Friday, 22nd November 2024

Viral Video: ಸಾಲ ತೀರಿಸದ ವ್ಯಕ್ತಿಯ ತಾಯಿಯನ್ನೇ ಅಪಹರಿಸಿದ ದುರುಳರು!

Viral Video

ಹೈದರಾಬಾದ್‌: ಸಾಲ ತೀರಿಸಲಾಗದ ವ್ಯಕ್ತಿಯ ತಾಯಿಯನ್ನು ಅಪಹರಿಸಿದ ಆಘಾತಕಾರಿ ಘಟನೆ ನಡೆದಿದೆ ತೆಲಂಗಾಣದ (Telangana) ಕೊಡುಮುಂಜಾ ಗ್ರಾಮದಲ್ಲಿ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಆರೋಪಿ ಮಹಾರಾಷ್ಟ್ರದ ಗುತ್ತಿಗೆದಾರ ಲಾಲ್ ದೇವಕರ್ ಎಂದು ಗುರುತಿಸಲಾಗಿದೆ. ಕಾರ್ಮಿಕ ಗುತ್ತಿಗೆದಾರ ಪಲ್ಲಪು ಶ್ರೀನಿವಾಸ್ ಎಂಬವರಿಗೆ ಆರೋಪಿ ಲಾಲ್ ದೇವಕರ್ ಕಬ್ಬು ಕಟಾವಿಗೆ 3 ಲಕ್ಷ ರೂ. ನೀಡಿದ್ದ. ಆದರೆ ಶ್ರೀನಿವಾಸ್ ಮತ್ತು ಅವರ ಸಹೋದರ ಪ್ರಸ್ತುತ ಛತ್ತೀಸ್‌ಗಢದಲ್ಲಿ ಕೆಲಸ ಮಾಡುತ್ತಿರುವುದರಿಂದ ಒಪ್ಪಂದವನ್ನು ಪೂರೈಸಲು ಮಹಾರಾಷ್ಟ್ರಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಇದು ದೇವಕರ್ ಮತ್ತು ಶ್ರೀನಿವಾಸ್ ನಡುವೆ ಜಗಳಕ್ಕೆ ಕಾರಣವಾಯಿತು. ಇದರಿಂದ ಸಿಟ್ಟಿಗೆದ್ದ ದೇವಕರ್ ಹಾಗೂ ಆತನ ಸಹಚರರು ಶ್ರೀನಿವಾಸ್ ಅವರ ತಾಯಿಯನ್ನು ಅಪಹರಣ ಮಾಡಿದ್ದಾರೆ. ಅಪಹರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ (Viral Video).

ವೈರಲ್‌ ಆಗಿರುವ ವಿಡಿಯೊದಲ್ಲಿ ದೇವಕರ್‌ನ ಸಹಚರರು ಶ್ರೀನಿವಾಸ್ ಅವರ ತಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುವುದನ್ನು ನೋಡಬಹುದು. ಅವರ ಕುಟುಂಬ ಸದಸ್ಯರು ರಕ್ಷಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. 

ಬುಧವಾರ (ನ. 6) ಕೊಡುಮುಂಜ ಗ್ರಾಮಕ್ಕೆ ದೇವಕರ್ ಸಹಚರರು ಆಗಮಿಸಿ ಶ್ರೀನಿವಾಸ್ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಶ್ರೀನಿವಾಸ್ ಅವರ ತಾಯಿ ಪಲ್ಲಪು ಬೀಮಾಬಾಯಿ ಅವರನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ದಿದ್ದಾರೆ. ಬಳಿಕ ಶ್ರೀನಿವಾಸ್ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಬಾಲಕಿ ಅಪಹರಣ ಯತ್ನ: ಮುಸ್ಲಿಂ ವ್ಯಾಪಾರಿಗಳಿಗೆ ಬೆದರಿಕೆ ಪೋಸ್ಟರ್‌

ಆಸ್ತಿಗಾಗಿ ತಾಯಿ ಸಹೋದರಿಯನ್ನೇ ಕೊಂದ ವ್ಯಕ್ತಿ

ಇತ್ತೀಚೆಗೆ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ತನ್ನ 90 ವರ್ಷದ ತಾಯಿ ಮತ್ತು 62 ವರ್ಷದ ಸಹೋದರಿಯನ್ನು ಕೊಂದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಲತಾ ದೀಕ್ಷಿತ್ ಮತ್ತು ಅವರ ಪುತ್ರಿ ಸೈರೇಂದ್ರಿ ದೀಕ್ಷಿತ್ ಅವರ ಸುಟ್ಟ ಶವಗಳು ಮಂಗಳವಾರ ರಾತ್ರಿ ಸಂಬಲ್‌ಪುರದ ಅವರ ಮನೆಯ ಮಹಡಿಯಲ್ಲಿ ಪತ್ತೆಯಾಗಿತ್ತು. ಮೃತರ ಕುಟುಂಬದವರನ್ನು ವಿಚಾರಣೆ ಮಾಡಿದಾ ಆರೋಪಿ ಸಿಕ್ಕಿ ಬಿದ್ದಿದ್ದಾನೆ.  ಸ್ನೇಹಲತಾ ದೀಕ್ಷಿತ್ ಅವರ ಮಗ ಜಗನ್ನಾಥ್ ಈ ಕೊಲೆ ಮಾಡಿದ್ದು ಆಸ್ತಿಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.