Thursday, 7th November 2024

RAW: ಗಲ್ಫ್‌ ರಾಷ್ಟ್ರಗಳಂತೆ ಭಾರತದಲ್ಲೂ ಶಿಯಾ-ಸುನ್ನಿ ಕಲಹ ಸೃಷ್ಟಿಗೆ ISI ಸಂಚು; ಪಾಕ್‌ನ ಕುತಂತ್ರ ಬಯಲಿಗೆಳೆದ ʻರಾʼ

RAW

ನವದೆಹಲಿ : ಪಾಕಿಸ್ತಾನದ ( Pakistan) ಗುಪ್ತಚರ ಇಲಾಖೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಭಾರತದ ವಿರುದ್ಧ ಅಪಾಯಕಾರಿ ಸಂಚು ರೂಪಿಸುತ್ತಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಗಲ್ಫ್‌ ರಾಷ್ಟ್ರಗಳಲ್ಲಿ ತಲೆದೋರಿರುವ ಶಿಯಾ-ಸುನ್ನಿ ಮುಸ್ಲಿಮರ ನಡುವಿನ ಕಲಹದಂತೆ ಭಾರತದಲ್ಲೂ ಸಮುದಾಯಗಳ ನಡುವೆ ಘರ್ಷಣೆ ಸೃಷ್ಟಿಸಲು ಐಎಸ್‌ಐ ಸಂಚು ರೂಪಿಸಿದೆ. ಭಾರತದ ಗುಪ್ತಚರ ಇಲಾಖೆ ʻರಾʼ ಈ ಬಗ್ಗೆ ಸ್ಫೋಟಕ ಸಂಗತಿಗಳನ್ನು ಬಿಚ್ಚಿಟ್ಟಿದೆ.

ಇರಾನ್-ಇಸ್ರೇಲ್ ಯುದ್ಧದಿಂದ ಗಲ್ಫ್‌ನಲ್ಲಿ ಶಿಯಾ-ಸುನ್ನಿ( Shia-Sunni ) ಉದ್ವಿಗ್ನತೆ ಉಲ್ಬಣಗೊಂಡಿದೆ. ಅದನ್ನು ಭಾರತದ ನೆಲಕ್ಕೂ ಹಬ್ಬಿಸಲು ಐಎಸ್‌ಐ ಪ್ರಯತ್ನಿಸುತ್ತಿದೆ ಎಂದು ಗುಪ್ತಚರ ಇಲಾಖೆ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ. ಪಾಕಿಸ್ತಾನವು ಈ ಉದ್ವಿಗ್ನತೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತದೆ. ಅಲ್ಲದೇ ದೇಶದಲ್ಲಿ ಧಾರ್ಮಿಕ ಯುದ್ಧವನ್ನು ಸೃಷ್ಟಿಸಲು ಪ್ರಯತ್ನಸುತ್ತಿದೆ ಎಂದು ತನಿಖಾ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

RAW ವರದಿಯ ಪ್ರಕಾರ ಐಸಿಸ್‌, ಭಾರತದಲ್ಲಿನ ಶಿಯಾ ಸಮುದಾಯವನ್ನು ಹಿಂಸಾಚಾರಕ್ಕೆ ಗುರಿಯಾಗಿಸಬಹುದು, ಇರಾನ್ ವಿರೋಧಿ ನಿಲುವನ್ನು ತೆಗೆದುಕೊಳ್ಳುವಂತೆ ಮಾಡುವ ಮೂಲಕ ಪಂಥೀಯ ಗಲಭೆಗಳು ಮತ್ತು ಶಿಯಾ ಮುಸ್ಲಿಮರ ಹತ್ಯಾಕಾಂಡ ಸಂಭವಿಸಬಹುದು. ಗಲಭೆ ಭಾರತದೊಳಗೆ ಮಾತ್ರವಲ್ಲದೆ ಮಧ್ಯಪ್ರಾಚ್ಯ ಹಾಗೂ ಪ್ರಪಂಚದಾದ್ಯಂತ ನಡೆಯಬಹುದು ಎಂದು ಎಚ್ಚರಿಕೆಯನ್ನು ನೀಡಿದೆ. ಗಲಭೆಯಿಂದ ದೇಶದ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಭದ್ರತಾ ಸಂಸ್ಥೆ ಶಂಕಿಸಿದೆ.

ಭಾರತದಲ್ಲಿ ಶಿಯಾ ಸಮುದಾಯವು ವಿಶೇಷವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿ ರಾಜ್ಯಗಳಲ್ಲಿ ನೆಲೆಯೂರಿದ್ದಾರೆ. ಇರಾನ್ ವಿರೋಧಿ ನಿಲುವಿನಿಂದಾಗಿ ಸ್ಥಳೀಯ ಸುನ್ನಿ ಗುಂಪುಗಳಿಂದ ದಾಳಿ ಮಾಡಿಸಿ ಧಾರ್ಮಿಕ ಕಲಹವನ್ನು ಸೃಷ್ಟಿ ಮಾಡುವುದು ಐಎಐ ಗುರಿಯಾಗಿದೆ ಎಂದು ತಿಳಿದು ಬಂದಿದೆ. ಭಾರತದಲ್ಲಿನ ಶಿಯಾ ಸಮುದಾಯದ ಮೇಲೆ ಪ್ರಭಾವ ಬೀರಲು ಐಸಿಎಸ್‌ ಧಾರ್ಮಿಕ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

ಇನ್ನುಈ ಕೃತ್ಯದಲ್ಲಿ ಇರಾಕ್ ಮೂಲದ ಧರ್ಮಗುರುಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಇಬ್ಬರು ಧರ್ಮಗುರುಗಳು ಇದರಲ್ಲಿ ಭಾಗಿಯಾಗಿದ್ದು, ಐಎಸ್‌ಐ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಇಬ್ಬರು ಧರ್ಮಗುರುಗಳು ಶಿಯಾ ಸಮುದಾಯದಲ್ಲಿ ಪ್ರಭಾವಿಗಳಾಗಿರುವುದು ಮಾತ್ರವಲ್ಲದೆ ಐಎಸ್‌ಐ ಚಟುವಟಿಕೆಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವ ಶಂಕೆ ಇದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಗುಪ್ತಚರ ವರದಿಯು ಸೂಚಿಸುವ ಪ್ರಕಾರ ಈ ಮಾಡ್ಯೂಲ್‌ಗಳಲ್ಲಿ ಒಂದನ್ನು ಹಿಂದೆ ಮುಂಬೈನಲ್ಲಿ ನೆಲೆಸಿದ್ದ ಪ್ರಸಿದ್ಧ ಧರ್ಮಗುರು ನೇತೃತ್ವ ವಹಿಸಿದ್ದ. ಆದರೆ ನಂತರ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದು, ಪ್ರಸ್ತುತ ಇಸ್ಲಾಮಿಕ್ ಸೆಂಟರ್ ಆಫ್ ಇಂಗ್ಲೆಂಡಿನಲ್ಲಿ ಸಕ್ರಿಯರಾಗಿದ್ದಾನೆ. ಈತ ಇಸ್ಲಾಂ ಧರ್ಮ ಗ್ರಂಥಗಳನ್ನು ಅಪಾರ ಜ್ಞಾನ ಹೊಂದಿದ್ದು, ಇಂಗ್ಲೆಂಡ್‌ ಮತ್ತು ಭಾರತದಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದಾರೆ.

ಇತರ ಮಾಡ್ಯೂಲ್ ಅನ್ನು ಇನ್ನೊಬ್ಬ ಧರ್ಮಗುರು ನಿರ್ವಹಿಸುತ್ತಿದ್ದಾನೆ. ಮುಂಬೈ ನಿವಾಸಿಯಾದ ಆತ ಈಗ ಹೆಚ್ಚಿನ ಸಮಯವನ್ನು ಭಾರತದ ಹೊರಗೆ ಕಳೆಯುತ್ತಿದ್ದಾನೆ. ಆತ ಶಿಯಾ ಸಮುದಾಯದ ಪ್ರಮುಖ ವ್ಯಕ್ತಿಯಾಗಿದ್ದಾರೆ. ಧಾರ್ಮಿಕ ಕೂಟಗಳನ್ನು ಮೇಲ್ವಿಚಾರಣೆ ಮಾಡುವುದು, ಕಾರ್ಯಕ್ರಮಗಳನ್ನು ಆಯೋಜಿಸುವುದು ಅಥವಾ ಶಿಯಾ ಸಂಪ್ರದಾಯಗಳಿಗೆ ಪ್ರಮುಖವಾದ ಸೇವೆಗಳನ್ನು ಸಂಯೋಜಿಸುವುದು ಮುಂತಾದವುಗಳನ್ನು ನಿರ್ವಹಿಸುತ್ತಾನೆ ಎಂದು ರಾ ಹೇಳಿದೆ.

ಇದನ್ನೂ ಓದಿ : Bharat Mata ki Jai: ಪಾಕಿಸ್ತಾನ ಪರ ಘೋಷಣೆ: ತ್ರಿವರ್ಣ ಧ್ವಜಕ್ಕೆ ವಂದಿಸಿ, ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುವ ಶಿಕ್ಷೆ ಕೊಟ್ಟ ಹೈಕೋರ್ಟ್

ಸೂಕ್ಷ್ಮ ತನಿಖೆಯ ನಡೆಯುತ್ತಿರುವುದರಿಂದ ಧರ್ಮಗುರುಗಳ ಗುರುತುಗಳನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಭಾರತೀಯ ಭದ್ರತಾ ಏಜೆನ್ಸಿಗಳು ಅವರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದು, ಯಾವುದೇ ರೀತಿಯ ಅಶಾಂತಿ ವಾತಾವರಣ ಸೃಷ್ಟಿಯಾಗದಂತೆ ಎಚ್ಚರ ವಹಿಸಲಿದೆ. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ತನಿಖೆ ನಡೆಸುತ್ತಿದೆ.