Friday, 22nd November 2024

ಕೋವಿಡ್ ನಡುವೆಯೂ ರಾಜ್ಯದ ಅಭಿವೃದ್ಧಿ ನಿರಂತರ:  ಸಿಎಂ ಬಿ.ಎಸ್. ಯಡಿಯೂರಪ್ಪ

243.35 ಕೋಟಿ ವೆಚ್ಚದ ಬೃಹತ್ ನೀರಾವರಿ ಯೋಜನೆ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ

ಹೊಸಪೇಟೆ: ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ನಿಯಮಿತದ ವತಿಯಿಂದ 243.35 ಕೋಟಿ ರೂ.ಗಳ ವೆಚ್ಚದಲ್ಲಿ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಪಾಪಿನಾಯನಕನಹಳ್ಳಿ ಹಾಗೂ ಸುತ್ತಮುತ್ತಲಿನ  ಗ್ರಾಮಗಳಿಗೆ ನೀರನ್ನು ಎತ್ತಿ ಶಾಶ್ವತ ಕುಡಿಯುವ ನೀರು ಪೂರೈಸುವ ಮತ್ತು 22ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವರ್ಚುವಲ್ ತಂತ್ರಜ್ಞಾನದ ಮೂಲಕ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.

ಮುಖ್ಯಮಂತ್ರಿಗಳು ವರ್ಚುವಲ್ ತಂತ್ರಜ್ಞಾನದ ಮೂಲಕ ಬೆಂಗಳೂರಿನ ಗೃಹಕಚೇರಿಯಿಂದಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೇ ಪಾಪಿನಾಯಕ ನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ, ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್, ಸಂಸದ ವೈ.ದೇವೇಂದ್ರಪ್ಪ,ಹುಡಾ ಅಧ್ಯಕ್ಷ ಅಶೋಕ‌ ಜೀರೆ,ತಾಪಂ ಅಧ್ಯಕ್ಷೆ ನಾಗವೇಣಿ, ನೀರಾವರಿ ಇಲಾಖೆಯ ಮಂಜಪ್ಪ, ಎಡಿಸಿ ಪಿ.ಎಸ್. ಮಂಜುನಾಥ, ತಹಸೀ ಲ್ದಾರ್ ವಿಶ್ವನಾಥ ಮತ್ತಿತರರು ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ಸಂತೋಷದಿಂದ ಈ ಕಾಮಗಾರಿ ಯನ್ನು ಉದ್ಘಾಸಿದ್ದೇನೆ. ಈ ಬೃಹತ್ ನೀರಾವರಿ ಯೋಜನಾ ಕಾಮಗಾರಿ ಯನ್ನು ಶೀಘ್ರದಲ್ಲಿ ಪ್ರಾರಂಭಿಸುವುದಾಗಿ ವಿಜಯನಗರ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದಾಗ ಹೇಳಿದ್ದೆ. ಅದನ್ನು ಈಡೇರಿಸುವ ಮೂಲಕ ನಾನು ಹಾಗೂ ನಮ್ಮ ಸರಕಾರ ನುಡಿದಂತೆ ನಡೆದುಕೊಂಡಿದ್ದೇವೆ ಎಂದರು.

ಸರಕಾರವು ನೀರಾವರಿ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುತ್ತಿದೆ ಎಂದು ಹೇಳಿದ ಅವರು ನಾಡಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಎಫೆಕ್ಟ್ ನಡುವೆಯೂ ಅಭಿವೃದ್ಧಿಗೆ ಕುಂಠಿತ ವಾಗದಂತೆ ನೋಡಿಕೊಳ್ಳಲಾಗಿದೆ ಎಂದರು.

ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯ ಮೇಲ್ಬಾಗದಲ್ಲಿ ಬರುತ್ತಿದ್ದು, ಸದರಿ ಗ್ರಾಮಗಳು ಗಣಿ ಬಾಧಿತ ಹಾಗೂ ಅತಿ ಹಿಂದುಳಿದ ಗ್ರಾಮ ಗಳಾಗಿದ್ದು, ಇವುಗಳು ಸುಸ್ಥಿರ, ಸುರಕ್ಷಿತ ಕುಡಿಯುವ ನೀರಿನ ಬವಣೆಯನ್ನು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಗ್ರಾಮ ಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವುದು ಮತ್ತು ಇಂಪೌಂಡಿಂಗ್ ಕೆರೆಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಅತಿ ಹಿಂದುಳಿದ ಗಣಿ ಭಾದಿತ ಹಾಗೂ ಕುಡಿಯುವ ನೀರಿನ ಭಾದಿತ ಗ್ರಾಮಗಳಾಗಿವೆ.ಈ ಯೋಜನೆಯ ಅಡಿಯಲ್ಲಿ 10 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಹಾಲಿ 22 ಕೆರೆಗಳಿಗೆ ಮತ್ತು ಹೊಸ 4 ಇಂಪೌಂಡಿಗ್ ರಿಸರ್ವಯರ್‌ಗಳನ್ನು ನಿರ್ಮಿಸಿ ತುಂಗಭದ್ರಾ ನದಿಯಿಂದ ನಿಂಬಾಪುರ, ಗ್ರಾಮದ ಹತ್ತಿರ ಜಾಕ್ವೆಲ್ ನಿರ್ಮಿಸಿ ರೈಸಿಂಗ್ ಮೇನ್ ಮತ್ತು ವಿತರಣಾ ಪೈಪ್ ಲೈನ್ ಮುಖಾಂತರ 0.304 ಟಿ.ಎಮ್.ಸಿ. ನೀರನ್ನು ತುಂಬಿಸಲು ಯೋಜಿಸಲಾಗಿದೆ ಎಂದರು.

ಇಂಗಳಿಗಿ,ಬೈಲುವದ್ದಿಗೇರಿ,ಕಾಕುವಾಳು,ಚಿನ್ನಾಪುರ,ನಲ್ಲಾಪುರ,ಗಾಳೇಮ್ಮಗುಡಿ, ಭುವನಹಳ್ಳಿ, ಜೋಗ, ಗಾದಿಗನೂರು, ಕಾರಿಗ ನೂರು, ವಡ್ಡರಹಳ್ಳಿ, ಧರ್ಮಸಾಗರ, ಕೊಟಗಿನಹಾಳ್, ಗುಂಡ್ಲವದ್ದಿಗೇರಿ ಗ್ರಾಮಗಳ 22 ಕೆರೆಗಳಿಗೆ ನೀರನ್ನು ತುಂಬಿಸ ಲಾಗುತ್ತದೆ ಎಂದರು.

ಈ ಯೋಜನೆಯಿಂದ ಹೊಸಪೇಟೆ ತಾಲ್ಲೂಕಿನ 10 ಗ್ರಾಮಗಳ 22 ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳು ಪುನಶ್ವೇತನಗೊಳ್ಳುತ್ತವೆ ಮತ್ತು ಗ್ರಾಮಗಳ ಜನಜಾನುವಾರುಗಳಿಗೆ ಶಾಶ್ವತ ಸುಸ್ಥಿರ ಕುಡಿಯುವ ನೀರನ್ನು ಒದಗಿಸಲು ಅನುವಾಗುವುದು ಮತ್ತು ಕರೆಗಳಡಿಯಲ್ಲಿ ಬರುವ ನೀರಾವರಿ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ. ಸದರಿ ಯೋಜನೆಗೆ ಸರ್ಕಾರವು 243.35 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ಸಂಸದ ದೇವೇಂದ್ರಪ್ಪ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಬೃಹತ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನಿಸಲಾಗುವುದು ಎಂದರು.