Thursday, 14th November 2024

Terror Attack: ಇಬ್ಬರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌ಗಳ ಮೃತದೇಹ ಪತ್ತೆ; ಉಗ್ರರ ಪತ್ತೆಗೆ ತೀವ್ರಗೊಂಡ ಶೋಧ ಕಾರ್ಯ

Terror Attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕಿಶ್ತ್ವಾರ್ (Kishtwar) ಜಿಲ್ಲೆಯಲ್ಲಿ ಗುರುವಾರ (ನ. 7) ಭಯೋತ್ಪಾದಕರಿಂದ ಹತರಾಗಿದ್ದ ಇಬ್ಬರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌(VDGs)ಗಳ ಮೃತದೇಹ ಪತ್ತೆಯಾಗಿದೆ. ಓಹ್ಲಿ-ಕುಂಟ್ವಾರಾ ಗ್ರಾಮದ ನಿವಾಸಿಗಳಾದ 45 ವರ್ಷದ ನಜೀರ್ ಅಹ್ಮದ್ ಮತ್ತು 33 ವರ್ಷದ ಕುಲದೀಪ್ ಕುಮಾರ್ ಅವರನ್ನು ಗುರುವಾರ ಮುಂಜ್ಲಾ ಧಾರ್ ಅರಣ್ಯದಲ್ಲಿ ಉಗ್ರರು ಹತ್ಯೆ ಮಾಡಿದ್ದರು.

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆಯಾದ ಕಾಶ್ಮೀರ್ ಟೈಗರ್ಸ್ ಈ ಹತ್ಯೆಯ ಹೊಣೆ ಹೊತ್ತುಕೊಂಡಿದೆ. “ಇಬ್ಬರು ವಿಡಿಜಿಗಳ ಮೃತದೇಹವನ್ನು ಪೊಲೀಸರು ಮತ್ತು ಸೇನೆಯ ತಂಡವು ವಶಪಡಿಸಿಕೊಂಡಿದೆ” ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆನಂದ್ ಜೈನ್ ತಿಳಿಸಿದ್ದಾರೆ.

“ಗುಡ್ಡಗಾಡು ಪ್ರದೇಶದಲ್ಲಿ ಚಾರಣ ಮಾಡಿ ಓಹ್ಲಿ ಕುಂಟ್ವಾರಾದ ಮೇಲ್ಭಾಗವನ್ನು ತಲುಪಲು ಭದ್ರತಾ ಪಡೆಗಳಿಗೆ ಸುಮಾರು 6 ಗಂಟೆ ಬೇಕಾಯಿತು. ಮೃತದೇಹಗಳನ್ನು ಮರಳಿ ತರಲಾಗುತ್ತಿದ್ದು, ಆಯಾ ಮನೆಗಳಿಗೆ ಕೊಂಡೊಯ್ಯಲಾಗುವುದು” ಎಂದು ಅಧಿಕಾರಿ ತಿಳಿಸಿದ್ದಾರೆ.

ಭಯೋತ್ಪಾದಕ ಚಟುವಟಿಕೆ ತೀವ್ರವಾಗಿದ್ದ ಹಿನ್ನೆಲೆಯಲ್ಲಿ1990ರ ದಶಕದಲ್ಲಿ ಮೊದಲ ಬಾರಿಗೆ ವಿಡಿಜಿಗಳನ್ನು ನೇಮಿಸಲಾಯಿತು. ಬಳಿಕ 2000ದಲ್ಲಿ ವಿಸರ್ಜಿಸಲಾಯಿತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ 2022ರ ಆಗಸ್ಟ್‌ನಲ್ಲಿ ವಿಡಿಜಿಗಳನ್ನು ಮತ್ತೆ ನೇಮಿಸಲಾಯಿತು. ಗ್ರಾಮ ಸ್ವಯಂಸೇವಕರು ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಡಿಜಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವ ಜವಾಬ್ದಾರಿಯನ್ನು ಸಿಆರ್‌ಪಿಎಫ್‌ಗೆ ನೀಡಲಾಗಿದೆ. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರದೇಶದಲ್ಲಿ 4,125 ವಿಡಿಜಿಗಳಿದ್ದಾರೆ.

ಖಂಡನೆ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಅವರ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಈ ಹತ್ಯೆಗಳನ್ನು “ಮಾನವೀಯತೆಯ ಮೇಲಿನ ದಾಳಿ” ಎಂದು ಕರೆದಿದ್ದಾರೆ. “ಇದು ಮುಗ್ಧ ಜೀವಗಳ ಮೇಲಿನ ದಾಳಿ ಮಾತ್ರವಲ್ಲ, ಮಾನವೀಯತೆಯ ಮೇಲಿನ ದಾಳಿಯೂ ಹೌದು. ಭಯೋತ್ಪಾದಕರ ಹೆಡೆಮುರಿ ಕಟ್ಟುತ್ತೇವೆ ಮತ್ತು ಭದ್ರತಾ ಪಡೆಗಳ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ” ಎಂದು ಅವರು ಹೇಳಿದ್ದಾರೆ.

ಪ್ರತಿಭಟನೆ

ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಅವರ ಹತ್ಯೆ ಖಂಡಿಸಿ ಶುಕ್ರವಾರ ಜಮ್ಮುವಿನಾದ್ಯಂತ ಪ್ರತಿಭಟನೆ ನಡೆಸಲಾಯಿತು. ಕಿಶ್ತ್ವಾರ್‌ನಲ್ಲಿ ಅಂಗಡಿ ಮಳಿಗೆಗಳನ್ನು ಸಂಪೂರ್ಣ ಮುಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಉಗ್ರರ ಪತ್ತೆಗಾಗಿ ಕಿಶ್ತ್ವಾರ್‌ನಲ್ಲಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯ ನಡೆಸುತ್ತಿವೆ. ಡ್ರೋನ್‌, ಶ್ವಾನ ದಳ ಮತ್ತು ಹೆಲಿಕಾಫ್ಟರ್‌ಗಳನ್ನು ಬಳಸಿ ಉಗ್ರರ ಜಾಡು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಜಮ್ಮುವಿನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 15 ಭದ್ರತಾ ಪಡೆ ಸಿಬ್ಬಂದಿ, 10 ನಾಗರಿಕರು ಮತ್ತು ಮೂವರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌ಗಳು ಮೃತಪಟ್ಟಿದ್ದಾರೆ. ಜತೆಗೆ 13 ಉಗ್ರರನ್ನು ಹೊಡೆದುರುಳಿಸಲಾಗಿದೆ. ಮಾತ್ರವಲ್ಲ ಕಣಿವೆಯಲ್ಲಿ ಈ ಹತರಾದ ಉಗ್ರರ ಸಂಖ್ಯೆ 24 ಎಂದು ಅಂಕಿ-ಅಂಶಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Terror Attack: ಜಮ್ಮು & ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ; ಇಬ್ಬರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌ಗಳ ಹತ್ಯೆ