Friday, 22nd November 2024

Hair Care Tips: ಅಡುಗೆಗೆ ಮಾತ್ರವಲ್ಲ ಚಳಿಗಾಲದಲ್ಲಿ ಕೂದಲಿನ ಆರೈಕೆಗೂ ಇರಲಿ ಕರಿಬೇವಿನ ಸೊಪ್ಪು!

Hair Care Tips

ಚಳಿಗಾಲ (Winter Season) ಬಂತೆಂದರೆ ಸಾಕು ಕೂದಲಿನ ನಾನಾ ಸಮಸ್ಯೆಗಳೂ (hair problem) ಕಾಣಿಸಿಕೊಳ್ಳಲಾರಂಭಿಸುತ್ತದೆ. ವಾತಾವರಣ ಶುಷ್ಕವಾಗುವುದರಿಂದ ತಲೆಯ ಚರ್ಮವೂ ಒಣಗಿದಂತಾಗುತ್ತದೆ. ಇದರಿಂದ ತಲೆಹೊಟ್ಟು, ತುರಿಕೆ, ಕೂದಲ ಬುಡದಲ್ಲಿ ಉರಿಯೂತ ಮತ್ತು ಕೂದಲು ಉದುರುವುದು ಸಾಮಾನ್ಯವಾಗುತ್ತದೆ. ಆದರೆ ಕೂದಲಿನ ಬಹಳಷ್ಟು ಸಮಸ್ಯೆಗಳಿಗೆ (Hair Care) ಕೆಲವು ಸರಳ ಮನೆಮದ್ದುಗಳಿವೆ.

ಊಟದ ತಟ್ಟೆಯಲ್ಲಿ ಹೆಚ್ಚಿನವರು ಪಕ್ಕಕ್ಕೆ ಎತ್ತಿಡುವ ಕರಿಬೇವಿನ ಸೊಪ್ಪು (curry leaves benefits) ಕೂದಲಿನ ರಕ್ಷಣೆಯಲ್ಲಿ (Curry leaves for hair) ಪ್ರಮುಖ ಪಾತ್ರವಹಿಸುತ್ತವೆ. ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ ಮಾತಿನಂತೆ ಈಗ ಎಷ್ಟು ಮಂದಿಗೆ ಇದರ ಬಗ್ಗೆ ಗೊತ್ತಿದೆ ಎಂದು ಪ್ರಶ್ನಿಸಬೇಕು. ಅಡುಗೆಗಾಗಿ ಮಾತ್ರ ಬಳಸುವ ಈ ಹಿತ್ತಲಗಿಡವನ್ನು ಕೂದಲಿನ ಆರೋಗ್ಯಕ್ಕಾಗಿ ಎಷ್ಟು ಮಂದಿ ಬಳಸಿದ್ದೀರಿ, ಕೇಶರಕ್ಷಣೆಯಲ್ಲಿ ಕರಿಬೇವಿನ ಸೊಪ್ಪು ಹೇಗೆಲ್ಲಾ ಸಹಾಯ ಮಾಡುತ್ತದೆ ಎಂಬುದು ಗೊತ್ತಿದೆಯೇ?

Hair Care Tips

ಕೂದಲಿನ ಬೆಳವಣಿಗೆಗೆ

ಕರಿ ಬೇವು ಸೊಪ್ಪಿನಲ್ಲಿ ಬಹಳಷ್ಟು ಸೂಕ್ಷ್ಮ ಪೋಷಕಾಂಶಗಳಿವೆ. ಇದರಲ್ಲಿರುವ ವಿಟಮಿನ್‌ ಸಿ, ವಿಟಮಿನ್‌ ಬಿ ಮತ್ತಿತರ ಉತ್ಕರ್ಷಣ ನಿರೋಧಕಗಳು ಕೂದಲಿನ ಕೋಶಗಳ ಪುನರುತ್ಪತ್ತಿಗೆ ಸಹಾಯ ಮಾಡುತ್ತದೆ. ತಲೆಯ ಚರ್ಮದ ಸ್ವಾಸ್ಥ್ಯ ವೃದ್ಧಿಗೆ ಇದು ಕಾರಣವಾಗುತ್ತದೆ. ಕೂದಲಿನ ಬೆಳವಣಿಗೆಗೆ ಪ್ರಚೋದಿಸುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಈ ಸೊಪ್ಪನ್ನು ತಿನ್ನುವುದು ಮಾತ್ರವಲ್ಲ, ಇದನ್ನು ಹಲವು ರೂಪಗಳಲ್ಲಿ ತಲೆಯ ಚರ್ಮಕ್ಕೆ ನೇರವಾಗಿ ಲೇಪಿಸುವುದು ಪ್ರಯೋಜನಕಾರಿ.

ಹೇಗೆ ಬಳಸುವುದು?

ಒಂದು ಮುಷ್ಟಿ ಕರಿಬೇವಿನ ಎಲೆಗಳನ್ನು ಒಂದು ಮುಷ್ಟಿ ಮೆಂತೆ ಸೊಪ್ಪಿನ ಜೊತೆಗೆ ಒಂದೆರಡು ತಾಜಾ ಬೆಟ್ಟದ ನೆಲ್ಲಿಕಾಯಿಯನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್‌ ಮಾಡಿಕೊಳ್ಳಿ. ಇದನ್ನು ತಲೆಗೂದಲಿನ ಬುಡಕ್ಕೆ ತಾಗುವಂತೆ ತಾಗುವಂತೆ ಚೆನ್ನಾಗಿ ಲೇಪಿಸಿ. ಅರ್ಧಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.

ತಲೆಹೊಟ್ಟು ನಿವಾರಣೆಗೆ

ತಲೆಯ ತ್ವಚೆಯ ಆರೋಗ್ಯ ಸುಧಾರಣೆಗೆ ಇದು ಒಳ್ಳೆಯ ಉಪಾಯ. ಕೂದಲ ಬುಡದಲ್ಲಿ ಮತ್ತು ತಲೆಯ ಚರ್ಮದ ಮೇಲಿನ ಫಂಗಸ್‌ ಮತ್ತು ಬ್ಯಾಕ್ಟೀರಿಯಾಗಳ ನಿರ್ಮೂಲನೆಗೆ ಇದು ಸಹಾಯ ಮಾಡುತ್ತದೆ. ಸತ್ತ ಕೋಶಗಳನ್ನೆಲ್ಲ ತೆಗೆದು, ಹೊಸ ಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.

ಹೇಗೆ ಬಳಸುವುದು?

ಕರಿಬೇವು ಸೊಪ್ಪನ್ನು ಒಣಗಿಸಿ ಪುಡಿ ಮಾಡಿಕೊಂಡು ಬಳಸಬಹುದು. ಇಲ್ಲವಾದರೆ ತಾಜಾ ಎಲೆಗಳನ್ನೇ ಪೇಸ್ಟ್‌ ಮಾಡಿಕೊಳ್ಳಬಹುದು. ಈ ಎಲೆಗಳ ಪುಡಿ ಅಥವಾ ಪೇಸ್ಟನ್ನು ಮೊಸರಿನಲ್ಲಿ ಸೇರಿಸಿ ಕಲೆಸಿ, ತಲೆಗೆಲ್ಲ ಲೇಪಿಸಿ. ಬುಡವನ್ನೆಲ್ಲ ಪೇಸ್ಟ್‌ನಿಂದ ಸರಿಯಾಗಿ ನೆನೆಸಬೇಕು. ಅರ್ಧ ತಾಸಿನ ಅನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡಿ.

ಕೂದಲಿನ ದುರಸ್ತಿಗೆ

ಚಳಿಗಾಲದ ಶುಷ್ಕ ಹವೆ, ಮಾಲಿನ್ಯ, ರಾಸಾಯನಿಕಗಳು ಸೇರಿ ಕೂದಲನ್ನು ಹಾಳು ಮಾಡುತ್ತವೆ. ಕೂದಲು, ಅದರ ಬುಡ, ತಲೆಯ ಚರ್ಮ ಇವೆಲ್ಲವುಗಳನ್ನು ತಳಮಟ್ಟದಿಂದ ರಿಪೇರಿ ಮಾಡುವ ಸಾಮರ್ಥ್ಯ ಕರಿಬೇವಿನ ಸೊಪ್ಪಿಗಿದೆ. ಇದರಲ್ಲಿರುವ ಅಲ್ಕಲಾಯ್ಡ್‌ ಮತ್ತು ಉತ್ಕರ್ಷಣ ನಿರೋಧಕಗಳು ಕೂದಲಿಗೆ ಮರುಜೀವ ನೀಡುತ್ತವೆ.

ಹೇಗೆ ಬಳಸುವುದು?

ಒಂದು ಹಿಡಿಯಷ್ಟು ಕರಿಬೇವಿನ ಸೊಪ್ಪಿನ ರಸ ತೆಗೆದು ಈ ರಸವನ್ನು ಅಷ್ಟೇ ಪ್ರಮಾಣದ ಕೊಬ್ಬರಿ ಎಣ್ಣೆಯಲ್ಲಿ ಸೇರಿಸಿ ಕುದಿಸಿ. ಸೊಪ್ಪಿನ ರಸವೆಲ್ಲ ಆವಿಯಾಗಿ ಹಸಿರು ಬಣ್ಣದ ಎಣ್ಣೆ ದೊರೆಯುತ್ತದೆ. ಇದನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಿ. ಕೂದಲಿಗೆ ಇದೇ ಎಣ್ಣೆಯನ್ನು ಬಳಸಿ ಮಸಾಜ್‌ ಮಾಡಿ.

Hair Care Tips

ಕೂದಲಿನ ಹೊಳಪಿಗೆ

ಕರಿಬೇವಿನಲ್ಲಿ ಹಲವು ರೀತಿಯ ಅಮೈನೊ ಆಮ್ಲಗಳಿವೆ. ಈ ಪ್ರೊಟೀನ್‌ಗಳು ಕೂದಲನ್ನು ಬಲಪಡಿಸಿ, ಕಳೆದುಹೋದ ಹೊಳಪನ್ನು ಮರಳಿಸುತ್ತವೆ. ಒರಟಾಗಿರುವ, ಸಿಕ್ಕಾಗಿ ಉದುರುವ ಕೂದಲುಗಳನ್ನು ಇದು ನಯವಾಗಿಸುತ್ತವೆ. ಕೂದಲಿಗೆ ಮರುಜೀವ ನೀಡುತ್ತವೆ. ಈ ಮೂಲಕ ಕೂದಲಿಗೆ ತಾರುಣ್ಯ ಮರಳುವಂತೆ ಮಾಡುತ್ತದೆ.

ಹೇಗೆ ಬಳಸುವುದು?

ಕರಿಬೇವಿನ ಎಲೆ ಮತ್ತು ದಾಸವಾಳದ ಎಲೆಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ಕೂದಲಿಗೆ ಹಚ್ಚಿ, ಅರ್ಧ ತಾಸಿನ ಅನಂತರ ಸ್ನಾನ ಮಾಡಿದರೆ ಹೊಳಪು ಮರಳುತ್ತದೆ ಮತ್ತು ಒರಟಾದ ಕೂದಲು ಮೃದುವಾಗುತ್ತದೆ.

Hair Care Tips: ನೀಳವಾದ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಹೂವುಗಳನ್ನು ಬಳಸಿ ನೋಡಿ!

ಕೂದಲು ಕಪ್ಪಗಾಗಲು

ಕಬ್ಬಿಣ ಸೇರಿದಂತೆ ಹಲವು ರೀತಿಯ ಖನಿಜ ಮತ್ತು ಸೂಕ್ಷ್ಮ ಪೋಷಕಾಂಶಗಳು ಈ ಸೊಪ್ಪಿನಲ್ಲಿವೆ. ಪೋಷಕಾಂಶಗಳ ಕೊರತೆಯಿಂದ ಕೂದಲು ಅಕಾಲದಲ್ಲೇ ಬೆಳ್ಳಗಾಗುತ್ತಿದ್ದರೆ ಅದಕ್ಕೆ ಈ ಸೊಪ್ಪುಗಳು ಪರಿಹಾರ ಒದಗಿಸಬಲ್ಲವು.

ಹೇಗೆ ಬಳಸುವುದು?

ಅರ್ಧ ಹಿಡಿ ಕರಿಬೇವಿನ ಸೊಪ್ಪನ್ನು ಒಂದು ಕಪ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನೀರಿನ ಬಣ್ಣ ಬದಲಾದ ಅನಂತರ ಇದನ್ನು ಆರಲು ಬಿಡಿ. ತಲೆಸ್ನಾನ ಮಾಡಿದ ಬಳಿಕ ಕೂದಲು ಕೊಂಚ ಒದ್ದೆ ಇರುವಾಗಲೇ ಈ ನೀರನ್ನು ಇಡೀ ತಲೆಗೆ ಹಚ್ಚಿ ಲಘುವಾಗಿ ಮಸಾಜ್‌ ಮಾಡಿ.