ಹೊಸದಿಲ್ಲಿ: ಫೆಮಾ (Foreign Exchange Management Act-FEMA) ತನಿಖೆಯ ಭಾಗವಾಗಿ ಇ-ಕಾಮರ್ಸ್ ದೈತ್ಯ ಕಂಪೆನಿಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಫ್ಲಾಟ್‌ಫಾರ್ಮ್‌ಗಳ ಕೆಲವು ಮಾರಾಟಗಾರರ ಮೇಲೆ ಜಾರಿ ನಿರ್ದೇಶನಾಲಯ (Enforcement Directorate) ಗುರುವಾರ (ನ. 7) ದಾಳಿ ನಡೆಸಿದೆ. ಈ ಮಾರಾಟಗಾರರಿಗೆ ಸೇರಿದ ಕನಿಷ್ಠ 15ರಿಂದ 16 ಸ್ಥಳಗಳ ಮೇಲೆ ಕೇಂದ್ರ ಸಂಸ್ಥೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ (ED Raids).
ಆಯ್ದ ಮಾರಾಟಗಾರರಿಗೆ ಆದ್ಯತೆ ನೀಡುವ ಮೂಲಕ ಮತ್ತು ಕೆಲವು ಉತ್ಪನ್ನಗಳಿಗೆ ತೀವ್ರ ರಿಯಾಯಿತಿ ಒದಗಿಸುವ ಮೂಲಕ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಭಾರತೀಯ ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘಿಸಿವೆ ಎನ್ನುವುದು ಆ್ಯಂಟಿಟ್ರಸ್ಟ್ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿಲ್ಲಿ, ಗುರುಗ್ರಾಮ (ಹರಿಯಾಣ), ಹೈದರಾಬಾದ್, ಬೆಂಗಳೂರು ಮತ್ತು ಮುಂಬೈ ಸೇರಿದಂತೆ ದೇಶದ ಹಲವು ದೊಡ್ಡ ನಗರಗಳಲ್ಲಿ ನಗರಗಳಲ್ಲಿ ಈ ದಾಳಿ ನಡೆಸಲಾಗಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ʼಡಾರ್ಕ್ ಪ್ಯಾಟರ್ನ್ʼ ಬಳಕೆಗೆ ಸಂಬಂಧಿಸಿದ ಹಲವು ದೂರುಗಳನ್ನು ಪರಿಶೀಲಿಸುತ್ತಿದೆ ಮತ್ತು ಗ್ರಾಹಕ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸುವ ಆನ್‌ಲೈನ್ ಇ-ಕಾಮರ್ಸ್ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳು ʼಡಾರ್ಕ್ ಪ್ಯಾಟರ್ನ್ʼ ಬಳಸುವುದು ಭಾರತದಲ್ಲಿ ವಿವಾದ ಸೃಷ್ಟಿಸಿದೆ. ಯಾವುದೇ ಆನ್‌ಲೈನ್ ಪ್ಲಾಟ್ಫಾರ್ಮ್ನಲ್ಲಿ ಜನರನ್ನು ದಾರಿತಪ್ಪಿಸುವ ರೀತಿಯಲ್ಲಿ ಇಂಟರ್ಫೇಸ್ ಬಳಸಿ ವಂಚಿಸಲಾಗುವುದನ್ನು ʼಡಾರ್ಕ್ ಪ್ಯಾಟರ್ನ್ʼ ಎಂದು ಗುರುತಿಸಲಾಗಿದೆ.
ಹಿಂದೆಯೂ ದಾಳಿ ನಡೆದಿತ್ತು
ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್ ವಿರುದ್ದ ಈ ಹಿಂದೆಯೂ ಇಂತಹ ಆರೋಪ ಕೇಳಿ ಬಂದಿತ್ತು. ಸೆಪ್ಟೆಂಬರ್‌ನಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗ (Competition Commission of India) ನಡೆಸಿದ ತನಿಖೆಯಲ್ಲಿ ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್ ತಮ್ಮ ಫ್ಲಾಟ್‌ಫಾರ್ಮ್‌ಗಳಲ್ಲಿ ನಿರ್ದಿಷ್ಟ ಮಾರಾಟಗಾರರಿಗೆ ಒಲವು ತೋರುವ ಮೂಲಕ ಸ್ಥಳೀಯ ಸ್ಪರ್ಧಾತ್ಮಕ ಕಾನೂನುಗಳನ್ನು ಉಲ್ಲಂಘಿಸಿವೆ ಎನ್ನುವುದು ಬಹಿರಂಗಗೊಂಡಿತ್ತು.
ಇನ್ನು 2022ರ ಏಪ್ರಿಲ್‌ನಲ್ಲಿ ನಿಯಮ ಉಲ್ಲಂಘನೆಯ ಆರೋಪದ ಅಡಿಯಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವೇದಿಕೆಗಳ ಪ್ರಮುಖ ಮಾರಾಟಗಾರರ ಮೇಲೆ ಭಾರತೀಯ ಸ್ಪರ್ಧಾ ಆಯೋಗದ ಅಧಿಕಾರಿಗಳು ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಅಮೆಜಾನ್ ಮತ್ತು ಫಿಪ್‌ಕಾರ್ಟ್ ತಮ್ಮ ಆದ್ಯತೆಯ ಮಾರಾಟಗಾರರಿಗೆ ಹೆಚ್ಚಿನ ಒತ್ತು ನೀಡುತ್ತಿವೆ ಎಂಬ ಆರೋಪ ಕೇಳಿ ಬಂಧ ಹಿನ್ನೆಲೆಯಲ್ಲಿ ಸಿಸಿಐ 2020ರ ಜನವರಿಯಲ್ಲಿ ತನಿಖೆಗೆ ಆದೇಶ ಹೊರಡಿಸಿತ್ತು.
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸಲು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಪ್ರಭಾವ ಬೀರಲು ಹೆಚ್ಚು ರಿಯಾಯಿತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಹೊಡೆತ ಬೀಳುತ್ತಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಆಗಸ್ಟ್‌ನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ಧ್ವನಿ ಎತ್ತಿದ್ದರು.
ಈ ಸುದ್ದಿಯನ್ನೂ ಓದಿ: Stock Market: ಟ್ರಂಪ್ ಜಯಭೇರಿ ಬೆನ್ನಲ್ಲೇ ಷೇರುಪೇಟೆಯಲ್ಲಿ ಸಂಚಲನ; ಸೆನ್ಸೆಕ್ಸ್‌ನಲ್ಲಿ 1,000 ಪಾಯಿಂಟ್ಸ್ ಜಂಪ್