Sunday, 24th November 2024

Health Tips: ಬರುತ್ತಿದೆ ಚಳಿಗಾಲ; ಕೀಲುಗಳ ಅರೋಗ್ಯ ಜೋಪಾನ!

Health Tips

ಮಳೆಗಾಲ (rainy season) ದೀರ್ಘವಾಗಿದೆ, ಚಳಿಗಾಲ (Winter season) ಹತ್ತಿರದಲ್ಲಿದೆ. ದೇಹದ (Health Tips) ಕೀಲುಗಳೆಲ್ಲ (joints) ಬಿಗಿದುಕೊಂಡು ಮುಷ್ಕರ ಹೂಡುವ ಸಮಯವಿದು. ನಿತ್ಯದ ಓಡಾಟಕ್ಕೂ ಸಾಕಷ್ಟು ತೊಂದರೆ ನೀಡುವ ಈ ಪರಿಸ್ಥಿತಿ ಹಲವರದ್ದಾಗಿರುತ್ತದೆ.

ಚಳಿಗಾಲದಲ್ಲಿ ಮಾಂಸಖಂಡಗಳ (muscle health) ಸೆಡವು, ಬಿಗಿತ ಎಲ್ಲ ವಯೋಮಾನದವರನ್ನೂ ಕಾಡಬಲ್ಲದು. ಅದಕ್ಕೆ ವಯಸ್ಸಾಗಿರಬೇಕು, ಅರ್ಥರೈಟಿಸ್‌ ಇರಬೇಕೆಂದೇನೂ ಇಲ್ಲ. ಇದರ ಪರಿಣಾಮ ಎಲ್ಲರ ಮೇಲೂ ಒಂದೇ ತೆರನಾಗಿರುತ್ತದೆ. ಕೀಲುಗಳಲ್ಲಿ ನೋವು, ಬಿಗಿತ, ನಿತ್ಯದ ಚಟುವಟಿಕೆಗಳಿಗೆ ತೊಂದರೆ, ಸುಸ್ತು ಇತ್ಯಾದಿಗಳು ಬಹುತೇಕ ಮಂದಿಯನ್ನು ಹೈರಾಣಾಗಿಸುತ್ತವೆ.

ಇದಕ್ಕೆ ವಿಟಮಿನ್‌ ಡಿ ಕೊರತೆ ಮುಖ್ಯ ಕಾರಣ. ಚಳಿಗಾಲದಲ್ಲಿ ಹೆಚ್ಚಾಗಿ ಬಿಸಿಲಿಗೆ ನಮ್ಮನ್ನು ನಾವು ಒಡ್ಡದೇ ಇರುವುದು, ವಿಟಮಿನ್‌ ಡಿ ಇರುವ ಆಹಾರಗಳನ್ನು ಸೇವಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ.

ಸೂರ್ಯನ ಬೆಳಕು ಹೆಚ್ಚಾಗಿ ಇಲ್ಲದೆ ಇರುವ ಸ್ಥಳಗಳಲ್ಲಿ ವಿಟಮಿನ್‌ ಡಿ ಕೊರತೆ ಸಹಜ. ಬಿಸಿಲು ಬಂದಾಗ ಬೆಚ್ಚಗೆ ಒಳಗೇ ಇರುವ ನಮ್ಮ ಜಡತೆಯೂ ಇದಕ್ಕೆ ಕಾರಣವಾಗಿರುತ್ತದೆ. ಚಳಿ ಹೆಚ್ಚಾದಾಗ ಸುದೀರ್ಘ ಕಾಲ ಮಲಗಿರುವುದು, ಕುಳಿತಲ್ಲಿಂದ ಏಳದೇ ಇರುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುವುದಿಲ್ಲ. ಕೀಲುಗಳಲ್ಲಿನ ದ್ರವದ ಚಲನೆಯೂ ಸರಾಗವಾಗದೆ ನೋವಿಗೆ ಕಾರಣವಾಗುತ್ತದೆ.

Health Tips

ಏನು ಮಾಡಬೇಕು?

ಚಳಿಗಾಲದಲ್ಲಿ ದಿನಚರಿಯಲ್ಲಿ ಕೆಲವೊಂದು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ಕೀಲುಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬಹುದು.

ವ್ಯಾಯಾಮ

ಚಳಿಗಾಲದಲ್ಲಿ ಕೀಲುಗಳ ಆರೋಗ್ಯಕ್ಕಾಗಿ ಅಗತ್ಯವಾದ ವ್ಯಾಯಾಮಗಳನ್ನು ವೈದ್ಯರು ಅಥವಾ ಫಿಸಿಯೋ ಥೆರಪಿಸ್ಟ್ ಗಳ ಮಾರ್ಗದರ್ಶನದಲ್ಲಿ ರೂಢಿಸಿಕೊಂಡರೆ ಮಂಡಿ, ಕುತ್ತಿಗೆ, ಬೆನ್ನು ಮೊದಲಾದ ನೋವುಗಳನ್ನು ಹತೋಟಿಯಲ್ಲಿ ಇರಿಸಬಹುದು.

ಬೆಳಗ್ಗೆ ಏಳುತ್ತಿದ್ದಂತೆ ಕೆಲಸ ಮಾಡುವುದಕ್ಕೆ ಕೀಲುಗಳು ಮುಷ್ಕರ ಹೂಡುವುದು ಸಹ ಇದರಿಂದ ಕಡಿಮೆಯಾಗುತ್ತದೆ. ವಾರಕ್ಕೆ ಐದು ದಿನಗಳಾದರೂ ವ್ಯಾಯಾಮ ಬೇಕು. ಮನೆಯಲ್ಲೇ ನಿಮ್ಮ ಆರೋಗ್ಯಕ್ಕೆ ಹೊಂದುವಂಥ ಸ್ಟ್ರೆಚ್‌ಗಳನ್ನು ದಿನವೂ ಮಾಡಬೇಕು. ಯೋಗ, ನಡಿಗೆ ಹೀಗೆ ಯಾವುದಾದರೂ ಸರಿ.

ನೀರು

ಬೇಸಿಗೆಯಲ್ಲಿ ನಾವೇ ಮರೆತರೂ ದೇಹ ನೀರು ಕೇಳುತ್ತದೆ. ಆದರೆ ಚಳಿಗಾಲದಲ್ಲಿ ದಾಹ ಕಡಿಮೆ. ಹಾಗೆಂದು ನೀರು ಕಡಿಮೆ ಕುಡಿದರೆ ಸಮಸ್ಯೆಗಳು ಅಮರಿಕೊಳ್ಳುತ್ತವೆ. ದೇಹದ ಕೋಶಗಳಲ್ಲಿ ನೀರು ಕಡಿಮೆಯಾದಷ್ಟೂ ಬಿಗಿತ ಹೆಚ್ಚುತ್ತದೆ, ನೋವು ಉಲ್ಭಣಿಸುತ್ತದೆ. ಹಾಗಾಗಿ ದಿನಕ್ಕೆ ೧೦ ಗ್ಲಾಸ್‌ ನೀರು ಕುಡಿಯುವ ಗುರಿ ಇರಿಸಿಕೊಳ್ಳಿ ಮತ್ತು ಗುರಿಯನ್ನು ಪೂರ್ಣಗೊಳಿಸಿ.

ಆಹಾರ

ಇದು ಇನ್ನೊಂದು ಮುಖ್ಯವಾದ ಅಂಶ. ಆಹಾರದಲ್ಲಿ ಹೆಚ್ಚಾಗಿ ಒಮೇಗಾ ೩ ಕೊಬ್ಬಿನಾಮ್ಲವಿರಲಿ. ಇದನ್ನು ನಿಯಮಿತವಾಗಿ ಸೇವಿಸಿದಲ್ಲಿ, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಸಾಲ್ಮನ್‌ನಂಥ ಕೊಬ್ಬಿನ ಮೀನುಗಳು, ವಾಲ್‌ನಟ್‌, ಅಗಸೆ ಬೀಜಗಳು, ಬೆಣ್ಣೆಹಣ್ಣು ಮೊದಲಾದವುಗಳು ದಿನವೂ ಬೇಕು. ಜೊತೆಗೆ ಪ್ರೊಟೀನ್‌, ನಾರು, ಸಂಕೀರ್ಣ ಪಿಷ್ಟಗಳು ಆಹಾರದಲ್ಲಿ ಅಗತ್ಯವಾಗಿ ಇರಲಿ. ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಮರೆಯದೆ ಸೇವಿಸುವುದರಿಂದ ಸೂಕ್ಷ್ಮ ಪೋಷಕಾಂಶಗಳು ಸಹ ಕೊರತೆಯಾಗುವುದಿಲ್ಲ. ಆಹಾರ ಸತ್ವಪೂರ್ಣವಾದಷ್ಟೂ ದೇಹ ಶಕ್ತಿಯುತವಾಗುತ್ತದೆ.

ಬೆಚ್ಚಗಿರಿ

ಚಳಿಯಲ್ಲಿ ಬೆಚ್ಚಗಿರುವುದು ನೋವು ತಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮಾಂಸಖಂಡಗಳಲ್ಲಿನ ಬಿಗಿತ, ಸೆಡವುಗಳು ಚಳಿ ಸೋಕಿದಷ್ಟೂ ಹೆಚ್ಚುತ್ತವೆ. ಹಾಗಾಗಿ ಬೆಚ್ಚಗಿರಿ. ಹಲವು ಪದರಗಳಲ್ಲಿ ವಸ್ತ್ರಗಳನ್ನು ಧರಿಸಿ. ಇದರಿಂದ ಹೊರಗಿನ ವಾತಾವರಣಕ್ಕೆ ಸರಿ ಹೊಂದುವಂತೆ ದೇಹದ ಉಷ್ಣತೆಯನ್ನು ಸರಿದೂಗಿಸಿಕೊಳ್ಳಲು ಸುಲಭವಾಗುತ್ತದೆ.

Pregnancy Tips: ಗರ್ಭಿಣಿಯರೇ, ಈ 5 ಸಮಸ್ಯೆಗಳಿದ್ದಾಗ ದೈಹಿಕ ಸಂಬಂಧ ಬೆಳೆಸಬೇಡಿ!

ಮಸಾಜ್‌

ಅಭ್ಯಂಗನ ಸ್ನಾನ ಮಾಡುವುದು ಕೀಲುಗಳು ಮತ್ತು ಮಾಂಸ ಖಂಡಗಳಿಗೆ ಆರಾಮ ಒದಗಿಸುತ್ತವೆ. ಆದರೆ ನೋವಿರುವ ಕೀಲು ಮತ್ತು ಮಾಂಸಖಂಡಗಳಿಗೆ ಎಣ್ಣೆ ಹಚ್ಚುವುದಕ್ಕಿಂತ ಮೊದಲು ವೈದ್ಯರಲ್ಲಿ ಸಲಹೆ ಪಡೆಯಿರಿ. ಇರುವಂಥ ನೋವು ಯಾವುದರಿಂದ ಬಂದಿದೆ, ಯಾಕಾಗಿ ಬಂದಿದೆ ಎಂಬುದನ್ನು ಪರಿಶೀಲಿಸಿದ ಅನಂತರ ಆ ಸ್ಥಿತಿಯಲ್ಲಿ ಮಸಾಜ್‌ ಸೂಕ್ತವೇ ಎಂಬುದನ್ನು ವೈದ್ಯರೇ ನಿರ್ಧರಿಸಬೇಕಾಗುತ್ತದೆ. ನೋವಿಲ್ಲದಿದ್ದಾಗ ಸುಮ್ಮನೆ ಅಭ್ಯಂಗವನ್ನು ಎಲ್ಲರೂ ಮಾಡಬಹುದು.