ಮುಂಬೈ : ಮುಂಬೈ ಲೋಕಲ್ ರೈಲಿನಲ್ಲಿ, ವಿಶೇಷವಾಗಿ ಜನದಟ್ಟಣೆ ಹೆಚ್ಚಾಗಿರುವಂತಹ ಸಮಯದಲ್ಲಿ ಕುಳಿತುಕೊಳ್ಳಲು ಸೀಟು ಪಡೆಯುವುದೇ ಒಂದು ಸವಾಲಿನ ಕೆಲಸ. ಎಷ್ಟೋ ಜನರು ಸೀಟಿಗಾಗಿಯೇ ಕಿತ್ತಾಡುತ್ತಾರೆ. ಇದೆಲ್ಲ ರಗಳೆ ಬೇಡ ಎಂದು ಇಲ್ಲೊಬ್ಬ ವ್ಯಕ್ತಿ ಸೀಟಿಗಾಗಿ ಪರದಾಡುವುದನ್ನು ತಪ್ಪಿಸಲು ತಮ್ಮ ಸ್ವಂತ ಕುರ್ಚಿಯನ್ನು ತೆಗೆದುಕೊಂಡು ಬಂದು ಅದರ ಮೇಲೆ ಕುಳಿತಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ರೈಲಿನಲ್ಲಿ ಮಡಚಿದ ಪ್ಲಾಸ್ಟಿಕ್ ಕುರ್ಚಿಯನ್ನು ಬ್ಯಾಗ್‍ನಿಂದ ತೆಗೆದು ಬಿಡಿಸಿಕೊಂಡು ಆರಾಮವಾಗಿ ಕುಳಿತಿದ್ದಾರೆ. ರೈಲಿನಲ್ಲಿ ನೂಕುನುಗ್ಗಲಿನಲ್ಲಿ ತಮ್ಮ ಪ್ರಯಾಣವನ್ನು ಆರಾಮವಾಗಿರಲು ಅವರು ಈ ಪ್ಲ್ಯಾನ್ ಮಾಡಿದ್ದಾರೆ. ಸೀಟಿಗಾಗಿ ಇತರರಲ್ಲಿ ಅಂಗಲಾಚಿ ಬೇಡುವುದನ್ನು ತಪ್ಪಿಸಲು ಆ ವ್ಯಕ್ತಿ ಮಾಡಿದ ಪ್ಲ್ಯಾನ್ ಅನ್ನು ಕಂಡು ಅನೇಕರು ಪ್ರಭಾವಿತರಾಗಿದ್ದಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು @borivali_churchgate_bhajan ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅನೇಕರು ‘ಇದು ಒಳ್ಳೆಯ ಫ್ಲ್ಯಾನ್” ಎಂದು ಹೊಗಳಿದ್ದಾರೆ.
ಇದನ್ನೂ ಓದಿ:ನೋಡ ನೋಡ್ತಿದ್ದಂತೆಯೇ ಸ್ಟೇಡಿಯಂನಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ ಅಥ್ಲೀಟ್! ಭಾರೀ ವೈರಲಾಗ್ತಿದೆ ಈ ವಿಡಿಯೊ
ರೈಲಿನಲ್ಲಿ ನಡೆದ ಇಂತಹ ಘಟನೆ ಇದೆ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಪ್ರಯಾಣಿಕರೊಬ್ಬರು ರೈಲಿನಲ್ಲಿ ಸ್ವತಃ ಬೆರ್ತ್ ರೆಡಿ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ವಿಡಿಯೊದಲ್ಲಿ ಪ್ರಯಾಣಿಕರೊಬ್ಬರು ಜೋಳಿಗೆಯನ್ನು ಕಟ್ಟಿದ್ದಾರೆ. ಅವರು ದಪ್ಪ ಹಗ್ಗವನ್ನು ತೆಗೆದುಕೊಂಡು ಅದನ್ನು ಮೇಲಿನ ಎರಡು ಬೆರ್ತ್‍ಗಳ ಮಧ್ಯದಲ್ಲಿ ಜೋಡಿಸಿಕೊಂಡು ಆರಾಮದಾಯಕ ಆಸನ ರೆಡಿ ಮಾಡಿದ್ದಾರೆ.