 ಬೌಲರ್
1. ಕಗಿಸೊ ರಬಾಡ-ದಕ್ಷಿಣ ಆಫ್ರಿಕಾ
2. ಜೋಶ್ ಹ್ಯಾಜಲ್‌ವುಡ್-ಆಸ್ಟ್ರೇಲಿಯಾ
3. ಜಸ್‌ಪ್ರೀತ್ ಬುಮ್ರಾ-ಭಾರತ
4. ಪ್ಯಾಟ್ ಕಮಿನ್ಸ್-ಆಸ್ಟ್ರೇಲಿಯಾ
5. ಆರ್.ಅಶ್ವಿನ್-ಭಾರತ