Friday, 22nd November 2024

Edneer Swamiji: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ, ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Edneer Shri Sachidananda Bharathi Swamiji

ಮಂಗಳೂರು: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಯವರ (Edneer Sri Sachidananda Bharathi Swamiji, Edneer Swamiji) ಕಾರಿನ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇರಳ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (Kerala CM Pinarayi Vijayan) ಸೂಚಿಸಿದ್ದಾರೆ.

ಎಡನೀರು ಶ್ರೀಗಳು ಪ್ರಯಾಣಿಸುತ್ತಿದ್ದ ವಾಹನ ತಡೆದು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಬರೆದ ಪತ್ರಕ್ಕೆ ಪಿಣರಾಯಿ ತುರ್ತು ಸ್ಪಂದಿಸಿದ್ದು, ಈ ಸೂಚನೆ ನೀಡಿದ್ದಾರೆ.

ಎಡನೀರು ಶ್ರೀಗಳು ಕಾಸರಗೋಡಿನ ಬೊವಿಕ್ಕಾನದಲ್ಲಿ ಸಂಚರಿಸುತ್ತಿರುವಾಗ ಅವರ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದರು. ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಕ್ಯಾ| ಚೌಟ ಅವರು ಶ್ರೀಗಳ ಮೇಲಿನ ದಾಳಿ ಯತ್ನವನ್ನು ತೀವ್ರವಾಗಿ ಖಂಡಿಸಿದ್ದರು. ಹಿಂದೂ ಸಮಾಜದ ಮಾರ್ಗದರ್ಶಕರಾದ ಎಡನೀರು ಶ್ರೀಗಳ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೇರಳ ಸಿಎಂಗೆ ನ. 6ರಂದು ಪತ್ರ ರವಾನಿಸಿದ್ದರು.

ಸಂಸದರ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಪಿಣರಾಯಿ ಅವರು ಘಟನೆಯ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ಪೊಲೀಸ್‌ ಇಲಾಖೆ ಕಾರ್ಯೋನ್ಮುಖರಾಗುವಂತೆ ಡಿಜಿಪಿಯವರಿಗೆ ಸೂಚನೆ ನೀಡಿರುವುದಾಗಿ ತಮ್ಮ ಪ್ರತ್ಯುತ್ತರ ನೀಡಿದ್ದಾರೆ. ಈ ಘಟನೆಗೆ ಕೇರಳ ಸಿಎಂ ಪಿಣರಾಯಿ ಅವರ ತುರ್ತು ಸ್ಪಂದನೆಯನ್ನು ಕ್ಯಾ| ಚೌಟ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: Edneer Swamiji: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದಾಳಿ, ವ್ಯಾಪಕ ಖಂಡನೆ