Thursday, 7th November 2024

S Jaishankar: ಜೈಶಂಕರ್‌ ಸಂದರ್ಶನ ಪ್ರಸಾರ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮ ನಿರ್ಬಂಧಿಸಿದ ಕೆನಡಾಕ್ಕೆ ಚಾಟಿ ಬೀಸಿದ ಭಾರತ

S Jaishankar

ಹೊಸದಿಲ್ಲಿ: ಭಾರತ ಮತ್ತು ಕೆನಡಾ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದೀಗ ಕೆನಡಾದ ಉದ್ಧಟತನಕ್ಕೆ ಭಾರತ ಮತ್ತೊಮ್ಮೆ ಚಾಟಿ ಬೀಸಿದೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ (Penny Wong) ಅವರ ಪತ್ರಿಕಾಗೋಷ್ಠಿ ಮತ್ತು ಎಸ್.ಜೈಶಂಕರ್ ಸಂದರ್ಶನವನ್ನು ಪ್ರಸಾರ ಮಾಡಿದ ಕೆಲವೇ ಗಂಟೆಗಳ ನಂತರ ಕೆನಡಾದಲ್ಲಿ ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆ ಆಸ್ಟ್ರೇಲಿಯಾ ಟುಡೇಯ ಸಾಮಾಜಿಕ ಜಾಲತಾಣವನ್ನು ನಿರ್ಬಂಧಿಸಿದ್ದು, ಇದನ್ನು ವಿದೇಶಾಂಗ ಸಚಿವಾಲಯ ಖಂಡಿಸಿದೆ. ಕೆನಡಾದ ಜಸ್ಟಿನ್ ಟ್ರುಡೊ ಸರ್ಕಾರ ಈ ಮೂಲಕ ಬೂಟಾಟಿಕೆ ಪ್ರದರ್ಶಿಸಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ದ ವಕ್ತಾರ ರಣಧೀರ್ ಜೈಸ್ವಾಲ್ ಕಿಡಿ ಕಾರಿದ್ದಾರೆ.

“ನಿರ್ದಿಷ್ಟ ಸಾಮಾಜಿಕ ಜಾಲತಾಣಗಳ ಪೇಜ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು ಇದು ಈಗ ಕೆನಡಾದ ವೀಕ್ಷಕರಿಗೆ ಲಭ್ಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಪೆನ್ನಿ ವಾಂಗ್ ಅವರೊಂದಿಗೆ ಡಾ.ಎಸ್.ಜೈಶಂಕರ್ ಅವರು ನಡೆಸಿದ ಪತ್ರಿಕಾಗೋಷ್ಠಿಯನ್ನು ಪ್ರಸಾರ ಮಾಡಿದ ಒಂದು ಗಂಟೆ ಅಥವಾ ಕೆಲವೇ ಗಂಟೆಗಳ ನಂತರ ಪೇಜ್‌ಗಳನ್ನು ನಿರ್ಬಂಧಿಸಲಾಗಿದೆ. ಇದು ಕೆನಡಾದ ಬೂಟಾಟಿಕೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ” ಎಂದು ಅವರು ಗುರುವಾರ (ನ. 7) ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಆಸ್ಪ್ರೇಲಿಯಾದ ಕ್ಯಾನ್ಬೆರಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್‌, ಕೆನಡಾದಲ್ಲಿ ಭಾರತ ವಿರೋಧಿ ಶಕ್ತಿಗಳಿಗೆ ರಾಜಕೀಯವಾಗಿ ಅವಕಾಶ ನೀಡಲಾಗುತ್ತಿದೆ ಎಂದು ಒತ್ತಿ ಹೇಳಿದ್ದರು. ಸಚಿವರು ಕೆನಡಾವನ್ನು ಟೀಕಿಸಿದ್ದರಿಂದ ಆಸ್ಟ್ರೇಲಿಯಾ ಟುಡೇ ಚಾನೆಲ್ ಅನ್ನು ನಿರ್ಬಂಧಿಸಲಾಗಿದೆ.

ಗುರುವಾರ ಕೊನೆಗೊಂಡ ಆಸ್ಟ್ರೇಲಿಯಾ ಪ್ರವಾಸದ ವೇಳೆ ಜೈಶಂಕರ್ ಅವರು ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನಿಸ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಜತೆಗೆ ಪೆನ್ನಿ ವಾಂಗ್ ಅವರೊಂದಿಗೂ ಚರ್ಚೆ ನಡೆಸಿದರು. ʼʼತಮ್ಮ ಮಾಧ್ಯಮ ಸಂವಾದದಲ್ಲಿ ಜೈಶಂಕರ್‌ ಅವರು, ಕೆನಡಾದ ಪುರಾವೆಗಳಿಲ್ಲದ ಆರೋಪ, ಭಾರತೀಯ ರಾಜತಾಂತ್ರಿಕರ ಕಣ್ಗಾವಲು ಮತ್ತು ಕೆನಡಾದಲ್ಲಿ ಭಾರತ ವಿರೋಧಿ ಶಕ್ತಿಗಳಿಗೆ ರಾಜಕೀಯ ಬೆಂಬಲ ನೀಡುತ್ತಿರುವ ಬಗ್ಗೆ ಮಾತನಾಡಿದ್ದರು. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಟುಡೇ ಚಾನೆಲ್ ಅನ್ನು ನಿರ್ಬಂಧಿಸಲಾಗಿದೆʼʼ ಎಂದು ರಣಧೀರ್ ಜೈಸ್ವಾಲ್ ವಿವರಿಸಿದ್ದಾರೆ.

ಕೆನಡಾಗೆ ಪ್ರಧಾನಿ ಮೋದಿ ಎಚ್ಚರಿಕೆ

ಕೆನಡಾದಲ್ಲಿ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಖಂಡನೆ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಅಧಿಕಾರಿಗಳನ್ನು ಬೆದರಿಸುವ ಹೇಡಿತನದ ಪ್ರಯತ್ನ ಎಂದು ಕರೆದಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, “ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾದ ಸರ್ಕಾರವು ಈ ದುಷ್ಕೃತ್ಯದ ವಿರುದ್ಧ ನ್ಯಾಯ ಸಮ್ಮತ ಕ್ರಮ ಕೈಗೊಳ್ಳುತ್ತದೆ ಮತ್ತು ಎತ್ತಿಹಿಡಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಭಾರತ ಸರ್ಕಾರವು ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳು ನಡೆಸಿದ ಹಿಂಸಾಚಾರದ ಕೃತ್ಯಗಳನ್ನು ಖಂಡಿಸುತ್ತದೆ. ಅಲ್ಲದೇ ಎಲ್ಲಾ ಹಿಂದೂ ದೇಗುಲ ಮತ್ತ ಎಲ್ಲಾ ಪೂಜಾ ಸ್ಥಳಗಳಿಗೆ ಭದ್ರತೆ ಒದಗಿಸಬೇಕೆಂದು ಎಂದು ವಿದೇಶಾಂಗ ಸಚಿವಾಲಯ ಒತ್ತಾಯಿಸಿದ ಕೆಲವೇ ಕೆಲವು ಗಂಟೆಗಳ ನಂತರ ಪ್ರಧಾನಿಯವರ ಸಾಮಾಜಿಕ ಮಾಧ್ಯಮ ಪೋಸ್ಟ್ ಬಂದಿದೆ.

ಈ ಸುದ್ದಿಯನ್ನೂ ಓದಿ: Khalistani attack : ಕೆನಡಾದಲ್ಲಿ ಹಿಂದೂಗಳೇ ಟಾರ್ಗೆಟ್‌? ಪೊಲೀಸರಿಂದಲೂ ನಡೀತಿದೆ ಭೀಕರ ಹಲ್ಲೆ-ಮತ್ತೊಂದು ಶಾಕಿಂಗ್‌ ವಿಡಿಯೋ ವೈರಲ್‌