ಬೆಂಗಳೂರು: ತಿರುಪತಿ (Tirupati temple) ನಗರವನ್ನು ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme court) ಶುಕ್ರವಾರ (ನವೆಂಬರ್ 8) ವಜಾಗೊಳಿಸಿದೆ.
ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಾಲಯದಲ್ಲಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಹಾಗೂ ತಿರುಪತಿ ನಗರವನ್ನು ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಸಾಮಾಜಿಕ ಕಾರ್ಯಕರ್ತ ಮತ್ತು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಘಟನೆಯ ಅಧ್ಯಕ್ಷ ಕೆ.ಎ.ಪಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದರು. ಈ ಬಗ್ಗೆ ಖುದ್ದು ಪಾಲ್ ಅವರೇ ವಾದ ಮಂಡಿಸಿದ್ದು, ವಾದ-ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಬಿ.ಆರ್. ವಾಯಿ ಮತ್ತು ಕೆ.ವಿ ವಿಶ್ವನಾಥನ್ ಅವರಿದ್ದ ಪೀಠ ಸಿಬಿಐ ತನಿಖೆ ಮತ್ತು ತಿರುಪತಿ ನಗರವನ್ನು ಪ್ರತ್ಯೇಕ ರಾಜ್ಯ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
“ನೀವು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದರೆ ನಾವು ಎಲ್ಲಾ ದೇವಾಲಯಗಳು, ಗುರುದ್ವಾರಗಳು ಹಾಗೂ ಇತ್ಯಾದಿ ಪುಣ್ಯ ಸ್ಥಳಗಳಿಗೆ ಪ್ರತ್ಯೇಕ ರಾಜ್ಯಗಳನ್ನು ರಚಿಸಬೇಕಾಗುತ್ತದೆ. ಹಾಗಾಗಿ ನಿರ್ಧಿಷ್ಟ ಧರ್ಮಕ್ಕಾಗಿ ನಾವು ಪ್ರತ್ಯೇಕ ರಾಜ್ಯವನ್ನು ರಚಿಸುವಂತೆ ನಿರ್ದೇಶಿಸಲು ಸಾಧ್ಯವಿಲ್ಲ ಹೀಗಾಗಿ ಅರ್ಜಿಯನ್ನು ವಜಾಗೊಳಿಸುತ್ತೇವೇ” ಎಂದು ನ್ಯಾಯಪೀಠ ಹೇಳಿದೆ.
ತಿರುಪತಿ ಲಡ್ಡು ಪ್ರಸಾದವನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಲ್ಯಾಬ್ ವರದಿ ಬಂದ ನಂತರ ಹಾಗೂ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮಾಡಿರುವ ಆರೋಪಗಳು ಭಕ್ತರಲ್ಲಿ ತೋವ್ರ ಕಳವಳ ಮೂಡಿಸಿತ್ತು. ಹೀಗಾಗಿ ಲಡ್ಡು ಪ್ರಸಾದ ತಯಾರಿಕೆಯ ಸುತ್ತಲಿನ ಭ್ರಷ್ಟಾಚಾರ ಹಾಗೂ ಅದರ ಸುತ್ತಲಿನ ಆರೋಪದ ಬಗ್ಗೆ ಸಿಬಿಐ ಸಮಗ್ರ ತನಿಖೆ ನಡೆಸಬೇಕೆಂದು ಪಾಲ್ ಮನವಿ ಮಾಡಿದ್ದರು. ಅಲ್ಲದೆ ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆಗಸ್ಟ್ 4 ರಂದು ಐವರು ಸದಸ್ಯರ ನೇತೃತ್ವದ ಎಸ್.ಐ.ಟಿ ಯನ್ನು ಕೂಡಾ ರಚನೆ ಮಾಡಿತ್ತು. ಇದೀಗ ಸಿಬಿಐ ತನಿಖೆ ನಡೆಸಬೇಕೆಂದು ಹಾಗೂ ತಿರುಪತಿ ನಗರವನ್ನು ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.