Friday, 8th November 2024

IND-A vs AUS-A: ವಿಚಿತ್ರವಾಗಿ ಕ್ಲೀನ್‌ ಬೌಲ್ಡ್‌ ಆದ ಕನ್ನಡಿಗ ಕೆಎಲ್‌ ರಾಹುಲ್‌! ವಿಡಿಯೊ ವೈರಲ್‌

Star Batter KL Rahul's Brain Fade Moment Against Australia A-Watch

ನವದೆಹಲಿ: ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಅವರು ತಮ್ಮ ವೃತ್ತಿ ಜೀವನದ ಅತ್ಯಂತ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ಪ್ರಸ್ತುತ ಆಸ್ಟ್ರೇಲಿಯಾ ʼಎʼ ವಿರುದ್ಧದ ಪಂದ್ಯದಲ್ಲಿ (IND-A vs AUS-A) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದ ಕೆಎಲ್‌ ರಾಹುಲ್‌, ಇದೀಗ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಕೇವಲ 10 ರನ್‌ ಗಳಿಸಿ ಔಟ್‌ ಆಗಿದ್ದಾರೆ. ಆ ಮೂಲಕ ಪ್ರತಿಷ್ಠಿತ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಗೂ ಮುನ್ನ ಕನ್ನಡಿಗ ಕೆಎಲ್‌ ರಾಹುಲ್‌ ಅವರ ಆಯ್ಕೆಯ ಬಗ್ಗೆ ಹಲವು ಪ್ರಶ್ನಗಳು ಎದುರಾಗಿವೆ.

ಇದಕ್ಕೂ ಮುನ್ನ ನ್ಯೂಜಿಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಆಡಿದ್ದ ಏಕೈಕ ಪಂದ್ಯದಲ್ಲಿಯೂ ರಾಹುಲ್‌ ಕ್ರಮವಾಗಿ 12 ಮತ್ತು 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೂ ಅವರಿಗೆ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿ ಸ್ಥಾನವನ್ನು ಕಲ್ಪಿಸಲಾಗಿದೆ. ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ಕನ್ನಡಿಗ ರಾಹುಲ್‌ ಅವರು ಬಿಸಿಸಿಐ ಆಯ್ಕೆದಾರರಿಗೆ ಭಾರಿ ನಿರಾಶೆ ಮೂಡಿಸಿದ್ದಾರೆ.

ಈ ಹಿಂದೆ ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಕೆಎಲ್‌ ರಾಹುಲ್‌ ಇದೀಗ ಟೆಸ್ಟ್‌ ತಂಡದಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೆ, ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಗೂ ಮುನ್ನ ಅವರಿಗೆ ಆಸ್ಟ್ರೇಲಿಯಾ ʼಎʼ ಎದುರಿನ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಆಡಲು ಅವಕಾಶ ನೀಡಲಾಗಿತ್ತು. ಆದರೆ, ಈ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವ ಮೂಲಕ ಅವರು ಭಾರಿ ನಿರಾಶೆಯನ್ನು ಮೂಡಿಸಿದ್ದಾರೆ.

ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಸ್ಕಾಟ್‌ ಬೋಲೆಂಡ್‌ಗೆ ವಿಕೆಟ್‌ ಒಪ್ಪಿಸಿದ್ದ ಕೆಎಲ್‌ ರಾಹುಲ್‌, ದ್ವಿತೀಯ ಇನಿಂಗ್ಸ್‌ನಲ್ಲಿ ಸ್ಪಿನ್ನರ್‌ ಕೋರೆ ರಾಚಿಸಿಯೋಲ್‌ ಅವರ ಎಸೆತದಲ್ಲಿ ವಿಚಿತ್ರವಾಗಿ ಕ್ಲೀನ್‌ ಬೌಲ್ಡ್‌ ಆದರು. ಆ ಮೂಲಕ ಕೇವಲ 14 ರನ್‌ಗಳ ಮೂಲಕ ಅವರು ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯವನ್ನು ಮುಗಿಸಿದ್ದಾರೆ.

ವಿಚಿತ್ರವಾಗಿ ಕ್ಲೀನ್‌ ಬೌಲ್ಡ್‌ ಆದ ಕೆಎಲ್‌ ರಾಹುಲ್‌

ಪಂದ್ಯದ ದ್ವಿತೀಯ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಸ್ಪಿನ್ನರ್‌ ಕೋರೆ ರಾಚಿಸಿಯೋಲ್‌ ಅವರ ಎಸೆತ ಆಫ್‌ ಸ್ಪಿನ್‌ ಆಗಬಹುದೆಂದು ಅಂದಾಜಿಸಿ ಕೆಎಲ್‌ ರಾಹುಲ್‌, ಪ್ಯಾಡ್‌ನಲ್ಲಿ ಚೆಂಡನ್ನು ತಳ್ಳಲು ಪ್ರಯತ್ನಿಸಿದರು. ಆದರೆ, ಚೆಂಡು ನಿರೀಕ್ಷೆಯಂತೆ ಹೆಚ್ಚು ಟರ್ನ್‌ ಆಗದೆ ರಾಹುಲ್‌ ಅವರ ಎಡ ಕಾಲಿನ ಪ್ಯಾಡ್‌ಗೆ ತಾಗಿ ಸ್ಟಂಪ್‌ಗಳಿಗೆ ಬಡೆಯಿತು. ಆ ಮೂಲಕ ರಾಹುಲ್‌ ಚೆಂಡಿನ ತಿರುವನ್ನು ಅರಿಯುವಲ್ಲಿ ಸಂಪೂರ್ಣ ವಿಫಲರಾದರು ಹಾಗೂ ಆಘಾತದೊಂದಿಗೆ ಕನ್ನಡಿಗ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಈ ವಿಡಿಯೋ ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಟೀಕೆಗಳಿಗೆ ಗುರಿಯಾದ ಕೆಎಲ್‌ ರಾಹುಲ್‌

ನ್ಯೂಜಿಲೆಂಡ್‌ ವಿರುದ್ಧದ ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಕೆಎಲ್‌ ರಾಹುಲ್‌ ಅವರು, ಇದೀಗ ಆಸ್ಟ್ರೇಲಿಯಾ ʼಎʼ ವಿರುದ್ಧದ ಪಂದ್ಯದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಆ ಮೂಲಕ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಗೂ ಮುನ್ನ ಬಿಸಿಸಿಐ ಆಯ್ಕೆದಾರರು ಕನ್ನಡಿಗನ ಬಗ್ಗೆ ವಿಶ್ವಾಸವನ್ನು ಕಳೆದುಕೊಳ್ಳುವಂತಾಗಿದೆ. ಮತ್ತೊಂದು ಕಡೆ ಕೆಎಲ್‌ ರಾಹುಲ್‌ ಔಟ್‌ ಆದ ಹಾದಿಯನ್ನು ನೋಡಿದ ಅಭಿಮಾನಿಗಳು ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ. ಕೆಎಲ್‌ ರಾಹುಲ್‌ ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನ ಬಹುತೇಕ ಮುಗಿದಂತೆ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: AUS-A vs IND-A: ಭಾರತ ‘ಎ’ ತಂಡದ ಪರ ವೈಫಲ್ಯ ಅನುಭವಿಸಿದ ಕನ್ನಡಿಗ ಕೆಎಲ್‌ ರಾಹುಲ್‌!