Thursday, 14th November 2024

PV Sindhu: ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲೂ ಸ್ಪರ್ಧೆ; ಸಿಂಧು ವಿಶ್ವಾಸ

ನವದೆಹಲಿ: ಅವಳಿ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು(PV Sindhu) ಅವರು 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ(2028 Los Angeles Olympics) ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. 2016 ರಿಯೋ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದ ಸಿಂಧು ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪ್ರಿ ಕ್ವಾರ್ಟರ್‌ನಲ್ಲೇ ಹೊರಬಿದ್ದು ನಿರಾಸೆ ಮೂಡಿಸಿದ್ದರು.

ಪ್ಯಾರಿಸ್‌ ಒಲಿಂಪಿಕ್ಸ್‌ ಸೋಲಿನ ಬಳಿಕ ಸಿಂಧು ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಿಂಧು ಇದೀಗ 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಕೂಡ ಆಡುವ ಸುಳಿವು ನೀಡಿದ್ದಾರೆ. ʼ ಮುಂದಿನ ಒಲಿಂಪಿಕ್ಸ್‌ ವೇಳೆಗೆ ನನಗೆ 33 ವರ್ಷ ಆಗಲಿದೆ. ಆ ವೇಳೆಗೆ ಗಾಯದ ಸಮಸ್ಯೆ ಇಲ್ಲದಿದ್ದರೆ ಮೂರನೇ ಪದಕ ಗೆಲ್ಲಲು ಕಣಕ್ಕಿಳಿಯಲಿದ್ದೇನೆʼ ಎಂದು ಹೇಳಿದರು.

ಇದನ್ನೂ ಓದಿ IND vs SA 1st T20I: ಗೆಲುವಿನಲ್ಲೂ ದಾಖಲೆ ಬರೆದ ಭಾರತ

ಮುಂಬರುವ ಜಪಾನ್ ಮತ್ತು ಚೀನಾದಲ್ಲಿ ನಡೆಯಲಿರುವ ಪಂದ್ಯಾವಳಿಗಳನ್ನು ಎದುರು ನೋಡುತ್ತಿರುವ ಪಿವಿ ಸಿಂಧು ತಮ್ಮ ಸಿದ್ಧತೆಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ʼನನ್ನ ಭವಿಷ್ಯದ ಕುರಿತು ನಾನು ಸ್ಪಷ್ಟವಾಗಿದ್ದೇನೆ.ಮುಂದಿನ ಪ್ರಯಾಣವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲು ನಾನು ಯೋಜನೆ ರೂಪಿಸಿದ್ದೇನೆ. ಶೀಘ್ರದಲ್ಲೇ ಹಿಂದಿನ ಫಾರ್ಮ್‌ಗೆ ಮರಳುವ ವಿಶ್ವಾಸವಿದೆʼ ಎಂದು ಹೇಳಿದರು. ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿಲ್ಲ. 2 ವರ್ಷಗಳಿಂದೀಚೆಗೆ ಆಡಿದ ಎಲ್ಲ ಟೂರ್ನಿಯಲ್ಲಿ ಹೀನಾಯ ಸೋಲು ಕಂಡಿದ್ದರು. 2ನೇ ಸುತ್ತು ಪ್ರವೇಶಿಸಲು ಕೂಡ ಹೆಣಗಾಡುತ್ತಿದ್ದರು.

ಪಿ.ವಿ. ಸಿಂಧು(PV Sindhu) ಅವರು ತಮ್ಮ ತವರಾದ ಆಂಧ್ರಪ್ರದೇಶದ ವಿಶಾಖಪಟ್ಟಣಂ(Vishakhapatnam) ಜಿಲ್ಲೆಯ ಅರಿಲೋವದಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿಯೊಂದನ್ನು ನಿರ್ಮಿಸಲಿದ್ದಾರೆ. ಈಗಾಗಲೇ ಅವರು ಕಟ್ಟಡದ ಭೂಮಿಪೂಜೆ ಮಾಡಿದ್ದಾರೆ. ಅಕಾಡೆಮಿಯಲ್ಲಿ ಒಂಭತ್ತು ಸಿಂಥೆಟಿಕ್ ಬ್ಯಾಡ್ಮಿಂಟನ್ ಕೋರ್ಟ್‌ಗಳು, ವ್ಯಾಯಾಮ ಶಾಲೆ ಮತ್ತು 70 ಮಂದಿ ತಂಗುವ ವ್ಯವಸ್ಥೆ ಇದೆ.

ಭೂಮಿ ಪೂಜೆ ನೆರವೇರಿಸಿದ ಫೋಟೊವನ್ನು 2 ದಿನಗಳ ಹಿಂದೆ ಸಿಂಧು ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ನನ್ನ ಅಕಾಡೆಮಿಗೆ ವಿಶಾಖಪಟ್ಟಣಕ್ಕಿಂತ ಉತ್ತಮವಾಗಿರುವ ಸ್ಥಳ ಇನ್ನೊಂದಿಲ್ಲ. ಎಲ್ಲಾ ನೈಜ ಪ್ರತಿಭೆಗಳ ಅಗತ್ಯಗಳನ್ನು ಪೂರೈಸುವ ಅಕಾಡೆಮಿಯೊಂದನ್ನು ನಡೆಸುವುದು ನನ್ನ ಕನಸಾಗಿತ್ತು. ಇದನ್ನೀಗ ಸಾಕಾರಗೊಳಿಸಲಿದ್ದೇನೆʼ ಎಂದು ಬರೆದುಕೊಂಡಿದ್ದರು. ಇಲ್ಲಿ ಬ್ಯಾಡ್ಮಿಂಟನ್ ಜತೆಗೆ ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ತರಬೇತಿ ನೀಡುವ ಯೋಜನೆಯೂ ಇದೆ ಎಂದು ಸಿಂಧು ಅವರ ತಂದೆ ಪಿ.ವಿ. ರಮಣ ಹೇಳಿದ್ದರು.