ಚೆನೈ: ರಾಜ್ಯದಲ್ಲಿ ಹೆಚ್ಚುತ್ತಿರುವ ಹಾವು ಕಡಿತ (Snake bite) ಪ್ರಕರಣವನ್ನು ತಮಿಳುನಾಡು (Tamil Nadu) ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ 1939ರ ಸಾರ್ವಜನಿಕ ಆರೋಗ್ಯ ಕಾಯ್ದೆಯಡಿ ಹಾವು ಕಡಿತವನ್ನು ಕಾಯಿಲೆ (Disease) ಎಂದು ಘೋಷಣೆ ಮಾಡಿದೆ. ನ. 4ರಂದು ಸರ್ಕಾರವು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ್ದು, ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾವು ಕಡಿತದ ಪ್ರಕರಣಗಳನ್ನು ವರದಿ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಹಾವು ಕಡಿತವನ್ನು ಕಾಯಿಲೆಯಾಗಿ ಪರಿಗಣಿಸಿರುವ ಸರ್ಕಾರ, ಪ್ರಕರಣದ ದತ್ತಾಂಶ ಸಂಗ್ರಹಣೆ ಹಾಗೂ ಪ್ರತಿಯೊಂದು ಆಸ್ಪತ್ರೆಯಲ್ಲೂ ಹಾವು ಕಡಿತಕ್ಕೆ ಚಿಕಿತ್ಸೆ ಒದಗಿಸಬೇಕೆಂಬ ಗುರಿಯನ್ನು ಹೊಂದಿದೆ. ಈ ಮೂಲಕ ಸಾವನ್ನು ತಡೆಯಬಹುದು ಎಂಬುದು ಸರ್ಕಾರದ ಯೋಚನೆ. ಈ ವರ್ಷದ ಜೂನ್ವರೆಗೆ ತಮಿಳುನಾಡಿನಲ್ಲಿ 7,300 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, 13 ಜನರು ಮೃತಪಟ್ಟಿದ್ದಾರೆ. ಕಳೆದ ವರ್ಷ 19,795 ಹಾವು ಪ್ರಕರಣಗಳು ವರದಿಯಾಗಿ 43 ಜನ ಮೃತಪಟ್ಟಿದ್ದರು. ಇನ್ನು 2022ರಲ್ಲಿ 15,120 ಹಾವು ಕಡಿತ ಪ್ರಕರಣ ದಾಖಲಾದರೆ, 17 ಜನರು ಅಸುನೀಗಿದ್ದರು.
The Government of Tamil Nadu has declared snakebite a “Notifiable Disease” under the Tamil Nadu Public Health Act of 1939. Effective from November 6, 2024, all hospitals including private must report snakebite cases to improve data collection and resource allocation. This move… pic.twitter.com/WdT7085YHQ
— Supriya Sahu IAS (@supriyasahuias) November 8, 2024
ಹಾವು ಕಡಿತದ ಎಲ್ಲ ಪ್ರಕರಣಗಳು ವರದಿಯಾಗುವುದಿಲ್ಲ. ಇದರಿಂದ ಡೇಟಾ ಸಂಗ್ರಹಣೆಯಲ್ಲಿ ಏರುಪೇರಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಿಯಾದ ದತ್ತಾಂಶ ಸಿಕ್ಕರೆ ಚಿಕಿತ್ಸೆಗೆ ಅಗತ್ಯವಾದ ಆ್ಯಂಟಿ-ವೆನಮ್ ಲಭ್ಯವಾಗುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಉತ್ತಮ ಆರೋಗ್ಯ ಸೌಲಭ್ಯವಿದ್ದರೂ ಜನರು ಹಾವು ಕಡಿತಕ್ಕೊಳಗಾಗಿ ಮೃತ ಪಡುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಬುಡಕಟ್ಟು ಜನ ವಾಸಿಸುವ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚಾಗಿಯೇ ಇದೆ. ಸಾಮಾನ್ಯವಾಗಿ ಉಷ್ಣವಲಯ ಮತ್ತು ಉಪೋಷ್ಣವಲಯದಲ್ಲಿ ಹಾವುಗಳು ಹೆಚ್ಚಾಗಿ ಕಂಡು ಬರುತ್ತದೆ. ಚಳಿಗಾಲ ಕಳೆದು ಚೈತ್ರ ಮಾಸ ಪ್ರಾರಂಭವಾಗುವ ಸಮಯದಲ್ಲಿ ಹಾವುಗಳು ಹೆಚ್ಚಾಗಿ ಸಂಚಾರ ಮಾಡುತ್ತವೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಹೆಚ್ಚು ಹಾವು ಕಡಿತ ಪ್ರಕರಣಗಳು ದಾಖಲಾಗುತ್ತವೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡ ಹಾವು ಕಡಿತದಿಂದ ಉಂಟಾಗುವ ಸಾವಿನ ಪ್ರಕರಣವನ್ನು ತಡೆಯಲು ಜಾಗತಿಕ ಕಾರ್ಯತಂತ್ರವನ್ನು ಪ್ರಾರಂಭಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾರಂಭಿಸಿರುವ ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದು, 2030ರ ವೇಳೆಗೆ ಹಾವು ಕಡಿತ ಪ್ರಕರಣವನ್ನು ಅರ್ಧಕ್ಕೆ ಇಳಿಸುವ ಯೋಜನೆಯನ್ನು ಹೊಂದಿದೆ.
ಹಾವು ಕಡಿತ ದೇಶದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲಾಗಿದ್ದು, ಪ್ರತಿ ವರ್ಷ ಸುಮಾರು 58 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಹುತೇಕ ಹಾವುಗಳು ಮಾರಣಾಂತಿಕವಲ್ಲ ಮತ್ತು ಸರಿಯಾದ ಚಿಕಿತ್ಸೆ ನೀಡಿದರೆ ಸಂತ್ರಸ್ತರನ್ನು ಬದುಕಿಸಬಹುದು. ಆದರೆ ಅರಿವಿನ ಕೊರತೆ ಮತ್ತು ಸೂಕ್ತ ಔಷಧ ಲಭ್ಯವಿಲ್ಲದ ಕಾರಣ ಹೆಚ್ಚಿನ ಸಾವು ಸಂಭವಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.