Thursday, 21st November 2024

Sandur By Election:‌ ವಾದಾ ದಿಯಾ, ಪೂರಾ ಕಿಯಾ; ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

Sandur By election

ಸಂಡೂರು: ಮಹಾರಾಷ್ಟ್ರದ ಬಿಜೆಪಿ “ಕರ್ನಾಟಕ ಸರ್ಕಾರ್ ವಾದಾ ಕಿಯಾ: ಧೋಖಾ ದಿಯಾ” ಎಂದು ಸುಳ್ಳು ಜಾಹಿರಾತು ನೀಡಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎನ್ನುವ ಅರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಾಗ್ದಾಳಿ ನಡೆಸಿದರು. ಸಂಡೂರು ಉಪಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ವಾದಾ ದಿಯಾ: ಪೂರಾ ಕಿಯಾ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.

ಸುಳ್ಳೇ ಬಿಜೆಪಿಯ ಮನೆ ದೇವರು

ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | No Smoking: ಸರ್ಕಾರಿ ಕಚೇರಿ, ಆವರಣಗಳಲ್ಲಿ ಧೂಮಪಾನ, ತಂಬಾಕು ಸೇವನೆ ನಿಷೇಧ

ಮೋದಿ ಹೇಳಿದ್ದೇನು? ಮಾಡಿದ್ದೇನು?

ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂತ ಹೇಳಿದ್ರಲ್ಲಾ ಮೋದಿಯವರೇ ಕೊಟ್ರೇನ್ರೀ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ, ಉದ್ಯೋಗ ಸೃಷ್ಟಿ ಮಾಡಿದ್ರಾ? ಎಲ್ರೀ ಸ್ವಾಮಿ ನಿಮ್ಮ ಅಚ್ಛೆ ದಿನ್? ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ 54 ಲಕ್ಷ ಕೋಟಿ ಮಾತ್ರ ಇತ್ತು. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಛೆ ದಿನ್ ಎಂದು ಸಿಎಂ ವ್ಯಂಗ್ಯವಾಡಿದರು.

ಮೋದಿ ಟೀಕಿಸಿದ್ದಕ್ಕೆ ನನ್ನ ಮೇಲೆ ಸುಳ್ಳು ಕೇಸು

ನಾನು ನಿರಂತರವಾಗಿ ಮೋದಿ, ಅಮಿತ್ ಶಾ ಅವರ ನೀತಿಗಳನ್ನು, ಸುಳ್ಳುಗಳನ್ನು, ಅವರು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸಿ, ಟೀಕಿಸಿದ್ದರಿಂದ ನನ್ನನ್ನೇ ಮುಗಿಸಲು ಮುಂದಾಗಿದ್ದಾರೆ. ನನ್ನ ಮೇಲೆ ಸುಳ್ಳು ಕೇಸು ಹಾಕಿಸಿ, ಷಡ್ಯಂತ್ರ ನಡೆಸುತ್ತಿದ್ದಾರೆ. ಇಡಿ, ಐಟಿ, ಸಿಬಿಐ ಮೂಲಕ ಪ್ರಧಾನಿ ತಮ್ಮ‌ಟೀಕಾಕಾರರನ್ನು ಮುಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದ ಸಿಎಂ ಸಿದ್ದರಾಮಯ್ಯ ಅವರು, ನಿಮ್ಮಗಳ ಆಶೀರ್ವಾದ, ಬೆಂಬಲ ನನ್ನ ಮೇಲೆ ಇರುವವರೆಗೂ ಯಾವ ಷಡ್ಯಂತ್ರಗಳಿಗೂ ನಾನು ಜಗ್ಗಲ್ಲ, ಬಗ್ಗಲ್ಲ ಎಂದು ತಿಳಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಷ್ಟೂ ದಿನ ಸಂಡೂರಿಗೆ ಒಂದೇ ಒಂದು ಮನೆ ಕೊಡುವ ಯೋಗ್ಯತೆ ಇರಲಿಲ್ಲ. ಆಪರೇಷನ್ ಕಮಲದ ಮೂಲಕ ಜನ ಗೆಲ್ಲಿಸಿದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಲೂಟಿ ಮಾಡಿಕೊಂಡು ಹೋದರು. ಅದಕ್ಕೇ ಆಪರೇಷನ್ ಕಮಲದ ಸರ್ಕಾರವನ್ನು ಜನ ಸೋಲಿಸಿ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು ಎಂದು ತಿಳಿಸಿದರು.

ಈ. ತುಕಾರಾಮ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಾತರಿಸುತ್ತಾ ಕೆಲಸ ಮಾಡುವ ಶಾಸಕರಾಗಿದ್ದರು, ಈಗ ಸಂಸದರಾಗಿದ್ದಾರೆ. ಸಂಡೂರಿನಲ್ಲಿ ಈಗ ಆಗಿರುವ ಎಲ್ಲಾ ಅಭಿವೃದ್ಧಿಗಳೂ ಈ. ತುಕಾರಾಮ್ ಮತ್ತು ಸಂತೋಷ್ ಲಾಡ್ ಅವರ ಅವಧಿಯಲ್ಲಿ ಆಗಿರುವಂಥವು ಎಂದರು.

ಮುಂದಿನ ಮೂರೂವರೆ ವರ್ಷ ನಮ್ಮದೇ ಸರ್ಕಾರ ಇರುತ್ತೆ

ಅನ್ನಪೂರ್ಣಮ್ಮ ನನ್ನ ಆತ್ಮೀಯ ಸ್ನೇಹಿತ‌ನ ಮಗಳು. ಇವರನ್ನು ಗೆಲ್ಲಿಸಿ ಕಳುಹಿಸಿ. ಮೂರೂವರೆ ವರ್ಷ ನಮ್ಮದೇ ಸರ್ಕಾರ ಇರುತ್ತೆ. ಸಂಡೂರಿನ ಅಭಿವೃದ್ಧಿ ಜೋರಾಗುತ್ತೆ. ಕಾಂಗ್ರೆಸ್ ಗೆಲ್ಲಿಸಿ ಕಳುಹಿಸಿ ಎಂದರು.

ಈ ಸುದ್ದಿಯನ್ನೂ ಓದಿ | Good News: SC, ST ವಿದ್ಯಾರ್ಥಿಗಳ ಪ್ರೋತ್ಸಾಹಧನ 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಳ

ಸಚಿವ ಸಂತೋಷ್ ಲಾಡ್ ಮಾತನಾಡಿ, ಬಿಜೆಪಿಯವರಿಗೆ ಸಂಡೂರಿನ ಗುಡ್ಡಗಳು, ಗಣಿಗಳ ಮೇಲೆ ಮಾತ್ರ ಪ್ರೀತಿ. ಬಿಜೆಪಿಯವರಿಗೆ ಸಂಡೂರಿನ ಜನರ ಬಗ್ಗೆ, ಸಂಡೂರಿನ ಬಡವರ ಮೇಲೆ ಖಂಡಿತಾ ಪ್ರೀತಿ ಇಲ್ಲ. ನಾನು ಸುಡುಗಾಡಿಗೆ ಹೋಗುವವರೆಗೂ ಸಂಡೂರಿನ‌ ಜನರ ಋಣದಲ್ಲಿ ಇರ್ತೀನಿ. ನನ್ನಪ್ಪ ಇಲ್ಲೇ ಸತ್ತ. ನನ್ನ ದೊಡ್ಡಪ್ಪ ಇಲ್ಲೇ ಸತ್ತ. ನಾನು ಜೀವ ಇರುವವರೆಗೂ ಇಲ್ಲೇ ಈರ್ತೀನಿ. ಇಲ್ಲೇ ಸಾಯ್ತೀನಿ ಎಂದು ಹೇಳಿದರು.