Thursday, 7th November 2024

Viral News: ಲಾಕ್ ಮಾಡಿದ್ದ ಕಾರಿನೊಳಗೆ ಉಸಿರುಗಟ್ಟಿ ಮೂರು ವರ್ಷದ ಬಾಲಕಿ ದುರ್ಮರಣ – ಮಗುವನ್ನು ಮರೆತು ಹೋದನೇ ಆ ಯೋಧ..!?

ಮೀರತ್‌: ಸಂಪೂರ್ಣವಾಗಿ ವಿಂಡೋ ಗ್ಲಾಸ್ ಬಂದ್ ಮಾಡಿ ಲಾಕ್ ಮಾಡಿದ್ದ ಕಾರಿನೊಳಗೆ ಸಿಲುಕಿಕೊಂಡ ಮೂರು ವರ್ಷದ ಮಗುವೊಂದು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ (Uttar Pradesh) ಮೀರತ್‌ನ (Meerut) ಕಂಕೇರ್ ಖೇಡಾ (Meerut Tragedy Incident) ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ(Viral News).

ಮಗು ಕಾಣಿಸುತ್ತಿಲ್ಲ ಎಂದು ಮಗುವಿನ ಕುಟುಂಬಸ್ಥರು ಹುಡುಕಾಡುತ್ತಿದ್ದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ ಮಗು ಕಾಣೆಯಾಗಿರುವ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರ ಸಮ್ಮುಖದಲ್ಲೇ ಈ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಪೊಲೀಸರು ಮಗುವಿನ ಮೃತದೇಹವನ್ನು ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ.

ಈ ದುರ್ಘಟನೆ ನ.05ರ ಮಂಗಳವಾರದಂದು ನಡೆದಿರುವ ಬಗ್ಗೆ ವರದಿಯಾಗಿದ್ದು, ನತದೃಷ್ಟ ಹೆಣ್ಣುಮಗುವಿನ ತಂದೆ ವೃತ್ತಿಯಲ್ಲಿ ಸೈನಿಕರಾಗಿರುವ ಸೊಂಬೀರ್ ಪೂನಿಯಾ ಎಂಬವರು ತನ್ನ ಸಹೋದ್ಯೋಗಿ ಲ್ಯಾನ್ಸ್ ನಾಯಕ್ ನರೇಶ್ ವಿರುದ್ಧ ನಿರ್ಲಕ್ಷ್ಯತನದ ಆರೋಪವನ್ನು ಹೊರಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Viral video: ಬಸ್‌ ಓಡಿಸುತ್ತಿದ್ದಾಗಲೇ ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು; 50 ಜನರ ಜೀವ ಉಳಿಸಿದ ಕಂಡಕ್ಟರ್‌

ಈ ಮಗುವಿನ ತಂದೆ ಹಾಗೂ ಆರೋಪಿಯಾಗಿರುವ ಲ್ಯಾನ್ಸ್ ನಾಯಕ್ ನರೇಶ್ ಇಬ್ಬರೂ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಚೆನ್ನಾಗಿ ಪರಿಚಯವುಳ್ಳವರಾಗಿದ್ದರು. ಪೂನಿಯಾ ಅವರು ಹರ್ಯಾಣದ ಜಿಂದ್ ಜಿಲ್ಲೆಯ ನಿಧಾನಿ ಗ್ರಾಮದವರಾಗಿದ್ದು, ಇವರು ಮೀರತ್ ನ ಆರ್ಡನೆನ್ಸ್ ಯೂನಿಟ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನೊಂದೆಡೆ ಸಂಬೀರ್ ಮತ್ತು ಅವರ ಕುಟುಂಬ ಫಝಲ್ ಪುರದ ಎನ್ಕ್ಲೇವ್ ಆರ್ಮಿ ಕಾಲೊನಿಯಲ್ಲಿ ವಾಸವಾಗಿತ್ತು. ಸೋಂಬೀರ್ ಪೂನಿಯಾ ಅವರಿಗೆ ಮೂರು ವರ್ಷದ ವರ್ತಿಕಾ ಮತ್ತು ಮೂರು ತಿಂಗಳ ಭವಿ ಎಂಬ ಇಬ್ಬರು ಮಗಳಂದಿರು, ಇವರಲ್ಲಿ ವರ್ತಿಕಾ ಇದೀಗ ದಾರುಣವಾಗಿ ಮೃತಪಟ್ಟ ಬಾಲಕಿಯಾಗಿದ್ದಾಳೆ.

ಸೋಬೀರ್ ನೀಡಿರುವ ದೂರಿನಲ್ಲಿರುವಂತೆ, ವರ್ತಿಕಾ ತನ್ನ ಮನೆಯ ಹೊರಗಡೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಲ್ಯಾನ್ಸ್ ನಾಯಕ್ ನರೇಶ್ ವರ್ತಿಕಾಳನ್ನು ತನ್ನ ಜೊತೆ ಕಾರಿನಲ್ಲಿ ಒಂದು ರೈಡ್ ಬರುವಂತೆ ಕರೆದಿದ್ದಾರೆ. ಆದರೆ ಇದಕ್ಕೆ ಸೋಂಬೀರ್ ಅವರ ಪತ್ನಿ ರಿತು ನಿರಾಕರಿಸಿದ್ದಾರೆ. ಆದರೆ, ನರೇಶ್ ಒತ್ತಾಯಪೂರ್ವಕವಾಗಿ ವರ್ತಿಕಾಳನ್ನು ಕರೆದುಕೊಂಡು ರೊಹಾಟ ರಸ್ತೆಯಲ್ಲಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಅಲ್ಲಿ ನರೇಶ್ ಈ ಪುಟ್ಟ ಬಾಲಕಿ ವರ್ತಿಕಾಳನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿ ಹೋಗಿದ್ದಾರೆ. ಅಲ್ಲಿ ಮಗು ಉಸಿರುಗಟ್ಟಿ ಕಾರಿನೊಳಗಡೆ ಮೃತಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕುಟುಂಬ ಸದಸ್ಯ ಕಿಶನ್ ಹೇಳುವ ಪ್ರಕಾರ ನರೇಶ್ ಅವರು ಬೆಳಿಗ್ಗೆ 10.15ಕ್ಕೆ ಬಾಲಕಿಯನ್ನು ಕರೆದುಕೊಂಡು ಆರ್ಮಿ ಕಾಲೊನಿಯಿಂದ ಹೊರಟಿದ್ದಾರೆ, ಆದರೆ ಮಧ್ಯಾಹ್ನ 2.00 ಗಂಟೆಯಾದರೂ ಮಗು ಹಿಂದಿರುಗದೇ ಇದ್ದಾಗ ಕುಟುಂಬದವರೆಲ್ಲಾ ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಇದೇ ಸಂದರ್ಭ ನರೇಶ್ ಅವರಿಗೆ ಕರೆ ಮಾಡಿದಾಗ, ಆತ ‘ನಾನು ಡ್ಯೂಟಿಯಲ್ಲಿದ್ದೇನೆ..’ ಎಂದು ಹೇಳಿದ್ದಾರೆ.

ಸೋಂಬೀರ್ ಅವರ ದೂರನ್ನು ಸ್ವೀಕರಿಸಿರುವ ಪೊಲೀಸರು ಇದೀಗ ನರೇಶ್ ವಿರುದ್ಧ ಅನಪೇಕ್ಷಿತ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ನಿರ್ಲಕ್ಷ್ಯ ಮತ್ತು ಮರೆವಿಗೆ ಒಂದು ಪುಟ್ಟ ಜೀವ ಬಲಿಯಾಗಿರುವುದು ಮಾತ್ರ ದುರಂತವೇ ಸರಿ!