Sunday, 24th November 2024

Pralhad Joshi: ಕೇಂದ್ರದಿಂದ ಗುಡ್‌ನ್ಯೂಸ್‌; ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಹೆಚ್ಚಳ

pralhad joshi

ನವದೆಹಲಿ: ಕರ್ನಾಟಕದಲ್ಲಿ (Karnataka) ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ (Central Government) ಆದೇಶಿಸಿದೆ ಎಂದು ಕೇಂದ್ರ ಆಹಾರ ಪೂರೈಕೆ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. 2024-25 ರ ಖಾರೀಫ್ ಋತುವಿನಲ್ಲಿ ಬೆಂಬಲ ಬೆಲೆಯಲ್ಲಿ ಒಟ್ಟು 38,320 ಮೆಟ್ರಿಕ್ ಟನ್ ಹೆಸರು ಕಾಳು ಖರೀದಿಗೆ ಅವಕಾಶ ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರ, ರಾಜ್ಯದಲ್ಲಿನ ಹೆಸರು ಬೆಳೆಗಾರರಿಗೆ ಬಂಪರ್ ಕೊಡುಗೆ ನೀಡಿದೆ ಎಂದಿದ್ದಾರೆ.

ರಾಜ್ಯದಲ್ಲಿ ಹೆಸರು ಬೆಳೆಗಾರರು ಸಂಕಷ್ಟದಲ್ಲಿದ್ದು, ಬೆಂಬಲ ಬೆಲೆಯಲ್ಲಿ ಖರೀದಿ ಹೆಚ್ಚಿಸುವಂತೆ ಪ್ರಧಾನಿ ಮೋದಿ ಅವರನ್ನು ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ ಮನವಿ ಮಾಡಿದ್ದೆ. ತಮ್ಮ ಮನವಿಗೆ ತ್ವರಿತ ಸ್ಪಂದನೆ ನೀಡಿ ಹೆಸರು ಕಾಳು ಖರೀದಿ ಹೆಚ್ಚಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | R Ashok: ಅಬಕಾರಿ ಸಚಿವ ತಿಮ್ಮಾಪುರರಿಂದ ವಾರಕ್ಕೆ 18 ಕೋಟಿ ರೂ. ಹಫ್ತಾ ವಸೂಲಿ! ಆರ್‌. ಅಶೋಕ್‌ ಆರೋಪ

ಈ ಮೊದಲು 22215 ಮೆಟ್ರಿಕ್ ಟನ್ ಹೆಸರು ಕಾಳು ಖರೀದಿಗೆ ಸೂಚಿಸಿತ್ತು. ಇದನ್ನು 38,320 ಮೆ. ಟನ್‌ಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ರಾಜ್ಯದ ಹೆಸರು ಬೆಳೆಗಾರರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಬೆಂಬಲ ಬೆಲೆಯಲ್ಲಿ 22215 ಮೆಟ್ರಿಕ್ ಟನ್ ಹೆಸರು ಕಾಳು ಸಂಗ್ರಹಿಸಿದ್ದು, ಹೆಚ್ಚುವರಿಯಾಗಿ 16105 ಮೆ.ಟನ್ ಹೆಸರು ಖರೀದಿ ಪ್ರಕ್ರಿಯೆ ನಡೆಯಲಿದೆ. ಈ ಮೂಲಕ ಕೇಂದ್ರ ಸರ್ಕಾರ ಹೆಸರು ಬೆಳೆಗಾರರ ಬೆಂಬಲಕ್ಕೆ ನಿಂತಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ; ಚಾರ್ಜಿಂಗ್‌ ಸ್ಟೇಷನ್‌ನಲ್ಲಿ ರಾಜ್ಯ ನಂ.1

ತ್ವರಿತ ಖರೀದಿಗೆ ಸೂಚನೆ

ರಾಜ್ಯ ಸರ್ಕಾರ ಮತ್ತು ಕೇಂದ್ರದ ನೋಡಲ್ ಏಜೆನ್ಸಿಗಳು ಈ ಕೂಡಲೇ ರಾಜ್ಯಾದ್ಯಂತ ಹೆಸರು ಕಾಳು ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಮತ್ತು ತ್ವರಿತವಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಸಚಿವ ಜೋಶಿ ಸೂಚಿಸಿದ್ದಾರೆ. ಬೆಂಬಲ ಬೆಲೆ ನೀಡುವ ಮೂಲಕ ಸದಾ ರೈತರ ಬೆನ್ನಿಗೆ ನಿಂತಿರುವ ಕೇಂದ್ರ ಸರ್ಕಾರಕ್ಕೂ ಮತ್ತು ಕೇಂದ್ರ ಕೃಷಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಚಿವ ಪ್ರಲ್ಹಾದ್‌ ಜೋಶಿ ಅವರು ಕನ್ನಡ ನಾಡಿನ ಸಮಸ್ತ ರೈತರ ಪರವಾಗಿ ಅಭಿನಂದನೆ ಸಹ ಸಲ್ಲಿಸಿದ್ದಾರೆ.