Friday, 22nd November 2024

PM Vidyalaxmi Scheme: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆಗೆ ಅನುಮೋದನೆ; ಅರ್ಜಿ ಸಲ್ಲಿಸುವುದು ಹೇಗೆ?

PM Vidyalaxmi Scheme

ಹೊಸದಿಲ್ಲಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆ (PM Vidyalaxmi Scheme)ಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ (ನ. 6) ಅನುಮೋದನೆ ನೀಡಿದೆ. ಬಡತನ ಕಾರಣದಿಂದ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯೋಜನೆಯನ್ನು ಸರ್ಕಾರಿ ಪೋರ್ಟಲ್ ಮೂಲಕ ಜಾರಿಗೊಳಿಸಲಾಗುತ್ತದೆ. ಅದರ ಮೂಲಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆ (QHEIs)ಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಗ್ಯಾರಂಟಿದಾರರ ಅಗತ್ಯವಿಲ್ಲದೆ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಸಾಲವು ಪೂರ್ಣ ಪ್ರಮಾಣದ ಬೋಧನಾ ಶುಲ್ಕ ಮತ್ತು ಕೋರ್ಸ್‌ನ ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಯಾರೆಲ್ಲ ಅರ್ಹರು?

ಈ ಯೋಜನೆಯು ಎನ್‌ಐಆರ್‌ಎಫ್‌ (NIRF) ಶ್ರೇಯಾಂಕದಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಜತೆಗೆ ಎನ್‌ಐಆರ್‌ಎಫ್‌ನಲ್ಲಿ 101-200 ರ‍್ಯಾಂಕ್‌ ಪಡೆದ ರಾಜ್ಯ ಸರ್ಕಾರದ ಎಚ್‌ಇಐಗಳು ಮತ್ತು ಎಲ್ಲ ಕೇಂದ್ರ ಸರ್ಕಾರದ ಆಡಳಿತದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ. ವರ್ಷಕ್ಕೆ 22 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ. ಈ ಯೋಜನೆಯು ಕೇಂದ್ರ ವಲಯ ಬಡ್ಡಿ ಸಬ್ಸಿಡಿ ಮತ್ತು ಸಿಕ್ಷಣ ಸಾಲಗಳ ಕ್ರೆಡಿಟ್‌ ಗ್ಯಾರಂಟಿ ಓಂಡ್‌ ಯೋಜನೆ, ವಾರ್ಷಿಕ ಕುಟುಂಬ ಆದಾಯ 4.5 ಲಕ್ಷ ರೂ.ವರೆಗೆ ಮತ್ತು ಅನುಮೋದಿತ ಸಂಸ್ಥೆಗಳಿಂದ ತಾಂತ್ರಿಕ/ವೃತ್ತಿಪರ ಕೋರ್ಸ್‌ ಅನ್ನು ಅನುಸರಿಸುವ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ.

ಸಾಲದ ಮೊತ್ತ

ಈ ಯೋಜನೆಯು 10 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ. 3 ಬಡ್ಡಿ ರಿಯಾಯಿತಿಯನ್ನು ನೀಡುತ್ತದೆ. ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತದೆ. 7.5 ಲಕ್ಷ ರೂ.ವರೆಗಿನ ಸಾಲಕ್ಕಾಗಿ ವಿದ್ಯಾರ್ಥಿಗಳು ಶೇ. 75 ಬಾಕಿ ಉಳಿದಿರುವ ಡೀಫಾಲ್ಟ್‌ನ ಕ್ರೆಡಿಟ್ ಗ್ಯಾರಂಟಿಯನ್ನು ಸಹ ಪಡೆಯಬಹುದು. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳನ್ನು ಲಭ್ಯವಾಗುವಂತೆ ಮಾಡಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಉನ್ನತ ಶಿಕ್ಷಣ ಇಲಾಖೆಯು ಅರ್ಜಿ ಸಲ್ಲಿಸಲು ಏಕೀಕೃತ ಪೋರ್ಟಲ್ ಅನ್ನು ರಿಲೀಸ್ ಮಾಡಲಿದೆ. PM-Vidyalaxmi ಎಂಬ ಕ್ರೋಢೀಕೃತ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ವಿದ್ಯಾಲಕ್ಷ್ಮಿ ಯೋಜನೆಯಡಿ ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗಾಗಿ ಅರ್ಜಿ ಸಲ್ಲಿಸಬಹುದು. ಬಡ್ಡಿ ಸಹಾಯಧನವನ್ನು ಇ-ವೋಚರ್ ಮತ್ತು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ವ್ಯಾಲೆಟ್‌ಗಳ ಮೂಲಕ ಪಾವತಿಸಲಾಗುತ್ತದೆ.

ಯಾವೆಲ್ಲ ದಾಖಲೆ ಅಗತ್ಯ?

ಕೆವೈಸಿ ಅಗತ್ಯಗಳಿಗಾಗಿ ಮತದಾರರ ಗುರುತಿನ ಚೀಟಿ, ಪ್ಯಾನ್‌ ಕಾರ್ಡ್ ಅಥವಾ ಆದಾರ್‌ ಕಾರ್ಡ್‌ನಂತಹ ಗುರುತಿನ ಚೀಟಿ ಅಗತ್ಯವಿದೆ. 10ನೇ ತರಗತಿಯ ಪ್ರಮಾನ ಪತ್ರ (SSC/CBSE/ICSE) ಅಥವಾ ಜನನ ಪ್ರಮಾಣ ಪತ್ರದಂತಹ ಪುರಾವೆ ಒದಗಿಸಬೇಕಾಗುತ್ತದೆ.

ಈ ಸುದ್ದಿಯನ್ನೂ ಓದಿ: PSI Exam: ಪಿಎಸ್‌ಐ ಪರೀಕ್ಷೆ ತಾತ್ಕಾಲಿಕ ಅಂಕಪಟ್ಟಿ ಪ್ರಕಟ; ಪರಿಶೀಲಿಸುವ ಲಿಂಕ್‌ ಇಲ್ಲಿದೆ