Friday, 22nd November 2024

Physical Abuse: ಯೋಗ ಶಿಕ್ಷಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನ; ಸತ್ತಂತೆ ನಟಿಸಿ ಪಾರಾದ ಸಂತ್ರಸ್ತೆ

Physical Abuse

ಚಿಕ್ಕಬಳ್ಳಾಪುರ: ಬೆಂಗಳೂರು ಮೂಲದ ಯೋಗ ಶಿಕ್ಷಕಿಯೊಬ್ಬರನ್ನು ಅಪಹರಿಸಿದ ನಾಲ್ವರ ತಂಡ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸತ್ತಂತೆ ನಟಿಸಿ ಯೋಗ ಶಿಕ್ಷಕಿ ಪಾರಾಗಿದ್ದು, ಘಟನೆಗೆ ಸಂಬಂಧಿಸಿ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್‌ರೆಡ್ಡಿ, ರಮಣ, ಸಲ್ಮಾನ್, ರವಿ ಎಂಬುವವರನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ (Physical Abuse).

ಆರೋಪಿಗಳು ಯೋಗ ಶಿಕ್ಷಕಿಯನ್ನು ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದರು. ಅಪಹರಣಕ್ಕೊಳಗಾಗಿದ್ದ ಯೋಗ ಶಿಕ್ಷಕಿ ಮೂಲತಃ ದೇವನಹಳ್ಳಿ ತಾಲೂಕಿನವರು. ಮದುವೆಯಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸವಿದ್ದರು. ಆರೋಪಿಗಳು ಯೋಗ ಸಿಕ್ಷಕಿಯನ್ನು ಬೆಂಗಳೂರಿನ ಕೆ.ಆರ್‌.ಪುರಂನಿಂದ ಅಪಹರಿಸಿದ್ದರು ಎನ್ನಲಾಗಿದೆ.

ಅತ್ಯಾಚಾರಕ್ಕೆ ಯತ್ನ

ಬೆಂಗಳೂರಿನಿಂದ ಸಂತ್ರಸ್ತೆಯನ್ನು ಕಾರಿನಲ್ಲಿ ಅಪಹರಿಸಿದ ತಂಡ ಚಿಕ್ಕಬಳ್ಳಾಪುರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದೆ. ಅಲ್ಲಿ ಅತ್ಯಾಚಾರಕ್ಕೆ ಯತ್ನಿಸಿದೆ. ಶಿಕ್ಷಕಿ ಪ್ರತಿರೋಧ ತೋರಿದಾಗ ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಈ ವೇಳೆ ಶಿಕ್ಷಕಿ ಸತ್ತು ಹೋಗಿರುವಂತೆ ನಟಿಸಿದ್ದಾರೆ. ಅವರು ಮೃತಪಟ್ಟಿದ್ದಾರೆಂದು ಭಾವಿಸಿದ ಆರೋಪಿಗಳು ಬಳಿಕ ಗುಂಡಿ ತೋಡಿ ಅವರನ್ನು ಅದಕ್ಕೆ ಎಸೆದು ಹೊರಟು ಹೋಗಿದ್ದಾರೆ. ಬಳಿಕ ಗುಂಡಿಯಿಂದ ಎದ್ದು ಬಂದ ಸಂತ್ರಸ್ತೆ ಅರೆ ಬೆತ್ತಲಾಗಿ ನಿರ್ಜನ ಪ್ರದೇಶದಿಂದ ನಡೆದುಕೊಂಡು ದಿಬ್ಬೂರಹಳ್ಳಿಗೆ ಬಂದಿದ್ದಾರೆ. ಸ್ಥಳೀಯರು ಅವರಿಗೆ ಬಟ್ಟೆ ಕೊಟ್ಟು, ಗಾಯಕ್ಕೆ ಔಷಧಿ ಹಚ್ಚಿ ಠಾಣೆಗೆ ಕರೆದೊಯ್ದಿದ್ದಾರೆ. ಕೊಲೆಗೆ ಯತ್ನ, ಅಪಹರಣ, ಅತ್ಯಾಚಾರ ಯತ್ನದ ದೂರು ದಾಖಲಿಸಿಕೊಂಡ ಪೊಲೀಸರು ಇದೀಗ ನಾಲ್ವರನ್ನು ಬಂಧಿಸಿದ್ದಾರೆ.

ಯೋಗ ಶಿಕ್ಷಕಿಯ ಕೊಲೆಗೆ ಆಕೆಯ ಪ್ರಿಯಕರ ಸಂತೋಷ್​ ಕುಮಾರ್ ಪತ್ನಿ ಸುಪಾರಿ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಯುವತಿ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ

ಮೈಸೂರು: 2021ರಲ್ಲಿ ಮೈಸೂರಿನ‌ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಗ್ಯಾಂಗ್ ​ರೇಪ್ ಪ್ರಕರಣ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ನ. 4ರಂದು ಅಂತಹುದೇ ಹೇಯ ಕೃತ್ಯವೊಂದು ನಗರದಲ್ಲಿ ಬೆಳಕಿಗೆ ಬಂದಿತ್ತು. ಯುವತಿಯ ಮೇಲೆ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಡಿಕೇರಿ ಮೂಲದ ಯುವತಿಯ ಮೇಲೆ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಯುವತಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. ಮಡಿಕೇರಿಯಿಂದ ಬಂದು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಜತೆಗೆ ಇದ್ದಂತಹ ಸ್ನೇಹಿತರೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 2021ರಲ್ಲಿ ಮೈಸೂರಿನ‌ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ಹೊರವಲಯದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ​ರೇಪ್ ನಡೆದಿತ್ತು. ಈ ಪ್ರಕರಣದಲ್ಲಿ ಒಬ್ಬ ಬಾಲಾಪರಾಧಿ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಈ ಸುದ್ದಿಯನ್ನೂ ಓದಿ: Physical Abuse: ವಿಡಿಯೊ ಮಾಡುವಾಗ ಯುವತಿಯ ಎದೆ ಮುಟ್ಟಿ ಪರಾರಿಯಾದ 10 ವರ್ಷದ ಬಾಲಕ; ಬೆಂಗಳೂರಲ್ಲಿ ವಿಕೃತ ಕೃತ್ಯ!