Saturday, 23rd November 2024

IND vs SA 1st T20I: ಗೆಲುವಿನಲ್ಲೂ ದಾಖಲೆ ಬರೆದ ಭಾರತ

ಡರ್ಬನ್‌: ಶುಕ್ರವಾರ ರಾತ್ರಿ ನಡೆದ ದಕ್ಷಿಣ ಆಫ್ರಿಕಾ(IND vs SA 1st T20I) ಎದುರಿನ ಡರ್ಬನ್‌ ಟಿ20 ಪಂದ್ಯದಲ್ಲಿ ಭಾರತ 61 ರನ್‌ಗಳ ಅಮೋಘ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ಭಾರತ 2024ರ ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ಟಿ20 ಪಂದ್ಯಗಳನ್ನು ಗೆದ್ದ ತಂಡ ಎಂಬ ದಾಖಲೆಯನ್ನೂ ನಿರ್ಮಿಸಿದೆ. ಇದು 2024ರಲ್ಲಿ ಭಾರತಕ್ಕೆ ಒಲಿದ 22ನೇ ಗೆಲುವು. ವಿಶ್ವ ದಾಖಲೆ ಉಗಾಂಡ ಹೆಸರಿನಲ್ಲಿದೆ. 2023ರಲ್ಲಿ ಉಗಾಂಡ  ಶೇ. 87.9 ಗೆಲುವಿನ ಪ್ರತಿಶತದೊಂದಿಗೆ 29 ಪಂದ್ಯವನ್ನು ಗೆದ್ದು ಬೀಗಿತ್ತು. ಭಾರತ 2022ರಲ್ಲಿ ಶೇ.70.0 ಗೆಲುವಿನ ಪ್ರತಿಶತದೊಂದಿಗೆ 28 ಗೆಲುವು ಸಾಧಿಸಿತ್ತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟ್‌ಗೆ 202 ರನ್‌ ಬಾರಿಸಿದರೆ, ಜವಾಬಿತ್ತ ದಕ್ಷಿಣ ಆಫ್ರಿಕಾ 17.5 ಓವರ್‌ಗಳಲ್ಲಿ 141 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಸಂಜು ಸ್ಯಾಮ್ಸನ್‌ ಶತಕ ಬಾರಿಸಿ ಮಿಂಚಿದರು. ಭರ್ತಿ 50 ಎಸೆತಗಳಿಂದ 107 ರನ್‌ ಕೊಡುಗೆ ಸಲ್ಲಿಸಿದರು. ಅವರ ಈ ಅಮೋಘ ಬ್ಯಾಟಿಂಗ್‌ ವೇಳೆ ಬರೋಬ್ಬರಿ 10 ಸಿಕ್ಸರ್‌ ಹಾಗೂ 7 ಬೌಂಡರಿ ಸಿಡಿಯಿತು. ಇದು ಅವರ ಸತತ 2ನೇ ಟಿ20 ಸೆಂಚುರಿ. ಇದಕ್ಕೂ ಮುನ್ನ ಅ. 12ರಂದು ಬಾಂಗ್ಲಾದೇಶ ವಿರುದ್ಧ ಹೈದರಾಬಾದ್‌ನಲ್ಲಿ 111 ರನ್‌ ಬಾರಿಸಿದ್ದರು. ಸಂಜು ಸತತ ಟಿ20 ಇನ್ನಿಂಗ್ಸ್‌ಗಳಲ್ಲಿ ಸೆಂಚುರಿ ಬಾರಿಸಿದ ಭಾರತದ ಮೊದಲ ಹಾಗೂ ವಿಶ್ವದ 4ನೇ ಕ್ರಿಕೆಟಿಗ ಎನಿಸಿಕೊಂಡರು. ಗುಸ್ತಾವ್‌ ಮೆಕ್‌ಕಿಯಾನ್‌, ರಿಲೀ ರೋಸ್ಯೂ ಮತ್ತು ಫಿಲ್‌ ಸಾಲ್ಟ್ ಉಳಿದ ಮೂವರು.

ಇದನ್ನೂ ಓದಿ IND vs SA: ಸಂಜು ಸ್ಫೋಟಕ ಶತಕ, ಡರ್ಬನ್‌ನಲ್ಲಿ ಹರಿಣ ಪಡೆಯನ್ನು ಬೇಟೆಯಾಡಿದ ಭಾರತ!

ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ ದೀರ್ಘಾವಧಿ ಕ್ರೀಸ್‌ನಲ್ಲಿ ನಿಂತು ಬ್ಯಾಟ್‌ ಮಾಡಲಿಲ್ಲ. ರಿಯಾನ್‌ ರಿಕಲ್ಟನ್‌ (21) ಹಾಗೂ ಹೆನ್ರಿಚ್‌ ಕ್ಲಾಸೆನ್‌ (25 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ 20 ರನ್‌ಗಳನ್ನು ದಾಖಲಿಸುವಲ್ಲಿ ಎಡವಿದರು. ಭಾರತ ತಂಡದ ಸ್ಪಿನ್‌ ಮೋಡಿ ಮಾಡಿದ ವರುಣ್‌ ಚಕ್ರವರ್ತಿ (25-3) ಮತ್ತು ರವಿ ಬಿಷ್ಣೋಯ್‌ (28-3) ತಮ್ಮ-ತಮ್ಮ ಪಾಲಿನ 4 ಓವರ್‌ಗಳ ಸ್ಪೆಲ್‌ ಮುಗಿಸಿ ತಲಾ ಮೂರು ವಿಕೆಟ್‌ಗಳನ್ನು ಪಡೆದರು.

ಭಾರತ: 20 ಓವರ್‌ಗಳಿಗೆ 202-8 (ಸಂಜು ಸ್ಯಾಮ್ಸನ್‌ 107 ರನ್‌, ತಿಲಕ್‌ ವರ್ಮಾ 33, ಸೂರ್ಯಕುಮಾರ್‌ ಯಾದವ್‌ 21 ರನ್‌; ಜೆರಾಲ್ಡ್‌ ಕೊಯೆಡ್ಜೀ 37ಕ್ಕೆ 3)

ದಕ್ಷಿಣ ಆಫ್ರಿಕಾ: 17.5 ಓವರ್‌ಗಳಿಗೆ 141-10 (ಹೆನ್ರಿಚ್‌ ಕ್ಲಾಸೆಲ್‌ 25, ರಿಯಾನ್‌ ರಿಕಲ್ಟನ್‌ 21, ಜೆರಾಲ್ಡ್‌ ಕೊಯೆಡ್ಜಿ 23; ವರುಣ್‌ ಚಕ್ರವರ್ತಿ 25ಕ್ಕೆ 3, ರವಿಬಿಷ್ಣೋಯ್‌ 28ಕ್ಕೆ 3, ಆವೇಶ್‌ ಖಾನ್‌ 28 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಸಂಜು ಸ್ಯಾಮ್ಸನ್‌