ಬೆಂಗಳೂರು : ಡಾಕ್ಟರ್ ಆಗಬೇಕು ಎಂದು ಕನಸು ಹೊಂದಿರುವ ಎಸ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ (Karnataka Government) ಗುಡ್ ನ್ಯೂಸ್ ನೀಡಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದು ನೀಟ್ (NEET) ಪ್ರವೇಶಾತಿ ಪರೀಕ್ಷೆಯಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಸೀಟ್ ಸಿಗದೇ ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಸೀಟ್ ಪಡೆದುಕೊಂಡ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸರ್ಕಾರ 25 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕೆಂದು ನಿರ್ಧರಿಸಿದೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಸರ್ಕಾರಿ ಕೋಟಾ ಸಿಗದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡಲು ಮುಂದಾಗಿದ್ದು ಮೊದಲ ವರ್ಷದ ಕಾಲೇಜು ಶುಲ್ಕ 25 ಲಕ್ಷ ರೂ. ನೀಡಲಿದೆ ಎಂದು ತಿಳಿದು ಬಂದಿದೆ. ಇಷ್ಟೇ ಅಲ್ಲದೆ ಪ್ರೋತ್ಸಾಹ ಧನ ಪಡೆದ ವಿದ್ಯಾರ್ಥಿಗಳು ಮೊದಲ ವರ್ಷ ಶೇ 60 ಕ್ಕಿಂತ ಹೆಚ್ಚು ಅಂಕ ಪಡೆದರೆ ಪ್ರೋತ್ಸಾಹ ಧನ ಎರಡನೇ ವರ್ಷಕ್ಕೂ ಮುಂದುವರಿಯಲಿದೆ.
ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕೇವಲ ವೈದ್ಯಕೀಯ ಶಿಕ್ಷಣ ಓದುವವರಿಗೆ ಮಾತ್ರ ಅಲ್ಲದೆ ಐಐಟಿ, ಐಐಎಂ, ಎನ್‌ಟಿ ಗೆ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಒಂದು ಬಾರಿ ನೀಡುವ ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡಲಾಗಿದೆ. ಈ ಮೊದಲು1 ಲಕ್ಷ ನೀಡುತ್ತಿದ್ದು, ಇನ್ನು ಮುಂದೆ 2 ಲಕ್ಷ ನೀಡಬೇಕೆಂದು ತೀರ್ಮಾನಿಸಲಾಗಿದೆ. 2018ರಲ್ಲಿಯೇ ಹೆಚ್ಚಳಕ್ಕೆ ಆದೇಶವನ್ನು ಹೊರಡಿಸಲಾಗಿತ್ತು. ಇದೀಗ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನ ನೀಡುವ ಅಂಶದ ಜೊತೆ ಬೇರೆ ವೃತ್ತಪರ ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹ ಧನ ಬಗ್ಗೆ ನೀಡುವ ಅಂಶವನ್ನು ಹೊರಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Menstrual Leave: ವರ್ಷಕ್ಕೆ 6 ದಿನ ಮುಟ್ಟಿನ ರಜೆ ನೀಡಲು ಮುಂದಾದ ಕರ್ನಾಟಕ ಸರ್ಕಾರ
ವಿದ್ಯಾರ್ಥಿಗಳ ಮನವಿಗೆ ಅಸ್ತು ಎಂದ ಸಿಎಂ
ಪಿಯುಸಿಯಲ್ಲಿ ಉತ್ತಮ ಅಂಕ ತೆಗೆದು ನೀಟ್ ಉತ್ತೀರ್ಣರಾಗಿದ್ದರೂ ಸರ್ಕಾರಿ ಕೋಟ ಸಿಗದೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ತುಂಬಲಾಗದೆ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ, ಸರ್ಕಾರ ಸಹಾಯಧನ ನೀಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಕೆಲ ವಿದ್ಯಾರ್ಥಿಗಳು ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಿಎಂ ಈ ನಿರ್ಧಾರ ಕೈ ಗೊಂಡಿದ್ದಾರೆ ಎಂದು ತಿಳಿದು ಬಂದಿದೆ.