Friday, 22nd November 2024

Poonam Mahajan: ʼನನ್ನ ತಂದೆಯ ಹತ್ಯೆಯ ಹಿಂದೆ ಕಾಣದ ಕೈಗಳ ಸಂಚಿದೆ…ʼ ಪ್ರಮೋದ್‌ ಮಹಾಜನ್‌ ಕೊಲೆ ಬಗ್ಗೆ ಪುತ್ರಿ ಪೂನಂ ಸ್ಫೋಟಕ ಹೇಳಿಕೆ

Poonam Mahajan

ಮುಂಬೈ: ಮಹಾರಾಷ್ಟ್ರದ(Maharashtra) ಬಿಜೆಪಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ (Pramod Mahajan) ಅವರ ಪುತ್ರಿ ಹಾಗೂ ಬಿಜೆಪಿಯ ಮಾಜಿ ಸಂಸದೆ ಪೂನಂ ಮಹಾಜನ್ (Poonam Mahajan) ಅವರು, ‘ತಮ್ಮ ತಂದೆ ಪ್ರಮೋದ್ ಮಹಾಜನ್ ಹತ್ಯೆ ದೊಡ್ಡ ಸಂಚು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ . ಈ ಬಗ್ಗೆ ತನಿಖೆ ಪ್ರಾರಂಭಿಸಲು ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಸಂದರ್ಶನದವೊಂದರಲ್ಲಿ ಮಾತನಾಡಿದ ಅವರು ತನ್ನ ತಂದೆಯ ಸಾವಿನ ಹಿಂದೆ ಯಾರೋ ಇದ್ದಾರೆ. ಕಾಣದ ಕೈಗಳು ಈ ಕೃತ್ಯ ಮಾಡಲು ಬೆಂಬಲ ಸೂಚಿಸಿವೆ. ತಮ್ಮ ತಂದೆಯ ರಾಜಕೀಯ ಬದುಕನ್ನು ಕೊನೆಗಾಣಿಸುವ ಸಲುವಾಗಿ ಕೊಲೆ ಮಾಡಲಾಗಿದೆ. ಮುಂದೊಂದು ದಿನ ಅದು ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.

2006 ರಲ್ಲಿ, ಪ್ರಮೋದ್ ಮಹಾಜನ್ ಅವರ ಹತ್ಯೆ ಮಾಡಲಾಗಿತ್ತು. ಸಹೋದರ ಪ್ರವೀಣ್‌ ಮಹಾಜನ್‌, ಪ್ರಮೋದ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಮೂರು ಗುಂಡುಗಳು ಮಹಾಜನ್ ಎದೆ, ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಕರುಳುಗಳನ್ನು ಹೊಕ್ಕಿದ್ದವು. ಭಾರೀ ಪ್ರಮಾಣದ ಆಂತರಿಕ ರಕ್ತಸ್ರಾವ ಆಗಿತ್ತು. ಗಾಯಗೊಂಡ ಅವರು 13 ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಘಟನೆಯ ನಂತರ ಪ್ರವೀಣ್ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದ.

ಇದೀಗ 18 ವರ್ಷಗಳ ನಂತರ ಪ್ರಮೋದ್‌ ಮಹಾಜನ್‌ ಮಗಳು ಮಾಜಿ ಸಂಸದೆ ಪೂನಂ ಮಾಹಾಜನ್‌ ತನ್ನ ತಂದೆಯ ಸಾವಿನ ಹಿಂದಿನ ಸತ್ಯ ಬಯಲಾಗಬೇಕು ಕಾಣದ ಕೈಗಳು ನಡೆಸಿದ ಸಂಚು ಬಯಲಾಗಬೇಕು ಎಂದು ಹೇಳಿದ್ದಾರೆ. ನಮ್ಮ ಕುಟುಂಬ ಕಲಹದಿಂದ ಮಾತ್ರ ಆದ ಕೊಲೆ ಇದಲ್ಲ, ಸಹೋದರರ ನಡುವೆ ಯಾವುದೇ ಕಲಹವಿರಲಿಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಬಹುಶಃ ಇಂದಲ್ಲಾ ನಾಳೆ ಸತ್ಯ ಹೊರಗೆ ಬಂದೇ ಬರುತ್ತದೆ . ನನ್ನ ತಂದೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ Maharashtra Elections 2024: ವಿಪಕ್ಷಗಳ ದೂರವಾಣಿ ಕದ್ದಾಲಿಸಿದ ಆರೋಪ; ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಆದೇಶ

ಬಿಜೆಪಿ ನಾಯಕ ಸುಧೀರ್ ಮುಂಗಂಟಿವಾರ್ ಕೂಡ ಪೂನಂ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಪ್ರಮೋದ್ ಮಹಾಜನ್ ನಮಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಅವರ ಹತ್ಯೆ ಎಲ್ಲರಿಗೂ ಆಘಾತವನ್ನು ನೀಡಿದೆ. ಪಕ್ಷ ಒಬ್ಬ ಒಳ್ಳೆಯ ನಾಯಕನನ್ನು ಕಳೆದು ಕೊಂಡಿದೆ ಎಂದಿದ್ದಾರೆ. ಪೂನಂ ಅವರ ಬಳಿ ಯಾವುದೇ ಪುರಾವೆ ಅಥವಾ ಅಂತಹ ದಾಖಲೆಗಳಿದ್ದರೆ ಅದನ್ನು ಸರ್ಕಾರಕ್ಕೆ ನೀಡಬೇಕು. ಸರ್ಕಾರ ಇದರ ಬಗ್ಗೆ ತನಿಖೆ ನಡೆಸಲಿದೆ. ತಪ್ಪಿತಸ್ಥರು ಯಾರೇ ಆಗಿದ್ದರು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.