Friday, 22nd November 2024

Cuddle cap: ವಿಮಾನ ನಿಲ್ದಾಣದಲ್ಲಿ ತಬ್ಬಿಕೊಳ್ಳೋಕೆ ಮೂರೇ ನಿಮಿಷ ಅವಕಾಶ!

Cuddle cap

ನ್ಯೂಜಿಲ್ಯಾಂಡ್:‌ ವಿಮಾನ ನಿಲ್ದಾಣಗಳಲ್ಲಿ (Airport) ದೂರ ಪ್ರಯಾಣ ಹೊರಟ ತಮ್ಮ ಬಂಧು- ಗೆಳೆಯರನ್ನು ಅಪ್ಪಿಕೊಂಡು (Cuddling) ಬೀಳ್ಕೊಡುವವರ ದೃಶ್ಯಗಳು ಬಹಳ ಸಾಮಾನ್ಯ. ಏರ್‌ಪೋರ್ಟ್‌ನ ಡ್ರಾಪ್-‌ ಆಫ್‌ ಜಾಗಗಳು, ಕಾರ್‌ ಪಾರ್ಕಿಂಗ್‌ (Car parking) ಲಾಟ್‌ಗಳು ಇಂಥವರಿಂದ ತುಂಬಿ ಹೋಗಿರುವುದೂ ಉಂಟು. ಸದ್ಯ ಕೆಲವು ಏರ್‌ಪೋರ್ಟ್‌ಗಳಲ್ಲಿ, ಇಂಥವರಿಂದಾಗಿ ಟ್ರಾಫಿಕ್ ಜಾಮ್‌ (Traffic jam) ಉಂಟಾಗುತ್ತಿದೆಯಂತೆ! ಇದರಿಂದ ಪಾರಾಗಲು ನ್ಯೂಜಿಲ್ಯಾಂಡ್‌ನ ಒಂದು ಏರ್‌ಪೋರ್ಟ್‌ ಕುತೂಹಲಕಾರಿ ಉಪಕ್ರಮ (Cuddle cap) ಶುರುಮಾಡಿದೆ.

ನ್ಯೂಜಿಲೆಂಡ್ ನಗರವಾದ ಡ್ಯುನೆಡಿನ್‌ನಿಂದ ಹೊರಡುವ ಪ್ರಯಾಣಿಕರಿಗೆ ಇನ್ನು ಮುಂದೆ ವಿಮಾನ ನಿಲ್ದಾಣದ ಡ್ರಾಪ್-ಆಫ್ ಪ್ರದೇಶದಲ್ಲಿ ʼವಿದಾಯ ಅಪ್ಪುಗೆʼಗೆ ಮೂರು-ನಿಮಿಷಗಳ ಸಮಯ ಮಿತಿ ವಿಧಿಸಲಾಗಿದೆ. ಇದಕ್ಕೆ ಕಾರಣ ನೀವು ಗಂಟೆಗಟ್ಟಲೆ ಅಪ್ಪಿಕೊಂಡು ನಿಂತರೆ ಉಳಿದವರಿಗೆ ಟ್ರಾಫಿಕ್ ಜಾಮ್‌ಗೆ ಉಂಟಾಗಿ ಸಮಸ್ಯೆಯಾಗುತ್ತದೆ ಎಂಬುದು.

“ಗರಿಷ್ಠ ಅಪ್ಪುಗೆಯ ಸಮಯ ಮೂರು ನಿಮಿಷಗಳು” ಎಂದು ಟರ್ಮಿನಲ್‌ನ ಹೊರಗೆ ಎಚ್ಚರಿಕೆ ಫಲಕ ಹಾಕಲಾಗಿದೆ! ಇನ್ನೂ ಗಾಢವಾದ ವಿದಾಯ ಬಯಸುವವರು ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳಕ್ಕೆ ಹೋಗಬೇಕಂತೆ. ಅದೂ ಫಲಕದಲ್ಲಿದೆ. ವಿಮಾನ ನಿಲ್ದಾಣದ ಹೊರಗೆ ಮರುವಿನ್ಯಾಸಗೊಳಿಸಲಾದ ಪ್ರಯಾಣಿಕರ ಡ್ರಾಪ್-ಆಫ್ ಪ್ರದೇಶದಲ್ಲಿ ಈ ಸೆಪ್ಟೆಂಬರ್‌ನಲ್ಲಿ ಈ ʼಕಡಲ್ ಕ್ಯಾಪ್ʼ ಅನ್ನು ವಿಧಿಸಲಾಗಿದೆ ಎಂದು ಅಲ್ಲಿನ ಸಿಇಒ ಡಾನ್ ಡಿ ಬೊನೊ ಪ್ರೆಸ್‌ಗೆ ತಿಳಿಸಿದ್ದಾರೆ.

“ತ್ವರಿತ ವಿದಾಯ”ಕ್ಕೆ ಸೂಚಸುವ ಈ ಫಲಕ ಸೋಶಿಯಲ್‌ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. “ಇದು ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ. ನಾವು ಆಪ್ತರನ್ನು ಎಷ್ಟು ಸಮಯ ತಬ್ಬಿಕೊಳ್ಳಬಹುದು ಎಂಬುದನ್ನು ನಿರ್ಣಯಿಸಲು ನೀವು ಯಾರು?” ಎಂದು ಹಲವರು ರೇಗಿದ್ದಾರೆ. ʼಇದು ಅಮಾನವೀಯʼ ಎಂದು ಬಹು ಮಂದಿ ಹೇಳಿದ್ದಾರೆ.

ಕೆಲವರು ಇದನ್ನು ಸ್ವಾಗತಿಸಿದ್ದಾರೆ. ಮೂರು ನಿಮಿಷ ತಬ್ಬುಗೆಗೆ ಧಾರಾಳವಾಗಿ ಸಾಕು ಎಂಬುದು ಹಲವರ ಅಭಿಪ್ರಾಯ. ಅದಕ್ಕಿಂತ ಹೆಚ್ಚು ಅಪ್ಪುಗೆ ಬೇಕಿದ್ದರೆ ಮನೆಯಲ್ಲೇ ಆಚರಿಸಿಕೊಳ್ಳಬಹುದು ಎಂದವರೂ ಇದ್ದಾರೆ. ಡ್ಯುನೆಡಿನ್‌ನ ವಿಮಾನ ನಿಲ್ದಾಣ ನ್ಯೂಜಿಲೆಂಡ್‌ನ ಸೌತ್ ಐಲ್ಯಾಂಡ್‌ನಲ್ಲಿದೆ. 1,35,000 ಜನಸಂಖ್ಯೆಯ ನಗರವಿದು.

“ಮೂರು ನಿಮಿಷಗಳು ನಿಮ್ಮ ಪ್ರೀತಿಪಾತ್ರರಿಗೆ ವಿದಾಯ ಹೇಳಲು ಧಾರಾಳವಾಗಿ ಸಾಕು. 20 ಸೆಕೆಂಡುಗಳ ಅಪ್ಪುಗೆಯೇ ನಮ್ಮ ಆರೋಗ್ಯವನ್ನು ಹೆಚ್ಚಿಸುವ ಹಾರ್ಮೋನುಗಳಾದ ಆಕ್ಸಿಟೋಸಿನ್ ಮತ್ತು ಸಿರೊಟೋನಿನ್ ಅನ್ನು ಬಿಡುಗಡೆ ಮಾಡಲು ಸಾಕಾಗುತ್ತದೆ!” ಎಂದು ಸಿಇಒ ಡಿ ಬೊನೊ ಹೇಳುತ್ತಾರೆ.

ಇದನ್ನೂ ಓದಿ: Viral Video: ಮಲಗಿದ್ದ ಹುಡುಗಿಯ ಮುಖ ಸೀಳಿದ; ಬೆಚ್ಚಿ ಬೀಳಿಸುವ ವಿಡಿಯೊ ವೈರಲ್!