ಮಾಸಿಕ ಆದಾಯವೊಂದು (Monthly Income) ಇದ್ದರೆ ಖರ್ಚು, ವೆಚ್ಚಗಳ ಮೇಲೆ ನಿಯಂತ್ರಣ ಹಾಕಿಕೊಂಡು, ಆದಾಯಕ್ಕೆ ಅನುಗುಣವಾಗಿ ಯೋಜನೆ ರೂಪಿಸಿಕೊಂಡು ನೆಮ್ಮದಿಯಾಗಿ ಪ್ರತಿಯೊಬ್ಬರೂ ಜೀವನ ನಡೆಸಲು ಸಾಧ್ಯವಿದೆ. ಮಾಸಿಕ ಆದಾಯಕ್ಕೆ ಸೂಕ್ತವಾದ ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಅಂಚೆ ಕಚೇರಿಯಲ್ಲಿರುವ (Post Office Scheme) ಮಾಸಿಕ ಆದಾಯ ಯೋಜನೆ (POMIS) ಬಗ್ಗೆ ನೋಡಬಹುದು.
ಹೂಡಿಕೆ ಮಾಡುವಾಗ ಎಲ್ಲರು ಹೆಚ್ಚಾಗಿ ಭದ್ರತೆ ಮತ್ತು ಲಾಭವನ್ನು ನೋಡುತ್ತಾರೆ. ಇಂತಹ ಒಂದು ಯೋಜನೆ ಅಂಚೆ ಕಚೇರಿಯಲ್ಲಿದೆ. ಪೋಸ್ಟ್ ಆಫೀಸ್ ನಲ್ಲಿರುವ ಮಾಸಿಕ ಆದಾಯ ಯೋಜನೆಯು ಶೇ. 100ರಷ್ಟು ಭದ್ರತೆಯನ್ನು ಖಾತರಿಪಡಿಸುವ ಉತ್ತಮ ಆದಾಯ ನೀಡುವ ಯೋಜನೆಯಾಗಿದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS) ಪ್ರಸ್ತುತ ವಾರ್ಷಿಕ ಶೇ. 7.4 ಬಡ್ಡಿಯನ್ನು ನೀಡುತ್ತಿದೆ.
ಖಾತೆ ತೆರೆಯಲು ಏನು ಮಾಡಬೇಕು?
ಹತ್ತಿರದ ಅಂಚೆ ಕಚೇರಿಯಲ್ಲಿ ಹೋಗಿ ಮಾಸಿಕ ಆದಾಯ ಯೋಜನೆಯ ಖಾತೆಯನ್ನು ಯಾರು ಬೇಕಾದರೂ ತೆರೆಯಬಹುದು. ಖಾತೆಯನ್ನು ತೆರೆಯಲು, ಕೆವೈಸಿ ಫಾರ್ಮ್ ಅನ್ನು ಭರ್ತಿ ಮಾಡಿ ಪಾನ್ ಕಾರ್ಡ್ನ ನಕಲನ್ನು ಲಗತ್ತಿಸಬೇಕು. ಇದರಲ್ಲಿ ಜಂಟಿ ಖಾತೆ ತೆರೆಯುವ ಅವಕಾಶ ಕೂಡ ಇದೆ. ಜಂಟಿ ಖಾತೆಯನ್ನು ತೆರೆದರೆ ಇತರ ಸದಸ್ಯರ ಪಾನ್ ಕಾರ್ಡ್ ಅನ್ನು ಸಹ ಲಗತ್ತಿಸಬೇಕಾಗುತ್ತದೆ.
ಹೂಡಿಕೆ ಮಾಡುವ ಮುನ್ನ
ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆದಾರ ಪ್ರತಿ ತಿಂಗಳು ಬಡ್ಡಿಯನ್ನು ಪಡೆಯುತ್ತಾನೆ. ಖಾತೆಯನ್ನು ತೆರೆದ ತಕ್ಷಣ ಮತ್ತು ಖಾತೆಯು ಪಕ್ವವಾಗುವವರೆಗೆ ಪ್ರತಿ ತಿಂಗಳ ಕೊನೆಯಲ್ಲಿ ಬಡ್ಡಿಯನ್ನು ಸೇರಿಸಲಾಗುತ್ತದೆ. ಈ ಯೋಜನೆಯಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿ ಪರಿಷ್ಕರಣೆ ಇರುತ್ತದೆ. ಈ ಯೋಜನೆಯ ಅವಧಿಯು 5 ವರ್ಷಗಳು.
ಖಾತೆಯನ್ನು ತೆರೆದ ಅನಂತರ 1 ವರ್ಷದವರೆಗೆ ಹೂಡಿಕೆದಾರರು ಖಾತೆಯಿಂದ ಯಾವುದೇ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ. ಹೂಡಿಕೆದಾರರು 3 ವರ್ಷಗಳ ಮೊದಲು ಖಾತೆಯನ್ನು ಮುಚ್ಚಿದರೆ ಮೂಲ ಮೊತ್ತದಿಂದ ಶೇ. 2ರಷ್ಟು ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. 3 ವರ್ಷಗಳ ಅನಂತರ ಖಾತೆಯನ್ನು ಮುಚ್ಚುವಾಗ ಶೇ. 1ರಷ್ಟು ಕಡಿತವಿದೆ.
ಈ ಯೋಜನೆಯಲ್ಲಿ ಒಂದೇ ಖಾತೆಯಲ್ಲಿ ಗರಿಷ್ಠ 15 ಲಕ್ಷ ರೂ. ಮತ್ತು ಕನಿಷ್ಠ 1,000 ರೂ. ಹೂಡಿಕೆಗೆ ಅವಕಾಶವಿದೆ.
8th Pay Commission: ನೌಕರರ ವೇತನ 18,000 ರೂ.ನಿಂದ 34,560 ರೂ.ಗೆ ಹೆಚ್ಚಳ ನಿರೀಕ್ಷೆ!
ಮಾಸಿಕ ಆದಾಯದ ನಿರೀಕ್ಷೆ
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಶೇ. 7.4 ಪ್ರತಿಶತ ಬಡ್ಡಿಯಲ್ಲಿ ಪ್ರತಿ ತಿಂಗಳು 3,083 ರೂಪಾಯಿಗಳ ಬಡ್ಡಿ ಆದಾಯವನ್ನು ಪಡೆಯುತ್ತೀರಿ. ಹೀಗೆ ಲೆಕ್ಕ ಹಾಕಿದರೆ ಒಂದು ವರ್ಷದಲ್ಲಿ 36,996 ರೂಪಾಯಿ ಬಡ್ಡಿಯಿಂದ ಆದಾಯ ದೊರೆಯುತ್ತದೆ.