Monday, 18th November 2024

Pinarayi Vijayan: ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ; ಕೇರಳ ಸಿಎಂ ಪಿಣರಾಯ್‌ ವಿಜಯನ್‌ ಕಿಡಿ

Pinarayi Vijayan

ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಲೋಕಸಭೆ ಉಪಚುನಾವಣೆ(Wayanad By Election) ಕಾವೇರಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳು ಕೇಳಿಬಂದಿವೆ. ತಮ್ಮ‌ ಸಹೋದರನ ನಿರ್ಗಮನದಿಂದ ತೆರವುಗೊಂಡಿರುವ ವಯನಾಡು ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌(Pinarayi Vijayan) ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿ ಇಸ್ಲಾಮಿ ಸಂಘಟನೆಯಾದ ಜಮಾತ್-ಎ-ಇಸ್ಲಾಮಿ(Jamaat-e-Islami) ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದಾರೆ ಪಿಣರಾಯಿ ವಿಜಯನ್ ಗುರುವಾರ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ವಿಜಯನ್‌, ವಯನಾಡ್ ಉಪಚುನಾವಣೆಯು ಕಾಂಗ್ರೆಸ್ ಪಕ್ಷದ ಜಾತ್ಯತೀತ ಮುಖವಾಡವನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ. ಪ್ರಿಯಾಂಕಾ ಗಾಂಧಿ ಅವರು ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಅಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಾಗಾದರೆ, ಕಾಂಗ್ರೆಸ್‌ನ ನಿಲುವು ನಿಖರವಾಗಿ ಏನು? ನಮ್ಮ ದೇಶವು ಜಮಾತ್-ಎ-ಇಸ್ಲಾಮಿಯ ಬಗ್ಗೆ ತಿಳಿದಿಲ್ಲ. ಆ ಸಂಘಟನೆಯ ಸಿದ್ಧಾಂತವು ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಹೊಂದಿಕೆಯಾಗುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.

ಸಿಪಿಐ(ಎಂ)ನ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನವ್ಯಾ ಹರಿದಾಸ್ ವಿರುದ್ಧ ಸ್ಪರ್ಧಿಸುತ್ತಿರುವ ಪ್ರಿಯಾಂಕಾ ಗಾಂಧಿಗೆ ಜಮಾತ್-ಎ-ಇಸ್ಲಾಮಿಗೆ ಸಂಬಂಧಿಸಿದ ರಾಜಕೀಯ ಸಂಘಟನೆಯಾದ ವೆಲ್ಫೇರ್ ಪಾರ್ಟಿ ತನ್ನ ಬೆಂಬಲವನ್ನು ನೀಡಿದ ಕೆಲವು ದಿನಗಳ ನಂತರ ಮುಖ್ಯಮಂತ್ರಿಯವರ ಈ ಕಾಮೆಂಟ್ ಬಂದಿದೆ.

ಜಮಾತ್ ದೇಶ ಅಥವಾ ಅದರ ಪ್ರಜಾಪ್ರಭುತ್ವಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ದೇಶದ ಆಡಳಿತವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದರು. ಇತ್ತೀಚಿನ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳನ್ನು ಉಲ್ಲೇಖಿಸಿ, ವಿಜಯನ್ ಅವರು ಜಮಾತ್-ಎ-ಇಸ್ಲಾಮಿ ಅಲ್ಲಿ ಮೂರು ಅಥವಾ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಜಿಸಿದ್ದರು. ಅಲ್ಲಿ ಸಿಪಿಐ(ಎಂ) ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ ಅವರನ್ನು ಸೋಲಿಸುವುದು ಗುರಿಯಾಗಿದೆ ಎಂದು ಆರೋಪಿಸಿದರು.

ಜಮಾತ್‌ ಎ ಇಸ್ಲಾಮಿಗೆ ಒಂದೇ ನೀತಿ ಇದೆ. ಅವರು ಯಾವುದೇ ರೀತಿಯ ಪ್ರಜಾಸತ್ತಾತ್ಮಕ ಆಡಳಿತವನ್ನು ಒಪ್ಪಿಕೊಳ್ಳುವುದಿಲ್ಲ. ಅದು ಅವರ ಸಿದ್ಧಾಂತ. ಈಗ ಅವರು ಯುಡಿಎಫ್‌ಗೆ ಸಹಾಯ ಮಾಡಲು ಬಯಸುತ್ತಿದ್ದಾರೆ. ಜಾತ್ಯತೀತತೆಯ ಪರವಾಗಿ ನಿಲ್ಲುವವರು ಎಲ್ಲಾ ರೀತಿಯ ಮತೀಯತೆಯನ್ನು ವಿರೋಧಿಸಬೇಕಲ್ಲವೇ? ಜಮಾತ್‌ ಎ ಇಸ್ಲಾಮಿಯ ಮತವನ್ನು ಕಾಂಗ್ರೆಸ್ ಬೇಡವೆಂದು ಹೇಳಲಾಗುವುದಿಲ್ಲವೇ ಎಂದು ವಿಜಯನ್ ಪ್ರಶ್ನಿಸಿದರು.

ರಾಹುಲ್ ಗಾಂಧಿ ತಮ್ಮ ಪರ್ಯಾಯ ಕ್ಷೇತ್ರವಾದ ಅಮೇಥಿಯನ್ನು ಆಯ್ಕೆ ಮಾಡಿದ ನಂತರ ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ ನವೆಂಬರ್ 13 ರಂದು ನಡೆಯಲಿದೆ.

ಈ ಸುದ್ದಿಯನ್ನೂ ಓದಿ: Priyanka Gandhi: ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆ; ಅ. 23ರಂದು ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ