Monday, 25th November 2024

BCCI Meeting: ಗಂಭೀರ್‌, ರೋಹಿತ್‌ಗೆ ಸತತ 6 ಗಂಟೆ ಬಿಸಿಸಿಐ ಡ್ರಿಲ್‌

ನವದೆಹಲಿ: ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 0-3 ಅಂತರದಲ್ಲಿ ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾದ ಬಗ್ಗೆ ಬಿಸಿಸಿಐ(BCCI Meeting) 6 ಗಂಟೆಗಳ ಕಾಲ ಕೋಚ್‌ ಗೌತಮ್‌ ಗಂಭೀರ್‌ ಮತ್ತು ನಾಯಕ ರೋಹಿತ್‌ ಶರ್ಮಗೆ ಡ್ರಿಲ್‌ ಮಾಡಿದೆ. ಈ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಪಾಲ್ಗೊಂಡಿದ್ದರು. ಸಭೆಯಲ್ಲಿ ಭಾರತದ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಲಾಯಿತು.

ಅಂತಿಮ ಪಂದ್ಯಕ್ಕೆ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಿದ್ದು, ಪಿಚ್‌ ನಿರ್ಮಾಣ ಹಾಗೂ ಗಂಭೀರ್ ಕೋಚಿಂಗ್‌ ಶೈಲಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ. ತಂಡದ ಬ್ಯಾಟರ್‌ಗಳು ಸ್ಪಿನ್ನರ್‌ಗಳ ವಿರುದ್ಧ ಅಸ್ಥಿರ ಆಟವಾಡುತ್ತಿರುವ ಹೊರತಾಗಿಯೂ, ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್‌ ಆಯ್ಕೆ ಮಾಡಿದ್ದು ಯಾಕೆ ಎಂದು ನಾಯಕ ಹಾಗೂ ಕೋಚ್‌ಗೆ ಬಿಸಿಸಿಐ ಪ್ರಶ್ನಿಸಿದೆ ಎಂದು ತಿಳಿದುಬಂದಿದೆ.

PV Sindhu: ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲೂ ಸ್ಪರ್ಧೆ; ಸಿಂಧು ವಿಶ್ವಾಸ

ಐಪಿಎಲ್‌ನಲ್ಲಿ ಕೆಕೆಆರ್​ ಮೆಂಟರ್​ ಆಗಿ ಟ್ರೋಫಿ ಗೆದ್ದುಕೊಟ್ಟ ಬಳಿಕ ಗಂಭೀರ್‌ ಮೇಲೆ ಅಪಾರ ನಿರೀಕ್ಷೆ ಇರಿಸಲಾಗಿತ್ತು. ಆದರೆ ಭಾರತ ಇವರ ಮಾರ್ಗದರ್ಶನದಲ್ಲಿ ಹಿಂದೆಂದು ಕಾಣದ ಅವಮಾನಕರ ಸೋಲು ಕಾಣುತ್ತಿದೆ. ಆರಂಭದಲ್ಲಿ ಶ್ರೀಲಂಕಾ ಎದುರು 27 ವರ್ಷಗಳ ಬಳಿಕ ಏಕದಿನ ಸರಣಿ ಸೋಲು, ಆ ಬಳಿಕ ಕಿವೀಸ್‌ ವಿರುದ್ಧದ ತವರಿನಲ್ಲಿ ಟೆಸ್ಟ್‌ ಸರಣಿ ಸೋಲು ಎದುರಿಸುವಂತಾಯಿತು.

ಬಿಸಿಸಿಐ ಸಂವಿಧಾನದ ಪ್ರಕಾರ ಮುಖ್ಯ ಕೋಚ್​ಗೆ ಭಾರತ ತಂಡದ ಆಯ್ಕೆಯಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ, ಆಸ್ಟ್ರೆಲಿಯಾ ಪ್ರವಾಸದ ತಂಡ ಆಯ್ಕೆಯಲ್ಲಿ ಗಂಭೀರ್​ಗೆ ಪೂರ್ಣ ಸ್ವಾತಂತ್ರ್ಯ ನೀಡಲಾಯಿತು. ಗಂಭೀರ್​ ಆಯ್ಕೆ ಆದ್ಯತೆಯ ಆಧಾರದಲ್ಲೇ ತಂಡವನ್ನು ಕೂಡ ರಚಿಸಲಾಗಿದೆ. ಕಿವೀಸ್​ ವಿರುದ್ಧದ ಸರಣಿಯಲ್ಲಿ ಪಿಚ್​ ಆಯ್ಕೆ ವಿಚಾರದಲ್ಲೂ ಗಂಭೀರ್​ ನಿರ್ಧಾರಕ್ಕೆ ಮನ್ನಣೆ ನೀಡಲಾಯಿತು. ಆದರೆ ಗಂಭೀರ್​ಗೆ ಇದುವರೆಗೆ ನೀಡಲಾಗಿರುವ ಇಷ್ಟೊಂದು ಅಧಿಕಾರಗಳಿಂದ ಯಾವುದೇ ಲಾಭ ಕಂಡುಬಂದಿಲ್ಲ. ಈ ಹಿಂದೆ ಕೋಚ್​ ಆಗಿದ್ದ ರವಿಶಾಸ್ತ್ರಿ, ದ್ರಾವಿಡ್​ಗೂ ಆಯ್ಕೆ ಸಮಿತಿ ಸಭೆಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಆಸ್ಟ್ರೆಲಿಯಾ ಪ್ರವಾಸ ಗಂಭೀರ್​ ಪಾಲಿಗೆ ನಿಜವಾದ ಸತ್ವಪರೀಕ್ಷೆ ಎನಿಸಿದೆ. ಒಂದೊಮ್ಮೆ ಭಾರತ ಆಸೀಸ್‌ನಲ್ಲಿ ಪರಾಭವಗೊಂಡರೆ ಕೋಚ್‌ ಹುದ್ದೆಯಿಂದ ಕಿಕ್‌ ಔಟ್‌ ಆದರೂ ಅಚ್ಚರಿಯಿಲ್ಲ.