ಹೊಸದಿಲ್ಲಿ: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರು (KL Rahul) ಭಾರತ ʼಎʼ ತಂಡದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಮೆಲ್ಬೋರ್ನ್‌ನಲ್ಲಿ ಗುರುವಾರ ಆರಂಭವಾಗಿರುವ ಭಾರತ ʼಎʼ ಹಾಗೂ ಆಸ್ಟ್ರೇಲಿಯಾ ʼಎʼ ತಂಡಗಳ ನಡುವಣ ಮೊದಲನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ತಂಡದ ಪರ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಎದುರಿಸಿದ 4 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಸ್ಕಾಟ್ ಬೊಲೆಂಡ್‌ಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೂ ಮುನ್ನ ಕನ್ನಡಿಗ ಕೆಎಲ್ ರಾಹುಲ್‌ಗೆ ಭಾರಿ ಹಿನ್ನಡೆಯಾಗಿದೆ.
ಆಸ್ಟ್ರೇಲಿಯಾ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಅವರು ಭಾರತʼಎʼ ತಂಡದಲ್ಲಿದ್ದಾರೆ ಮತ್ತು ಇಲ್ಲಿನ ಕಂಡೀಷನ್ಸ್‌ಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ, ಆಸ್ಟ್ರೇಲಿಯಾ ʼಎʼ ವಿರುದ್ದದ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ವೈಯಕ್ತಿಕ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಆ ಮೂಲಕ ಟೀಕೆಗಳಿಗೆ ಗುರಿಯಾಗಿದ್ದಾರೆ.
ಕಳೆದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ ಕೆಎಲ್ ರಾಹುಲ್ ಆಡಿದ್ದರು. ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಅವರು ಪ್ರಥಮ ಇನಿಂಗ್ಸ್‌ನಲ್ಲಿ ಡಕ್‌ಔಟ್ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 12 ರನ್‌ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದರ ಪರಿಣಾಮ ಪುಣೆ ಮತ್ತು ಮುಂಬೈ ಟೆಸ್ಟ್ ಪಂದ್ಯಗಳಿಗೆ ಅವರನ್ನು ಬೆಂಚ್ ಕಾಯಿಸಲಾಗಿತ್ತು. ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರೆಣಿಯಲ್ಲಿಯೂ ಕೆಎಲ್ ರಾಹುಲ್ ಅವರ ಪ್ಲೇಯಿಂಗ್ XIನಲ್ಲಿನ ಸ್ಥಾನದ ಬಗ್ಗೆ ಇನ್ನು ಖಚಿತತೆ ಇಲ್ಲ. ಏಕೆಂದರೆ ಸರ್ಫರಾಝ್ ಖಾನ್ ಅವರು ಐದನೇ ಕ್ರಮಾಂಕದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಆರಂಭಿಕ ಟೆಸ್ಟ್‌ಗೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಲಿದ್ದಾರೆ. ಈ ಕಾರಣದಿಂದಾಗಿ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಇನಿಂಗ್ಸ್ ಆರಂಭಿಸಲು ಕೆಎಲ್ ರಾಹುಲ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಅವರನ್ನು ಭಾರತ ʼಎʼಪರ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಲಾಗಿತ್ತು. ಆದರೆ, ಅವರು ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 4 ರನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಟೀಮ್ ಮ್ಯಾನೇಜ್‌ಮೆಂಟ್‌ಗೆ ಭಾರಿ ನಿರಾಶೆಯನ್ನು ಮೂಡಿಸಿದ್ದಾರೆ.
ಕೆಎಲ್ ರಾಹುಲ್ ಸೇರಿದಂತೆ ಭಾರತ ʼಎʼ ಪರ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ಕೂಡ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ್ದಾರೆ. ಅಭಿಮನ್ಯು ಈಶ್ವರನ್ ಹಾಗೂ ಸಾಯ್ ಸುದರ್ಶನ್ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಋತುರಾಜ್ ಗಾಯಕ್ವಾಡ್ ಅವರು ಕೂಡ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಕೇವಲ 26 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಧ್ರುವ್ ಜುರೆಲ್ ಅರ್ಧಶತಕ
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಧ್ರುವ್ ಜುರೆಲ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಅವರು ಪಂದ್ಯದ ಮೊದಲನೇ ದಿನದ ಟೀ ವಿರಾಮದ ಹೊತ್ತಿಗೆ ಜುರೆಲ್ ಅವರು 183 ಎಸೆತಗಳಲ್ಲಿ ಅಜೇಯ 80 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಅಪಾಯಕ್ಕೆ ಸಿಲುಕಿದ್ದ ತಂಡವನ್ನು ಮೇಲೆತ್ತುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡುತ್ತಿರುವ ವೇಗಿ ಪ್ರಸಿಧ್ ಕೃಷ್ಣ ಅಜೇಯ 11 ರನ್ ಗಳಿಸಿದ್ದಾರೆ. ಅಂದಹಾಗೆ ಟೀ ವಿರಾಮದ ಹೊತ್ತಿಗೆ ಭಾರತ ʼಎʼ ತಂಡ 53 ಓವರ್‌ಗಳಿಗೆ ೮ ವಿಕೆಟ್‌ಗಳ ನಷ್ಟಕ್ಕೆ 153 ರನ್‌ಗಳನ್ನು ಗಳಿಸಿದೆ.
ಈ ಸುದ್ದಿಯನ್ನು ಓದಿ: KL Rahul: ರಾಹುಲ್ ಆರ್‌ಸಿಬಿ ಸೇರುವುದು ಅನುಮಾನ; ಸುಳಿವು ಬಿಟ್ಟುಕೊಟ್ಟ ಅನಿಲ್ ಕುಂಬ್ಳೆ