Friday, 22nd November 2024

ಕಾರಾಗೃಹದಲ್ಲಿದ್ದರೂ ನಾಯಕತ್ವಕ್ಕೆ ಚ್ಯುತಿಯಿಲ್ಲ !

ಶಶಾಂಕಣ

ಶಶಿಧರ ಹಾಲಾಡಿ

ಬಿಹಾರದ ಲಾಲೂ ಪ್ರಸಾದ್ ಯಾದವ್ ಅವರು ಮತ್ತೊಮ್ಮೆ ಅಧಿಕಾರದ ಸೂತ್ರ ಹಿಡಿಯುವ ಸಾಧ್ಯತೆ ಇದೆಯೆ? ನ್ಯಾಯಾಲಯ ವಿಧಿಸಿದ ಶಿಕ್ಷೆ ಮತ್ತು ಸ್ಪರ್ಧಿಸಲು ಇರುವ ನಿಷೇಧದ ತೊಡಕನ್ನು ನಿವಾರಿಸಿಕೊಂಡೋ ಅಥವಾ ಅದರ ನಡುವೆಯೇ ರಾಜ್ಯ
ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿ ಕೈಯಾಡಿಸಲು ಅವರಿಂದ ಸಾಧ್ಯವೆ? ಇಂದು, ಅಂದರೆ ನವೆಂಬರ್ 27ರಂದು ಲಾಲೂ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಅವರು ಜಾಮೀನು ಪಡೆದು ಹೊರ ಬಂದರೆ, ಬಿಹಾರದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಮಾಡಬಲ್ಲರು ಎಂದು ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರಕಿಸಿ ಕೊಡಲು ಪ್ರಖ್ಯಾತ ಲಾಯರ್ ಕಪಿಲ್ ಸಿಬಲ್ ಅವರು ವಾದ ಮಂಡಿಸಿದ್ದು, ಜಾರ್ಖಂಡ್ ನ್ಯಾಯಾಲಯದ ನ್ಯಾಯಮೂರ್ತಿಗಳ ತೀರ್ಪನ್ನೇ ಲಾಲೂ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅಕಸ್ಮಾತ್
ಜಾಮೀನು ಪಡೆದು ಜೈಲಿನಿಂದ ಹೊರಬಂದರೆ, ಲಾಲೂ ಅವರು ಉತ್ತರ ಭಾರತದ ಮತ್ತು ದೇಶದ ರಾಜಕಾರಣದಲ್ಲಿ ಯಾವ ಪ್ರಭಾವ ಬೀರಬಲ್ಲರು? ನಮ್ಮ ದೇಶದ ಇಂದಿನ ವಾತಾವರಣದಲ್ಲಿ, ಭ್ರಷ್ಟಾಚಾರವು ಋಜುವಾತಾದರೂ, ಜನರ ಮತ ಗಳಿಸು ವಲ್ಲಿ ಅಂತಹ ವ್ಯಕ್ತಿಗಳು ಸಫಲರಾಗಬಲ್ಲರು ಎಂಬುದಕ್ಕೆ ಲಾಲೂ ಪ್ರಸಾದ್ ಯಾದವ ಒಂದು ಖ್ಯಾತ ಅಥವಾ ಕುಖ್ಯಾತ ಉದಾಹರಣೆ.

ಕಳೆದ ಕೆಲವು ವರ್ಷಗಳಿಂದ ಜೈಲಿನಲ್ಲಿರುವ, ಬೃಹತ್ ಮೊತ್ತದ ಮೇವು ಹಗರಣ, ರೈಲು ಇಲಾಖೆಯಲ್ಲಿನ ಹಗರಣ ಮತ್ತು ಇನ್ನೂ ಹಲವು ಭ್ರಷ್ಟಾಚಾರದ ಆರೋಪಗಳಿಗೆ ಸಿಲುಕಿ, ಅವುಗಳಲ್ಲಿ ಕೆಲವು ಪ್ರಕರಣ ಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದರೂ, ಲಾಲೂ ಪ್ರಸಾದ್ ಯಾದವ್ ಅವರ ನಾಯಕತ್ವಕ್ಕೆ ಕುಂದು ಬರಲಿಲ್ಲ. ಮೊನ್ನೆ ತಾನೆ ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ, ಎನ್‌ಡಿಎ ಪಕ್ಷಗಳನ್ನು ಎದುರಿಸಲು ಲಾಲೂ ಅವರ ಆರ್‌ಜಿಡಿ ಆಶ್ರಯದಲ್ಲಿ ಒಗ್ಗೂಡಿದ ವಿರೋಧ ಪಕ್ಷಗಳು, ಆ ಘಟಬಂಧನಕ್ಕೆ ನಾಯಕರನ್ನಾಗಿ ಆರಿಸಿದ್ದು ಲಾಲೂ ಪ್ರಸಾದ್ ಯಾದವ್ ಅವರನ್ನು. ನ್ಯಾಯಾಲಯದ ಆದೇಶ ದಂತೆ ಹದಿನಾಲ್ಕು ವರ್ಷಗಳ (ಏಳು+ಏಳು) ಜೈಲು ಶಿಕ್ಷೆಗೆ ಒಳಗಾಗಿದ್ದರೂ, ಬಿಹಾರದ ಹಳ್ಳಿಗಳಲ್ಲಿ, ಒಳನಾಡಿನಲ್ಲಿ ಲಾಲೂ ಪ್ರಸಾದ್ ಯಾದವ್ ಅವರನ್ನು ಮೆಚ್ಚುವ, ಅವರು ಹೇಳಿದವರಿಗೆ ಮತ ಚಲಾಯಿಸುವ ಜನಸಮೂಹವೇ ಇರುವುದರಿಂದ, ಘಟಬಂಧನದ ನಾಯಕತ್ವವನ್ನು ಲಾಲೂ ಅವರು ಜೈಲಿನಲ್ಲಿದ್ದುಕೊಂಡೇ ಯಶಸ್ವಿಯಾಗಿ ನಿರ್ವಹಿಸಿದರು.

ಮಗ ತೇಜಸ್ವಿ ಯಾದವ್ ಅವರ ಸಹಕಾರದೊಂದಿಗೆ, ಬಿಹಾರದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಆರ್‌ಜೆಡಿ ಹೊರಹೊಮ್ಮಿತು. ಆದರೆ ಕಾಂಗ್ರೆಸ್ ನ ವಿಫಲತೆಯಿಂದಾಗಿ, ಆ ಘಟಬಂಧನಕ್ಕೆ ಅಧಿಕಾರ ಹಿಡಿಯಲು ಬೇಕಾಗುವಷ್ಟು ಸ್ಥಾನಗಳು ದೊರಕಲಿಲ್ಲ. ಬಿಜೆಪಿ ಬೆಂಬಲಿತ ನಿತೀಶ್ ಕುಮಾರ್ ಅವರಿಗೆ ತೀವ್ರ ಸ್ಪರ್ಧೆ ನೀಡಿದ ಈ ಘಟಬಂಧನವು, ಭವಿಷ್ಯದಲ್ಲಿ ಕೆಲವು ಸದಸ್ಯರ ಕುದುರೆ ವ್ಯಾಪಾರ ನಡೆದರೆ, ಅಧಿಕಾರಕ್ಕೆ ಬರಲೂ ಸಾಧ್ಯ ಎಂದೇ ಲಾಲೂ ಅಭಿಮಾನಿಗಳು ನಂಬಿದಂತಿದೆ. ಕಳೆದ ಹಲವು ತಿಂಗಳುಗಳಿಂದ ಆಸ್ಪತ್ರೆಯ ಆವರಣದ ಐಶಾರಾಮಿ ಅತಿಥಿ ಗೃಹದಲ್ಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲೂ ಪ್ರಸಾದ್, ಅಲ್ಲಿಂದಲೇ ದೂರವಾಣಿ ಮೂಲಕ ಬಿಜೆಪಿ ಶಾಸಕರೊಬ್ಬರಿಗೆ ಮಂತ್ರಿ ಪದವಿಯ ಆಮಿಷ ಒಡ್ಡಿದ ಮಾತುಗಳ ರೆಕಾರ್ಡಿಂಗ್, ದೃಶ್ಯ ಮಾಧ್ಯಮಗಳಲ್ಲಿ ನಿನ್ನೆ ಪ್ರಸಾರಗೊಂಡಿದ್ದು, ಈ ವಿಚಾರವು ಲಾಲೂ ಅಭಿಮಾನಿಗಳಿಗೆ ಬಹಳ ಸ್ಫೂರ್ತಿ
ತುಂಬಿದೆಯಂತೆ. ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಅಪರಾಧಿಯು ಹೇಗೆ ತಾನೆ ಅಕ್ರಮವಾಗಿ ದೂರವಾಣಿಯ ಮೂಲಕ ಮಾತನಾಡಲು ಸಾಧ್ಯ ಎಂಬ ಪ್ರಶ್ನೆಗಿಂತಲೂ, ಕುದುರೆ ವ್ಯಾಪಾರದ ಅಂಗಳದಲ್ಲಿ ಲಾಲೂ ಓಡಾಡುತ್ತಿದ್ದಾರೆ ಎಂಬ ವಿದ್ಯ ಮಾನವೇ ಅವರ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆಯಂತೆ!

ಕಾಂಗ್ರೆಸ್ ಆಡಳಿತದಲ್ಲಿರುವ ಜಾರ್ಖಂಡ್‌ನಲ್ಲಿ, ಅಪರಾಧಿ ಸ್ಥಾನದಲ್ಲಿರುವ ಲಾಲೂ ಪ್ರಸಾದ್ ಅವರಿಗೆ, ಅಲ್ಲಿನ ಸರಕಾರವು ಅನಧಿಕೃತವಾಗಿ ಮತ್ತು ಕಾನೂನು ಬಾಹಿರವಾಗಿ ಮೊಬೈಲ್‌ನಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಅವರ ವಿರೋಧಿಗಳು ಪ್ರಲಾಪಿಸುತ್ತಿದ್ದರೂ, ಆ ಪ್ರಲಾಪವು ಅರಣ್ಯರೋಧನ ಎನಿಸಿದೆ, ಜಂಗಲ್ ರಾಜ್ ನಡೆಸಿದ್ದ ಲಾಲೂ ಅವರ
ಬಿಹಾರದಲ್ಲಿ!

ಅಂದ ಹಾಗೆ ಲಾಲೂ ಅವರಿಗೆ ಎಲ್ಲಾ ರಂಗಗಳಲ್ಲೂ ಅಸಂಖ್ಯ ಅಭಿಮಾನಿಗಳಿದ್ದಾರೆ! ಬಿಹಾರದ ಯಾದವ್ ಜನಾಂಗವು ಜಾತಿಯ ಆಧಾರದಿಂದ ಅವರ ಅಭಿಮಾನಿಗಳಾದರೆ, ಇತರ ರಂಗಗಳಲ್ಲಿ ಅವರಿಂದ ಲಾಭ ಪಡೆದ ಹಲವು ಅಭಿಮಾನಿಗಳಿದ್ದು, ಅವರೆಲ್ಲರೂ ಕೊಡುಕೊಳ್ಳುವ ವ್ಯವಹಾರದಂತೆ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ! ಒಂದು ಕಾಲದಲ್ಲಿ ಲಾಲೂ ಪ್ರಸಾದ್
ಅವರು ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಹಲವು ವರದಿಗಳು ಪ್ರಸಾರವಾಗಿದ್ದು, ನಂತರ ಅವುಗಳಲ್ಲಿ ಹೆಚ್ಚಿನ ಭಾಗವು ಅತಿ ರಂಜಿತ ಎಂದು ತಿಳಿದು ಬಂತು. ಇದಕ್ಕೆ ಆಧಾರಗಳಿವೆ. 1990ರ ದಶಕದಲ್ಲಿ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ ಎಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪತ್ರಿಕೆ ಗಳಲ್ಲಿ ಕಥೆಗಳು ಪ್ರಕಟಗೊಂಡವು.

ಒಮ್ಮೆಗೇ ಅವರು ರಾಷ್ಟ್ರಮಟ್ಟದ ವರ್ಚಸ್ವಿ ನಾಯಕರೆಂದು ಬಿಂಬಿತಗೊಂಡರು. ಕೊನೆಗೆ ಬಯಲಾಗಿದ್ದು, ಹಗರಣಗಳ ಸರಮಾಲೆ ಮಾತ್ರ! 2004ರಿಂದ 2009ರ ತನಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ರೈಲ್ವೆ ಸಚಿವರಾಗಿದ್ದಾಗ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಿಕ್ಕ ಪ್ರಚಾರಕ್ಕೆ ಸರಿಸಮನಾದುದು ಬೇರಾವುದೂ ಇಲ್ಲವೇನೋ ಅನಿಸುತ್ತದೆ. ನಷ್ಟದಲ್ಲಿದ್ದ ರೈಲ್ವೆ
ಇಲಾಖೆಯನ್ನು ಲಾಭಕ್ಕೆ ತಂದ ಜಾದೂಗಾರ ಎಂದು ಅವರನ್ನು ಮಾಧ್ಯಮಗಳು ಹೊಗಳಿದ ಫಲವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಲೂ ಅವರ ಚಾತುರ್ಯ ಪ್ರಚುರಗೊಂಡು, ವಿವಿಧ ಬಿಸಿನೆಸ್ ಸ್ಕೂಲ್ ಗಳು ಇವರ ಕಾರ್ಯವೈಖರಿಯನ್ನು ಅಧ್ಯಯನ ಮಾಡಲು ಮುಂದಾದವು!

ಕೊನೆಗೆ ನೋಡಿದರೆ, ರೈಲ್ವೆ ಇಲಾಖೆ ಲಾಭದ ಹಳಿಗೆ ಬರಲು ಲಾಲೂ ಅವರ ಕೊಡುಗೆಗಿಂತಲೂ, ಅಧಿಕಾರಿಗೆ ಕಾರ್ಯದಕ್ಷತೆ ಹೆಚ್ಚು ಕೆಲಸ ಮಾಡಿತ್ತು. ವಿಪರ್ಯಾಸವೆಂದರೆ, ಅವರ ಅಧಿಕಾರಾವಧಿಯಲ್ಲಿ ಅವರು ರೈಲ್ವೆ ಇಲಾಖೆಯಲ್ಲೂ ಜಂಗಲ್‌ರಾಜ್ ಜಾರಿಗೆ ತರಲು ಪ್ರಯತ್ನಿಸಿದ್ದರು! ಆ ಅವಧಿಯಲ್ಲಿ ಅವರು ನಡೆಸಿದ ಅಗಾಧ ಪ್ರಮಾಣದ ಭ್ರಷ್ಟಾಚಾರವು ಬಯಲಾಗಿ, ಅದರ ವಿರುದ್ಧವೂ ತನಿಖೆ ನಡೆಯುತ್ತಿದೆ.

ಲಾಲೂ ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ರೈಲು ಬೋಗಿಗಳಲ್ಲಿ ಅಳವಡಿಸಿದ ಅವೈಜ್ಞಾನಿಕ ಆಸನದ ಬಿಸಿ ನಿಮಗೂ ತಟ್ಟಿರಬಹುದು! ಸ್ಲೀಪರ್ ಕೋಚ್‌ಗಳಲ್ಲಿ ಒಂದು ಭಾಗದಲ್ಲಿದ್ದ ಎರಡು ಮಲಗುವ ಆಸನದ ನಡುವೆ ಮೂರನೆಯ ಆಸನವನ್ನು ಅಳವಡಿಸುವ ಮೂಲಕ ಲಾಭ ತರಬಹುದು ಎಂದು ಲಾಲೂ ಅವರಿಗೆ ಹೊಳೆಯಿತು. ಎಲ್ಲಾ ಸ್ಲೀಪರ್ ಕೋಚ್‌ಗಳಲ್ಲಿ ಎರಡು
ಆಸನದ ನಡುವೆ ಇನ್ನೊಂದು ಆಸನವನ್ನು ಅಳವಡಿಸುವ ಕೆಲವನ್ನು ಭಾರೀ ವೆಚ್ಚದಲ್ಲಿ ಮಾಡಲಾಯಿತು. ಅದರಲ್ಲಿ ಮಲಗು ವವರು, ಬೆನ್ನುಮುದುಡಿಕೊಂಡು ಆಸನವನ್ನು ಏರಬೇಕಾಗಿತ್ತು. ನಂತರ ಅದು ಅವೈಜ್ಞಾನಿಕ ಎಂದು,  ಎಲ್ಲಾ ಅಂತಹ ಸೀಟುಗಳನ್ನು ಬಹು ಬೇಗನೆ ತೆಗೆದುಹಾಕಲಾಯಿತು. ಇದಕ್ಕೆಷ್ಟು ವೆಚ್ಚವಾಯಿತು? ಆದರೂ, ಲಾಲೂ ಅವರು ರೈಲ್ವೆ ಸಚಿವರಾಗಿ ದ್ದಾಗ, ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ನಂಬುವವರು ಈಗಲೂ ಇದ್ದಾರೆ!

ರೈಲ್ವೆ ಸಚಿವರಾಗಿದ್ದಾಗ ಅವರು ನಡೆಸಿದ ಅವ್ಯವಹಾರಗಳೂ ಸೇರಿದಂತೆ, ಅವರ ವಿರುದ್ಧ 53ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣ ಗಳಿವೆ. ಅವರು ಮಾತ್ರವಲ್ಲ, ಅವೇ ಪ್ರಕರಣಗಳಲ್ಲಿ ಅವರ ಹೆಂಡತಿ, ಮಗ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್, ಮಗಳು ಮೀಸಾ ಭಾರತಿಯವರ ಮೇಲೂ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆಯ ವಿವಿಧ ಹಂತಗಳಲ್ಲಿವೆ. ಲಾಲೂ ನಡೆಸಿದ ಮೇವು ಹಗರಣದಲ್ಲಿ ಅವರ ಅಪರಾಧವು ಋಜುವಾತಾಗಿ ಜೈಲು ಶಿಕ್ಷೆ ಅನುಭವಿಸಿದ್ದರ ಜತೆಯಲ್ಲೇ, ಅವರೊಂದಿಗೆ ಕೈ ಜೋಡಿ ಸಿದ್ದ ನೂರಾರು ಸರಕಾರಿ ನೌಕರರು ಸಿಕ್ಕಿ ಹಾಕಿಕೊಂಡು, ಶಿಕ್ಷೆಗೆ ಗುರಿಯಾದರು. ಲಾಲೂ ಅಧಿಕಾರ ಕಳೆದುಕೊಂಡಾಗ, ತನ್ನ ಸ್ಥಾನದಲ್ಲಿ ತನ್ನ ಹೆಂಡತಿಯನ್ನು ಮುಖ್ಯಮಂತ್ರಿಯನ್ನಾಗಿ ಕೂರಿಸಿ, 15 ವರ್ಷಗಳ ಕಾಲ ಬಿಹಾರವನ್ನು ಆಳಿದ ಮಹಾನ್ ರಾಜಕಾರಣಿ ಲಾಲೂ ಪ್ರಸಾದ್ ಯಾದವ್. ಇವುಗಳ ಜತೆಯಲ್ಲೇ, ಅಪಹರಣ, ಅಕ್ರಮವಾಗಿ ವಸ್ತುಗಳನ್ನು ಎತ್ತಿಕೊಂಡು ಬರುವುದೇ ಮೊದಲಾದ ಆರೋಪಗಳು ಅವರ ಬೆಂಬಲಿಗರ ಮೇಲಿದೆ.

ಪ್ರಾಮಾಣಿಕವಾಗಿ ನೋಡಿದರೆ, ಲಾಲೂ ಅವರ ರಾಜಕೀಯ ಜೀವನದ ಆರಂಭವು ಆಶಾಭಾವನೆಯಿಂದಲೇ ಆಗಿತ್ತು ಎನ್ನ ಬಹುದು. ವಿದ್ಯಾರ್ಥಿ ನಾಯಕರಾಗಿದ್ದ ಲಾಲೂ, ನಂತರ ಸರಕಾರಿ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರು. 1974ರಲ್ಲಿ ಜಯಪ್ರಕಾಶ್ ನಾರಾಯಣ ಅವರ ಚಳವಳಿಯಲ್ಲಿ ಭಾಗವಹಿಸಿ, ಎಲ್ಲರ ಗಮನ ಸೆಳೆದರು. 1975ರಲ್ಲಿ ಇಂದಿರಾ ಗಾಂಧಿಯವರು ತಮ್ಮ ಸ್ಥಾನ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ, ದೇಶವನ್ನೇ ದಿಗ್ಬಂಧನಕ್ಕೆ ಒಳಪಡಿಸಿದಾಗ, ಅದನ್ನು ವಿರೋಧಿಸಿದವರಲ್ಲಿ ಲಾಲೂ ಸಹ ಸೇರಿದ್ದರು. 1977ರಲ್ಲಿ ನಡೆದ ಇಂದಿರಾ ವಿರೋಧಿ ಅಲೆಯ ಲಾಭ ಪಡೆದು, ಜನತಾ ಪಕ್ಷದ ಬೆಂಬಲದಿಂದ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಸೇರಿದರು. ನಂತರ ಅವರ ರಾಜಕೀಯ ಜೀನವ ಉತ್ಕರ್ಷದಲ್ಲೇ ಸಾಗಿತು.

1995ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ, ಅಲ್ಲಿನ ಜನಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು. ಜತೆಗೆ, ಭಾಗಲ್ಪುರ ಕೋಮು ಗಲಭೆಯ ಲಾಭ ಪಡೆದು, ಮುಸ್ಲಿಂ ಜನಾಂಗದ ಪ್ರೀತಿಯನ್ನು ಗಳಿಸುವಲ್ಲೂ ಯಶಸ್ವಿಯಾದರು. ಅಧಿಕಾರ ಹಿಡಿಯಲು ಯಾವುದೇ ರಾಜಿ ಬೇಕಾದರೂ ಮಾಡಿಕೊಡಬಲ್ಲ, ಯಾವುದೇ ಪಕ್ಷದ ಜತೆ ಬೇಕಾದರೂ ಕೈ ಜೋಡಿಸಬಲ್ಲ ಲಾಲೂ,
ಅಲ್ಪಸಂಖ್ಯಾತರ ಮತ ಗಳಿಸಲು ಎಂತಹದ್ದೇ ಹೇಳಿಕೆ ನೀಡಲು ಸಿದ್ಧ, ಯಾವುದೇ ಕ್ರಮ ಕೈಗೊಳ್ಳಲೂ ಸಿದ್ಧ.

ಬಿಹಾರದ ಪಠ್ಯಪುಸ್ತಕಗಳಲ್ಲಿ ಇವರನ್ನು ಮಣ್ಣಿನ ಮಗ ಎಂದು ವರ್ಣಿಸಲಾಗಿತ್ತು! ಮಣ್ಣಿನ ಮಗ ಎಂದು ವರ್ಣಿಸಿಕೊಂಡವರು, ತಮ್ಮ ಮಕ್ಕಳನ್ನು ರಾಜಕೀಯದಲ್ಲೇ ಬೆಳಸುವ ಚಾಳಿ ಅಂಟುತ್ತದೇನೋ! ಕುಟುಂಬದವರನ್ನು ರಾಜಕೀಯದಲ್ಲಿ ಮುಂದೆ ತರುವ ಕಲೆಯನ್ನು ಕರಗತ ಮಾಡಿಕೊಂಡಿರುವ ಸಾಕಷ್ಟು ರಾಜಕಾರಣಿಗಳೂ ನಮ್ಮ ದೇಶದಲ್ಲಿದ್ದಾರೆ. ಆದರೆ ಅದನ್ನು ಒಂದು
ಪರಿಪೂರ್ಣತೆಯ ಹಂತಕ್ಕೆ ಕೊಂಡೊಯ್ದ ಹಿರಿಮೆ ಲಾಲೂ ಪ್ರಸಾದ್ ಅವರಿಗೆ ಸಲ್ಲುತ್ತದೆ. ಇವರ ಮೊದಲನೆಯ ಮಗ ತೇಜ್ ಪ್ರತಾಪ್ ಯಾದವ್ ಅವರನ್ನು ರಾಜಕೀಯಕ್ಕೆ ತಂದು, ಬಿಹಾರದ ಆರೋಗ್ಯ ಸಚಿರನ್ನಾಗಿ ಮಾಡಲಾಗಿತ್ತು.

ಎರಡನೆಯ ಮಗ ತೇಜಸ್ವಿ ಯಾದವ್, ಈಗ ಬಿಹಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿದ್ದು, ಕೆಲವೇ
ಸ್ಥಾನಗಳಿಂದಾಗಿ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿಕೊಂಡಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಅತಿ ಹೆಚ್ಚು ಸ್ಥಾನ (75) ಪಡೆಯಲು ತೇಜಸ್ವಿಯವರ ನಾಯಕತ್ವವೂ ಕಾರಣ ಎನ್ನಲಾಗಿದ್ದು, ಮುಂದೊಂದು ದಿನ ಈತ ಭಾರತದ ಪ್ರಧಾನಿ ಯಾದರೂ ಆಗಬಹುದು ಎಂದು ಕೆಲವು ಪತ್ರಕರ್ತರು ಈಗಲೇ ಭವಿಷ್ಯ ನುಡಿಯುತ್ತಿದ್ದಾರೆ. ಇವರ ಮೇಲೂ ಆರೋಪ ಗಳಿದ್ದು, ವಿಚಾರಣೆ ನಡೆಯುತ್ತಿದೆ.

ಲಾಲೂ ಅವರ ಮೊದಲನೆಯ ಮಗಳು ಮೀಸಾ ಭಾರತಿ, ಆರ್‌ಜೆಡಿ ಮೂಲಕ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ನಾಲ್ಕನೆಯ ಮಗಳು ರಾಗಿಣಿ ಯಾದವ್ ಅವರು ಜಿತೇಂದ್ರ ಯಾದವ್‌ರನ್ನು ಮದುವೆಯಾಗಿದ್ದು, ಜಿತೇಂದ್ರ ಯಾದವ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಲಾಲೂ ಅವರ ಆರನೆಯ ಮಗಳು ಅನುಕ್ಷಾ ರಾವ್ ಅವರ ಪತಿ ಚಿರಂಜೀವಿಯವರು, ಹರ್ಯಾಣಾದ
ಮಂತ್ರಿಯ ಮಗ. ಏಳನೆಯ ಮಗಳು ರಾಜಲಕ್ಷ್ಮಿ ಸಿಂಗ್ ಅವರು ಮದುವೆಯಾಗಿದ್ದು ಮುಲಯಂ ಸಿಂಗ್ ಯಾದವ್ ಅವರ ಮಗ ತೇಜ್ ಪ್ರತಾಪ್ ಸಿಂಗ್ ಯಾದವ್ ಅವರನ್ನು. ಲಾಲೂ ಪ್ರಸಾದ್ ಅವರ ಪತ್ನಿಯು ಬಿಹಾರದ ಮುಖ್ಯಮಂತ್ರಿ ಸ್ಥಾನದಲ್ಲಿ ಎಂಟು
ವರ್ಷ ಅಧಿಕಾರ ನಿಭಾಯಿಸಿದರು.

ಇವರ ಜತೆ, ಲಾಲೂ ಅವರ ಬಂಧುಗಳು, ಸ್ನೇಹಿತರು ವಿವಿಧ ಅಧಿಕಾರದಲ್ಲಿ, ಹುದ್ದೆಗಳಲ್ಲಿ ಇದ್ದು, ಲಾಲೂ ಅವರ ಅಭಿಮಾನಿ
ಗಳಾಗಿ ಬಿಟ್ಟಿದ್ದಾರೆ! ಲಾಲೂ ಪ್ರಸಾದ್ ಯಾದವ್ ನಡೆಸಿದ ಮೇವು ಹಗರಣದ ಮೊತ್ತ ಸುಮಾರು 1,000 ಕೋಟಿ. ವಿಶೇಷ
ವೆಂದರೆ, 1996ರಲ್ಲಿ ಈ ಹಗರಣ ಬಯಲಿಗೆ ಬಂದ ನಂತರವೂ, ಆ ಯೋಜನೆಯಲ್ಲಿ ಹಣ ದುರಪಯೋಗ ಮುಂದುವರಿದಿತ್ತು! ಈಗ ಜೈಲಿನಲ್ಲಿರುವ ಲಾಲೂ ಅವರ ಪರವಾಗಿ, ಕಾಂಗ್ರೆಸ್ ಪಕ್ಷದ ವಕ್ತಾರ, ರಾಜ್ಯ ಸಭಾ ಸದಸ್ಯ ಮತ್ತು ವಕೀಲ ಕಪಿಲ್ ಸಿಬಲ್ ಅವರು  ವಾದ ಮಂಡಿಸುತ್ತಾ, ಲಾಲೂ ಅವರು ಈಗಾಗಲೇ 42 ತಿಂಗಳು 26 ದಿನ ಜೈಲು ಶಿಕ್ಷೆ ಅನುಭವಿಸಿದ್ದು, ಒಟ್ಟು
ಶಿಕ್ಷೆಯ ಅರ್ಧ ಭಾಗವನ್ನು ಆಗಲೇ ಅನುಭವಿಸಿದ್ದರಿಂದ, ಅವರಿಗೆ ಜಾಮೀನು ನೀಡಿ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು
ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಮೇವು ಹಗರಣಕ್ಕೆ ಸಂಬಂಧಿಸಿದ ಮೂರು ಶಿಕ್ಷೆಗಳಲ್ಲಿ ಲಾಲೂ ಅವರು ಈಗಾಗಲೇ ಜಾಮೀನು ಪಡೆದಿದ್ದು, ಈ ಪ್ರಕರಣಲ್ಲೂ ಜಾಮೀನು ಪಡೆದರೆ, ಅವರು ಜೈಲಿನಿಂದ ಹೊರಬರಬಹುದು! ಆರೋಗ್ಯದ ಕಾರಣ ನೀಡಿ ಜೈಲು ಶಿಕ್ಷೆೆಯ ಬಹುಪಾಲು ಅವಧಿ ಯನ್ನು ಆಸ್ಪತ್ರೆಯ ಆವರಣದಲ್ಲಿ ಕಳೆದಿರುವ ಲಾಲೂ ಅವರು, ಈಗ ಜಾಮೀನು ಪಡೆದು ಹೊರಬಂದರೆ, ಮುಕ್ತ
ವಾತಾವರಣದಲ್ಲಿ ರಾಜಕೀಯ ಚಟುವಟಿಕೆ ನಡೆಸಬಹುದು. ಯಾರಿಗೆ ಗೊತ್ತು, ಮುಂದೊಂದು ದಿನ ಅವರು ಉನ್ನತ ಅಧಿಕಾರದ ಚುಕ್ಕಾಣಿ ಹಿಡಿದರೂ ಹಿಡಿಯಬಹುದು! ಆದ್ದರಿಂದ, ಇಂದು ಹೊರಬೀಳಲಿರುವ ನ್ಯಾಯಾಲಯದ ಆದೇಶ ಮಹತ್ವದ್ದು ಎನಿಸಿದೆ.