Friday, 22nd November 2024

Rahul Gandhi: ರಾಹುಲ್‌ ಗಾಂಧಿ ವಿರುದ್ಧ ʻರಾಯಲ್‌ʼ ಲೀಡರ್ಸ್‌ ರೆಬೆಲ್‌- ರಾಜಮನೆತನಗಳ ಬಗ್ಗೆ ಕಾಂಗ್ರೆಸ್‌ ನಾಯಕ ಹೇಳಿದ್ದೇನು?

rahul gandhi

ನವದೆಹಲಿ: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಕಾಂಗ್ರೆಸ್‌ ನಾಯಕ(Congress leader) ರಾಹುಲ್‌ ಗಾಂಧಿ(Rahul Gandhi) ಇದೀಗ ರಾಜಮನೆತನಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ರಾಹುಲ್‌ ಗಾಂಧಿ, ರಾಜಮನೆತನಗಳ ಬಗ್ಗೆ ಕೀಳಾಗಿ ಬರೆದಿದ್ದರು. ಅಲ್ಲಲ್ಲಿ ಆಡಳಿತದಲ್ಲಿದ್ದ ಸಾಮಂತ ರಾಜರು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಗೆ ಹೆದರಿ ಕುಳಿತ ಕಾರಣ ಇಡೀ ದೇಶವೇ ಸರ್ವನಾಶ ಆಗುವಂತಾಯಿತು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು. ಇದೀಗ ಈ ಲೇಖನದ ದೇಶಾದ್ಯಂತ ಹಲವು ರಾಜಮನೆತನಗಳ ಮುಖಂಡರ ಕೋಪಕ್ಕೆ ತುತ್ತಾಗಿದೆ. ಅಲ್ಲದೇ ಅನೇಕರು ರಾಹುಲ್‌ ಗಾಂಧಿ ವಿರುದ್ಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್‌ ಗಾಂಧಿ ಹೇಳಿಕೆಗೆ ಮೈಸೂರಿನ ಒಡೆಯರು, ಬಿಜೆಪಿ ಸಂಸದ ಯದುವೀರ್‌ ಒಡೆಯರ್‌ ಕಿಡಿಕಾಡಿದ್ದು, ನಿಜವಾದ ಇತಿಹಾಸದ ಜ್ಞಾನದ ಕೊರತೆಯು ಮತ್ತೊಮ್ಮೆ ಪ್ರದರ್ಶನಗೊಂಡಿದೆ. ಹಿಂದಿನ ರಾಜಪ್ರಭುತ್ವದ ರಾಜ್ಯಗಳು ಇಂದಿನ ಭಾರತಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಅವರ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ. ಇಲ್ಲದಿದ್ದರೆ, ನಾವು ಇಂದು ಪ್ರೀತಿಸುವ ಅನೇಕ ಸಂಪ್ರದಾಯಗಳನ್ನು ಕಳೆದುಕೊಂಡಿರಬಹುದು. ರಾಹುಲ್‌ ಗಾಂಧಿ ಹೇಳಿಕೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

ಜೈಪುರದ ರಾಜವಂಶದ ಕೊನೆಯ ಆಡಳಿತ ಮಹಾರಾಜ ಮಾನ್ ಸಿಂಗ್ II ರ ಮೊಮ್ಮಗಳು, ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ, ರಾಹುಲ್ ಅವರ ಅಭಿಪ್ರಾಯವನ್ನು “ಭಾರತದ ಹಿಂದಿನ ರಾಜಮನೆತನದವರನ್ನು ಕೆಣಕುವ ಪ್ರಯತ್ನ” ಎಂದು ಕರೆದಿದ್ದಾರೆ.

1947 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಿಂದ ಭಾರತವು ಸ್ವಾತಂತ್ರ್ಯಗೊಳ್ಳುವವರೆಗೆ ಗ್ವಾಲಿಯರ್ ಅನ್ನು ಆಳಿದ ಸಿಂಧಿಯಾ ಕುಟುಂಬದಿಂದ ಬಂದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯಾ ಅವರು ಕೂಡ ರಾಹುಲ್‌ ಹೇಳಿಕೆಯನ್ನು ಖಂಡಿಸಿದ್ದಾರೆ.

ಮಾಜಿ ಕಾಂಗ್ರೆಸ್ ನಾಯಕ ಮತ್ತು ಕಾಶ್ಮೀರದ ಡೋಗ್ರಾ ರಾಜವಂಶದ ಉತ್ತರಾಧಿಕಾರಿಯಾಗಿದ್ದ ಮಹಾರಾಜ ಸರ್ ಹರಿ ಸಿಂಗ್ ಅವರ ಮೊಮ್ಮಗ ವಿಕ್ರಮಾದಿತ್ಯ ಸಿಂಗ್, ರಾಹುಲ್ ಗಾಂಧಿಯವರಿಗೆ ಇತಿಹಾಸದ ಬಗೆಗಿನ ಜ್ಞಾನದ ಕೊರತೆ ಇದೆ ಎಂದು ಕರೆದರು.

ಹಿಂದಿನ ಜೈಸಲ್ಮೇರ್ ಸಾಮ್ರಾಜ್ಯವನ್ನು ಆಳಿದ ಕುಟುಂಬದ ವಂಶಸ್ಥರಾದ ಚೈತನ್ಯ ರಾಜ್ ಸಿಂಗ್ ಅವರು ರಾಹುಲ್ ಗಾಂಧಿಯವರ ಹೇಳಿಕೆಗಳನ್ನು “ಆಧಾರರಹಿತ” ಎಂದು ಹೇಳಿದ್ದಾರೆ.

ಉದಯಪುರದಲ್ಲಿ 1,500 ವರ್ಷಗಳಷ್ಟು ಹಳೆಯದಾದ ಮೇವಾರ್ ಹೌಸ್‌ನ ವಂಶಸ್ತ ಲಕ್ಷ್ಯರಾಜ್ ಸಿಂಗ್ ಮೇವಾರ್ ರಾಹುಲ್‌ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡರು. “ವಸಾಹತುಶಾಹಿ ರಚನೆಯಿಂದ ವಿಭಜನೆಯಾಗಿದ್ದರೂ, ರಾಜ ಕುಟುಂಬಗಳು ಯಾವಾಗಲೂ ತಮ್ಮ ಜನರ ರಕ್ಷಕರಾಗಿದ್ದಾರೆ ಮತ್ತು ಭಾರತದ ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಭೂದೃಶ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಗೆ ಬರೆದ ಅಂಕಣದಲ್ಲಿ ರಾಹುಲ್‌ ಗಾಂಧಿ ಈಸ್ಟ್‌ ಇಂಡಿಯಾ ಕಂಪನಿಯ 150 ವರ್ಷಗಳ ದಬ್ಬಾಳಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಲೇಖನದಲ್ಲಿ ಅವರು ಬ್ರಿಟಿಷರ ಕಾಲದಲ್ಲಿ ಆಡಳಿತದಲ್ಲಿದ್ದ ರಾಜಮನೆತನಗಳು ಅಗತ್ಯಕ್ಕಿಂತ ಹೆಚ್ಚು ಬ್ರಿಟಿಷರಿಗೆ ನಿ‍ಷ್ಟಾವಂತರಾಗಿದ್ದರು. ಇದರಿಂದಾಗಿ ದೇಶ ಅವನತಿ ಹೊಂದುವಂತೆ ಮಾಡಿತು ಎಂದು ಅವರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ಕಾರ್ಮಿಕರೊಂದಿಗೆ ಬಂಗಲೆಗೆ ಬಣ್ಣ ಬಳಿದು, ಮಡಿಕೆ ತಯಾರಿಸಿದ ರಾಹುಲ್‌ ಗಾಂಧಿ; ಕಾಂಗ್ರೆಸ್‌ ನಾಯಕನ ಸರಳತೆಗೆ ಜೈ ಎಂದ ನೆಟ್ಟಿಗರು