Saturday, 23rd November 2024

DK Shivakumar: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಎಂದ ಡಿ‌.ಕೆ. ಶಿವಕುಮಾರ್

DK Shivakumar

ಬೆಂಗಳೂರು: 2025ರ ವೇಳೆಗೆ ಸುಮಾರು 30 ಕಿಮೀ ಹಾಗೂ 2026 ರ ವೇಳೆಗೆ 175 ಕಿಮೀ ನೂತನ ಮೆಟ್ರೋ ಮಾರ್ಗಗಳನ್ನು ಸಾರ್ವಜನಿಕರ ಸೇವೆಗೆ ನೀಡಲಾಗುವುದು ಎಂದು ಡಿಸಿಎಂ ಡಿ‌.ಕೆ.ಶಿವಕುಮಾರ್ (DK Shivakumar) ಹೇಳಿದರು. ಮೆಟ್ರೋ (Metro) ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ತುಮಕೂರು ರಸ್ತೆಯ ಮಾದಾವರ (ಬೆಂಗಳೂರು ಅಂತಾರಾಷ್ಟ್ರೀಯ ಮತ್ತು ಪ್ರದರ್ಶನ ಕೇಂದ್ರ) ದ ತನಕ ವಿಸ್ತರಣೆ ಮಾಡಿರುವ ನೂತನ ಮಾರ್ಗದಲ್ಲಿ ಪ್ರಾಯೋಗಿಕ ಮೆಟ್ರೋ ರೈಲು ಸಂಚಾರವನ್ನು ಬುಧವಾರ ಪರಿಶೀಲಿಸಿ ಬಳಿಕ ಅವರು ಮಾತನಾಡಿದರು.

ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸಯ್ಯ, ದಾಸರಹಳ್ಳಿ ಶಾಸಕ ಮುನಿರಾಜು ಅವರ ಜತೆ ಯಶವಂತರಪುರ ಮೆಟ್ರೋ ರೈಲು ನಿಲ್ದಾಣದಿಂದ ಮಾದಾವರದ ತನಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು ಹಾಗೂ ಬಿಎಂಆರ್ ಸಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಮುಡಾ ಹೆಸರಲ್ಲಿ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ; ಸಿದ್ದರಾಮಯ್ಯ ಬೇಸರ

ಮೆಟ್ರೋ ಮೂರನೇ ಹಂತಕ್ಕೆ ಒಪ್ಪಿಗೆ

ಈಗಾಗಲೇ ರೂ. 1,130 ಕೋಟಿ ವೆಚ್ಚದಲ್ಲಿ 21 ಹೊಸ ರೈಲುಗಳಿಗೆ ಹರಾಜು ಪ್ರಕ್ರಿಯೆ ನಡೆಸಿ ಹಣ ಕಟ್ಟಲಾಗಿದೆ. ಹೊಸ ರೈಲುಗಳು ಆದಷ್ಟು ಬೇಗ ಸೇವೆಗೆ ಲಭ್ಯವಾಗಲಿವೆ. ಮೆಟ್ರೋ ಮಾರ್ಗದ ಒಂದು ಹಾಗೂ ಎರಡನೇ ಹಂತಗಳನ್ನು ನಾವು ಪೂರ್ಣಗೊಳಿಸಿದ್ದು, ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

ಪಾದಚಾರಿ ಮೇಲ್ಸೇತುವೆ, ಅಂಡರ್ ಪಾಸ್ ನಿರ್ಮಾಣ

ಮಂಜುನಾಥ ನಗರ ನಿಲ್ದಾಣದಲ್ಲಿ ರಸ್ತೆ ದಾಟಲು ಪಾದಚಾರಿ ಮೇಲ್ಸೆತುವೆ ಅನುಕೂಲ ಮಾಡಿಕೊಡಲಾಗುತ್ತಿದೆ‌. ಯಶವಂತಪುರ ನಿಲ್ದಾಣದಲ್ಲಿ ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೆ ಸಂಚರಿಸಲು ಭಾರತೀಯ ರೈಲ್ವೇ ಹಾಗೂ ನಮ್ಮ ಮೆಟ್ರೋ ಸಂಸ್ಥೆ ಪಾದಚಾರಿ ಮೇಲ್ಸೆತುವೆ ಸೇರಿದಂತೆ ಇತರೆ ಅನುಕೂಲಗಳನ್ನು ಮಾಡಲು ಜಂಟಿಯಾಗಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದರು.

ಚಿಕ್ಕಬಿದರಕಲ್ಲು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಸ್ಥೆಯೊಟ್ಟಿಗೆ ಸೇರಿ ಅಂಡರ್ ಪಾಸ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಮಾದಾವರ ಮೆಟ್ರೋ ನಿಲ್ದಾಣದ ಬಳಿಯೂ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಎನ್‌ಎಚ್ ಸಂಸ್ಥೆಯವರ ಬಳಿ ಮಾತುಕತೆ ನಡೆಸಲಾಗುತ್ತಿದೆ ಎಂದರು.

ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವವರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರ ದಟ್ಟಣೆ ರಹಿತವಾಗಿ ನಗರ ಪ್ರದಕ್ಷಿಣೆ ಮಾಡಬಹುದು ಹಾಗೂ ಅವರ ಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಳ್ಳಬಹುದು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Lakshmi Hebbalkar: ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ; ನಿಷ್ಪಕ್ಷಪಾತ ತನಿಖೆ ಆಗಲಿ ಎಂದ ಹೆಬ್ಬಾಳ್ಕರ್

ಶೀಘ್ರ ಅಧಿಕೃತ ಉದ್ಘಾಟನೆ

ನಾಗಸಂದ್ರದಿಂದ ಮೂರು ಕಿಮೀ ದೂರವಿರುವ ಮಾದಾವರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದವರೆಗೆ ವಿಸ್ತರಿತ ನೂತನ ಮಾರ್ಗವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಯೋಗಿಕವಾಗಿ ಉದ್ಘಾಟನೆ ಮಾಡಲಾಗಿದೆ‌. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಯೋಜನೆಗೆ ಒಪ್ಪಿಗೆ ನೀಡಿದ್ದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಸದರು ಹಾಗೂ ಇತರೆ ಜನಪ್ರತಿನಿಧಿಗಳನ್ನು ಆಹ್ವಾನಿಸಿ ವಿಸ್ತರಿತ ಮೆಟ್ರೋ ಮಾರ್ಗವನ್ನು ಅಧೀಕೃತವಾಗಿ ಉದ್ಘಾಟನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪ್ರಸ್ತುತ ಮೆಟ್ರೋ ಹಸಿರು ಮಾರ್ಗವು 33.46 ಕಿಮೀ ಉದ್ದವಿದೆ. ನೇರಳೆ ಮಾರ್ಗ 40.5 ಕಿಮೀ ಉದ್ದವಿದೆ. ಈ ಮಹತ್ತರವಾದ ಕಾರ್ಯ ಸಾಕಾರಗೊಳ್ಳಲು ಸಹಕಾರ ನೀಡಿದ ಕೇಂದ್ರ ಸರ್ಕಾರಕ್ಕೆ ಹಾಗೂ ಕೈ ಜೋಡಿಸಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಬೆಂಗಳೂರಿನ ಜನತೆಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.

ದೇಶದಲ್ಲಿಯೇ ಹೆಚ್ಚು ಪ್ರಯಾಣಿಕರ ಸಂಚಾರ

ದೆಹಲಿ, ಮುಂಬೈ ಸೇರಿದಂತೆ ದೇಶದ ಇತರೆಡೆಗಳಲ್ಲಿ ಇರುವ ಮೆಟ್ರೋಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಿಂತ ಬೆಂಗಳೂರಿನಲ್ಲಿರುವ 76.95 ಕಿಮೀ ಉದ್ದದ ಮೆಟ್ರೋ ಮಾರ್ಗದಲ್ಲಿ ಹೆಚ್ಚು ಪ್ರಯಾಣಿಕರು ಪ್ರತಿನಿತ್ಯ ಸಂಚರಿಸುತ್ತಿದ್ದಾರೆ. ನಮ್ಮ ಮೆಟ್ರೋಯಿಂದ ಬೆಂಗಳೂರಿನ ನಾಗರಿಕರಿಗೆ ಉತ್ತಮ ಸೇವೆ ದೊರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.

ವಕ್ಫ್ ಆಸ್ತಿ ವಿಚಾರವಾಗಿ ಶಾಸಕರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ “ಈ ವಿಚಾರ ನನಗೆ ಗೊತ್ತಿಲ್ಲ” ಎಂದರು.

ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದೆಂದು ವಿಚಾರಣೆಗೆ ಹಾಜರು

ಉಪ ಚುನಾವಣೆ ಇರುವ ಕಾರಣಕ್ಕೆ ಸಿದ್ದರಾಮಯ್ಯ ಅವರು ಒಂದು ವಾರಗಳ ಕಾಲಾವಕಾಶ ಕೇಳಬಹುದಿತ್ತು. ಆದರೆ, ಅಧಿಕಾರದಲ್ಲಿದ್ದುಕೊಂಡು ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕಾನೂನಿಗೆ ಗೌರವ ಕೊಟ್ಟಿದ್ದಾರೆ. ಅವರು ಮುಡಾ ವಿಚಾರದಲ್ಲಿ ತಪ್ಪು ಮಾಡಿಲ್ಲ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಮಾದಾವರ ಮೆಟ್ರೋ ನಿಲ್ದಾಣದ ಹೊರಗಡೆ ಅವರು ಪ್ರತಿಕ್ರಿಯೆ ನೀಡಿದರು.

ಕೇವಲ ಎರಡು ಗಂಟೆಗಳ ಕಾಲ ಮಾತ್ರ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನುವ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ “ಈ ಪ್ರಶ್ನೆಯನ್ನು ಲೋಕಾಯುಕ್ತ ಕಚೇರಿಗೆ ಕೇಳಬೇಕು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಪ್ಪು ಮಾಡಿಲ್ಲ. ಯಾವುದೇ ಸಹಿ ಹಾಕಿಲ್ಲ, ಮಂಜೂರು ಮಾಡಿಲ್ಲ. ಲೋಕಾಯುಕ್ತದವರು ವಿಚಾರಣೆಗೆ ಕರೆದ ಕಾರಣಕ್ಕೆ ಹಾಜರಾಗಿದ್ದಾರೆ” ಎಂದರು.

ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ದೂರು ರಾಜಕೀಯ ಬಣ್ಣ

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ರಾಜ್ಯಪಾಲರಿಗೆ ರಾಜ್ಯದ ಬಾರ್ ಮಾಲೀಕರು ದೂರು ನೀಡಿರುವ ಬಗ್ಗೆ ಕೇಳಿದಾಗ “ಆಡಳಿತಾತ್ಮಕ ವಿಚಾರದಲ್ಲಿ ಯಾರು ಬೇಕಾದರೂ ರಾಜ್ಯಪಾಲರಿಗೆ ದೂರನ್ನು ನೀಡಬಹುದು. ಈ ಹಿಂದೆಯೂ ನೂರಾರು ದೂರುಗಳು ಬಂದಿದ್ದವು. ಈಗ ಇದೆಲ್ಲಾ ವಿಶೇಷವಾಗಿ ನಡೆಯುತ್ತಿದ್ದು, ಇದೊಂದು ರಾಜಕೀಯ ಬಣ್ಣ” ಎಂದು ಹೇಳಿದರು.

ಕಾನೂನಿನ ಪ್ರಕಾರ ಕ್ರಮ

ಬೆಳಗಾವಿಯ ಎಸ್‌ಡಿಎ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂದಿರುವ ಬಗ್ಗೆ ಕೇಳಿದಾಗ, ಯಾರೇ ತಪ್ಪು ಮಾಡಿದ್ದರು ಪೊಲೀಸ್ ಇಲಾಖೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ; ಚಾರ್ಜಿಂಗ್‌ ಸ್ಟೇಷನ್‌ನಲ್ಲಿ ರಾಜ್ಯ ನಂ.1

ರಾಜೀನಾಮೆ ಕೊಡಿಸೋಣ

ಇಬ್ಬರು ಸಚಿವರ ರಾಜೀನಾಮೆಗೆ ಆರ್. ಅಶೋಕ್ ಆಗ್ರಹಿಸಿರುವ ಬಗ್ಗೆ ಹೇಳಿದಾಗ “ರಾಜೀನಾಮೆ ಕೊಡಿಸೋಣ. ಅಶೋಕ್ ಅವರು ಕೇಳುವುದು ದೊಡ್ಡದೊ, ನಾವು ಕೊಡುವುದು ದೊಡ್ಡದೊ” ಎಂದು ತಿರುಗೇಟು ನೀಡಿದರು.