Thursday, 7th November 2024

Ghaati First Glimpse Out: ರಕ್ತದ ಹೊಳೆ ಹರಿಸಿದ ಅನುಷ್ಕಾ ಶೆಟ್ಟಿ; ‘ಘಾಟಿ’ ಚಿತ್ರದ ರೋಮಾಂಚನಕಾರಿ ಟೀಸರ್‌ ಔಟ್‌

Ghaati First Glimpse Out

ಹೈದರಾಬಾದ್‌: ಗುರುವಾರ (ನ. 7) ಬಹುಭಾಷಾ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ಅವರ ಮುಂದಿನ ಟಾಲಿವುಡ್‌ ಚಿತ್ರ ʼಘಾಟಿʼ (Ghaati)ಯ ಫಸ್ಟ್‌ ಲುಕ್‌ ಮತ್ತು ಟೀಸರ್‌ ರಿಲೀಸ್‌ ಆಗಿದೆ (Ghaati First Glimpse Out). ಟೀಸರ್‌ನಲ್ಲಿ ಅನುಷ್ಕಾ ಕೈಯಲ್ಲಿ ಕತ್ತಿ ಹಿಡಿದು ರಕ್ತ ಸುರಿಸಿ ಉಗ್ರ ಅವತಾರ ತಾಳಿದ್ದು, ಗಮನ ಸೆಳೆಯುತ್ತಿದೆ. ಈ ಮೂಲಕ ಪವರ್‌ಫುಲ್‌ ಪಾತ್ರದ ಮೂಲಕ ಅವರು ಮತ್ತೊಮ್ಮೆ ತೆರೆ ಮೇಲೆ ಮಿಂಚುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.

ʼಘಾಟಿʼ ಚಿತ್ರದ ಮೂಲಕ ಕ್ವೀನ್ ಅನುಷ್ಕಾ ಶೆಟ್ಟಿ ಮತ್ತೆ ಕ್ರಿಯೇಟಿವ್ ಡೈರೆಕ್ಟರ್ ಕ್ರಿಷ್ ಜಾಗರ್ಲಮುಡಿ ಅವರೊಂದಿಗೆ ಕೈಜೋಡಿಸಿದ್ದಾರೆ. ಯುವಿ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ನಿರ್ಮಿಸುತ್ತಿದ್ದಾರೆ. ಬ್ಲಾಕ್ ಬಸ್ಟರ್ ‘ವೇದಂ’ ಯಶಸ್ಸಿನ ನಂತರ ಅನುಷ್ಕಾ ಮತ್ತು ಕ್ರಿಷ್ ಜತೆಯಾಗುತ್ತಿರುವ ಎರಡನೇ‌ ಚಿತ್ರ ಇದಾಗಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಇದು ಅನುಷ್ಕಾ ಅವರ 4ನೇ ಸಿನಿಮಾ ಎನ್ನುವುದು ವಿಶೇಷ.

ರಕ್ತದೋಕುಳಿಯಲ್ಲಿ ಮಿಂದಿರುವ ಅನುಷ್ಕಾ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಗಂಭೀರ ಮುಖಭಾವ, ಹಣೆಯ ಬೊಟ್ಟು ಮತ್ತು ಭಂಗಿ ಸೇದುತ್ತಿರುವ ದೃಶ್ಯ ಅನುಷ್ಕಾ ಅವರ ಪಾತ್ರದ ಗಾಢತೆಯನ್ನು ಬಿಂಬಿಸುತ್ತಿದೆ. ನೀರು ತುಂಬಿದ ಕಣ್ಣುಗಳು ಮತ್ತು ಮೂಗಿನ ಎರಡು ಬದಿಗೆ ಹಾಕಿರುವ ನತ್ತು ಅವರ ಪಾತ್ರದ ತೀವ್ರತೆಯನ್ನು ಮತ್ತಷ್ಟು ಗಾಢವಾಗಿಸಿದೆ. ಈ ಮೂಲಕ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.

‘ವಿಕ್ಟಿಮ್, ಕ್ರಿಮಿನಲ್, ಲೆಜೆಂಡ್’ ಎಂಬ ಟ್ಯಾಗ್‌ಲೈನ್‌ ಹೊಂದಿರುವ ‘ಘಾಟಿ’ ಸಾಮಾನ್ಯ ಕತೆಗಿಂತ ಭಿನ್ನವಾಗಿ ಹೆಚ್ಚಿನದ್ದೇನನ್ನೋ ಹೇಳುವ ಭರವಸೆ ಮೂಡಿಸಿದೆ. ಮಾನವೀಯತೆ, ಜೀವನ ಹೋರಾಟ ಮತ್ತು ಮುಕ್ತಿಯ ಕುರಿತ ಕಥಾಹಂದರವನ್ನು ಇದು ಹೊಂದಿದೆ. ಕ್ರಿಷ್ ಅವರ ನಿರ್ದೇಶನದಲ್ಲಿ ಗಾಢವಾದ ದೃಶ್ಯಗಳ ಮೂಲಕ ಸಸ್ಪೆನ್ಸ್‌ನಿಂದ ಕೂಡಿದ, ಮನಕಲಕುವ ಸಿನಿಮಾ ಮೂಡಿ ಬರುವ ನಿರೀಕ್ಷೆ ಇದೆ. ಇದು ಸರಿ ಮತ್ತು ತಪ್ಪಿನ ಬಗ್ಗೆ‌ ಇರುವ ಸಿನಿಮಾ ಅಲ್ಲ. ಸರಿ ತಪ್ಪುಗಳ ನಡುವಿನ ಹುಡುಕಾಟದ ಕತೆಯಾಗಿದೆ.

‘ಘಾಟಿ’ಯನ್ನು ಸಸ್ಪೆನ್ಸ್ ಮತ್ತು ಆ್ಯಕ್ಷನ್‌ ಥ್ರಿಲ್ಲರ್ ಸಿನಿಮಾವಾಗಿ ಪ್ರಸ್ತುತಪಡಿಸಲಾಗುತ್ತಿದ್ದು, ಶೂಟಿಂಗ್‌ ಅಂತಿಮ ಹಂತದಲ್ಲಿದೆ. ನುರಿತ ತಾಂತ್ರಿಕ ತಂಡವು ಸಿನಿಮಾವನ್ನು ತೆರೆ ಮೇಲೆ ತರುತ್ತಿದೆ. ಮನೋಜ್ ರೆಡ್ಡಿ ಕಟ್ಟಾಸನಿ ಛಾಯಾಗ್ರಹಣ, ನಾಗವೆಳ್ಳಿ ವಿದ್ಯಾ ಸಾಗರ್ ಸಂಗೀತ, ತೋಟಾ ತಾರ್ರಣಿ ಕಲಾ ನಿರ್ದೇಶನ ಹಾಗೂ ಚಾಣಕ್ಯ ರೆಡ್ಡಿ ತೂರುಪು ಅವರ ಸಂಕಲನ ಚಿತ್ರಕ್ಕಿದೆ. ಚಿಂತಕಿಂಡಿ ಶ್ರೀನಿವಾಸ ರಾವ್ ಅವರ ಕಥೆಗೆ ಸಾಯಿ ಮಾಧವ್ ಬುರ್ರ ಸಂಭಾಷಣೆ ಬರೆದಿದ್ದಾರೆ.

‘ಘಾಟಿ’ ಚಿತ್ರವನ್ನು ಪ್ರತಿ ಹಂತದಲ್ಲಿಯೂ ತಾಂತ್ರಿಕವಾಗಿ ಅತ್ಯುನ್ನತ ಮಟ್ಟದಲ್ಲಿ ದೊಡ್ಡ ಬಜೆಟ್‌ನೊಂದಿಗೆ ನಿರ್ಮಿಸಲಾಗುತ್ತಿದೆ. ಈ ಪ್ಯಾನ್ ಇಂಡಿಯಾ ಚಿತ್ರವು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Kamal Haasan: ಬರ್ತ್‌ಡೇ ಸಂಭ್ರಮದಲ್ಲಿ ಕಮಲ್‌ ಹಾಸನ್‌; ‘ಥಗ್‌ ಲೈಫ್‌’ ಟೀಸರ್‌, ರಿಲೀಸ್‌ ಡೇಟ್‌ ಔಟ್‌