Saturday, 9th November 2024

Assault Case: ಗಂಡ್ಸಾಗಿದ್ರೆ ಪೊಲೀಸರಿಗೆ ಹೊಡಿ ಎಂದ ತಾಯಿ; ಲೇಡಿ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಯುವಕ ಅರೆಸ್ಟ್‌!

Assault Case

ನೆಲಮಂಗಲ: ತಾಯಿ ಮಾತಿನಿಂದ ಪ್ರಚೋದನೆಗೊಂಡ ಮಗ ಮಹಿಳಾ ಪಿಎಸ್​ಐ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು ಎಂದು ಹೇಳಿದ್ದರಿಂದ ರೊಚ್ಚಿಗೆದ್ದ ಮಗ, ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ್ದರಿಂದ ಆತನನ್ನು ಪೊಲೀಸರು ಬಂದಿಸಿದ್ದಾರೆ.

ಮಧಸೂದನ್​ ಹಲ್ಲೆ ಮಾಡಿದ ಆರೋಪಿ. ಬಿಇ ಡ್ರಾಪ್​ಔಟ್ ಆಗಿರುವ ಮಧುಸೂದನ್​ ನೆಲಮಂಗಲದ ಮುಕ್ತಿನಾಥೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದಾನೆ. ಮಧುಸೂದನ್​ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಈ ವಿಚಾರವಾಗಿ ತಾಯಿ ಸುಶೀಲಮ್ಮ ಮತ್ತು ಮಧುಸೂದನ್​ ನಡುವೆ ಗಲಾಟೆ ನಡೆದಿದೆ. ಬಳಿಕ, ತಾಯಿ ಸುಶೀಲಮ್ಮ ಮಗನ ವಿರುದ್ಧ ನೆಲಮಂಗಲ ಟೌನ್​ ಠಾಣೆಗೆ ದೂರು ನೀಡಿದ್ದರು.

ನಂತರ, ಪೊಲೀಸರು ವಿಚಾರಣೆಗೆಂದು ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಪೊಲೀಸ್​ ಠಾಣೆಯಲ್ಲೇ ತಾಯಿ ಮತ್ತು ಮಗ ಜಗಳವಾಡಲು ಆರಂಭಿಸಿದ್ದಾರೆ. ಈ ವೇಳೆ ಮಹಿಳಾ ಪಿಎಸ್​ಐ ಜಯಂತಿ, ಮಧುಸೂದನ್​ಗೆ ಗದರಿಸಿ ಒಂದೇಟು ಹೊಡೆದಿದ್ದಾರೆ.

ಈ ಸಂದರ್ಭದಲ್ಲಿ ಸುಶೀಲಮ್ಮ, “ದೂರು ಕೊಟ್ಟು ಪೊಲೀಸರಿಂದ ಹೊಡೆಸಿದರೇ, ಪೊಲೀಸರಿಗೆ ತಿರುಗಿ ಹೊಡೆಯುವೆ ಅಂತ ಹೇಳಿದ್ದಲ್ಲ, ಈಗ ಹೊಡಿ ನೋಡೋಣ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು. ಹೊಡಿ ಈಗ ಪೊಲೀಸರಿಗೆ ನೋಡೋಣ” ಎಂದು ಮಗ ಮಧುಸೂದನ್​ನನ್ನು ಪ್ರಚೋದಿಸಿದ್ದಾಳೆ. ಹೀಗಾಗಿ ಮಧುಸೂದನ್​ ಮಹಿಳಾ ಪಿಎಸ್​ಐ ಜಯಂತಿ ಮೇಲೆ ಹಲ್ಲೆ ಮಾಡಿದ್ದಾನೆ. ಹೀಗಾಗಿ ಪಿಎಸ್​​ಐ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Actor Darshan: ಜೀವ ಇರೋವರೆಗೂ ನಟ ದರ್ಶನ್ ನನ್ನ ಮಗನೇ ಎಂದ ಸುಮಲತಾ ಅಂಬರೀಶ್‌

ಗುರುವಾರ ರಾತ್ರಿ 10 ಗಂಟೆ ಸುಮಾರು ನೆಲಮಂಗಲ ಟೌನ್ ಠಾಣೆಯಲ್ಲಿ ಘಟನೆ ನಡೆದಿದೆ. ಮಧುಸೂದನ್​ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಧುಸೂದನ್​ನನ್ನು ಪೊಲೀಸರು ಬಂಧಿಸಿದ್ದು, ಕಲಂ-132 ,121(1 ),121(2),352, 54, ಜೊತೆಗೆ 3(5) ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.