Thursday, 21st November 2024

Physical Abuse: ಎರಡೂ ಕಾಲಿಲ್ಲದ ಭಿಕ್ಷುಕ ಸೇರಿ ಮೂವರಿಂದ ಸಂಶೋಧಕಿ ಮೇಲೆ ಅತ್ಯಾಚಾರ

Physical Abuse

ನವದೆಹಲಿ: ಒಡಿಶಾದ 34 ವರ್ಷದ ಸಂಶೋಧಕಿಯ ಮೇಲೆ ಕಾಲಿಲ್ಲದ ಭಿಕ್ಷುಕ, ಕಸದ ವ್ಯಾಪಾರಿ ಹಾಗೂ ಆಟೋ ಚಾಲಕ ಸೇರಿ ಮೂವರು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ(Physical Abuse) ಎಸಗಿದ್ದು, ಇದೀಗ  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಐಟಿಒ ಬಳಿ ಈ ಘಟನೆ ನಡೆದಿದ್ದು, ನಂತರ ಮಹಿಳೆಯನ್ನು ಆಟೋದಲ್ಲಿ ತಂದು ಎಸೆಯಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಮಹಿಳೆ  ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‍ ವರದಿ ಪ್ರಕಾರ, ಇಬ್ಬರು ಆರೋಪಿಗಳಾದ ಭಿಕ್ಷುಕ ಹಾಗೂ ಕಸದ ವ್ಯಾಪಾರಿ ಮಹಿಳೆ ಒಬ್ಬಂಟಿಯಾಗಿರುವುದನ್ನು ಕಂಡು ಅತ್ಯಾಚಾರಕ್ಕೆ ಸಂಚು ರೂಪಿಸಿದ್ದಾರೆ. ನಂತರ ಅವರು ಅವಳನ್ನು ಬಲವಂತದಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾರೆ. ಈ ಕೃತ್ಯವನ್ನು ಕಣ್ಣಾರೆ ಕಂಡ  ಆಟೋರಿಕ್ಷಾ ಚಾಲಕ ಅವರಿಂದ ಮಹಿಳೆಯನ್ನು ಕರೆದುಕೊಂಡು ಬಂದು  ಸರಾಯ್ ಕಾಲೆ ಖಾನ್ ಬಳಿ ಬಿಡುವ ಮೊದಲು ತನ್ನ ಆಟೋದಲ್ಲಿ ತಾನೂ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಂಧಿತರನ್ನು ಆಟೋ ಚಾಲಕ ಪ್ರಭು ಮಹತೋ (28) , ಕಸದ ವ್ಯಾಪಾರಿ ಪ್ರಮೋದ್ ಬಾಬು (32) ಮತ್ತು ಭಿಕ್ಷುಕ ಮೊಹಮ್ಮದ್ ಶಂಶುಲ್ (29) ಎಂದು ಗುರುತಿಸಲಾಗಿದೆ. ರೈಲ್ವೆ ನಿಲ್ದಾಣದ ಬಳಿ ಇರುವ 700 ಸಿಸಿಟಿವಿ ಕ್ಯಾಮೆರಾಗಳು  ಮತ್ತು ಅನೇಕ ವಾಹನ ಚಾಲಕರನ್ನು ವಿಚಾರಣೆ ನಡೆಸಿದ ನಂತರ ಆರೋಪಿಗಳನ್ನು ಪತ್ತೆಹಚ್ಚಲಾಯಿತು. ಅಪರಾಧಕ್ಕೆ ಸಂಬಂಧಿಸಿದ ಪುರಾವೆಗಳನ್ನು ಹಾಗೂ ಆಟೋರಿಕ್ಷಾವನ್ನು ಸಹ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಪರಾಧದ ಸಮಯದಲ್ಲಿ ಆರೋಪಿಗಳು ಧರಿಸಿದ್ದ ಬಟ್ಟೆಗಳಲ್ಲದೆ, ಪ್ಯಾಂಟ್ ಮತ್ತು ಸಲ್ವಾರ್ ಸೇರಿದಂತೆ ಸಂತ್ರಸ್ತೆಯ ರಕ್ತಸಿಕ್ತ ಬಟ್ಟೆಗಳು ಸೇರಿದಂತೆ ಅನೇಕ  ಪುರಾವೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಮಹತೋ, ಪ್ರಮೋದ್ ಮತ್ತು ಶಂಸುಲ್ ಅವರ ಬಟ್ಟೆಗಳು ಮತ್ತು ಅವರ ಟೋಪಿ, ಬೆಲ್ಟ್ ಮತ್ತು ಶೂಗಳು ಸೇರಿವೆ.

ಇದನ್ನೂ ಓದಿ:ಪೆರೋಲ್ ಮೇಲೆ ಹೊರಗೆ ಬಂದವನು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ; ಈ ಶಾಕಿಂಗ್‌ ವಿಡಿಯೊ ವೈರಲ್

ಸಂತ್ರಸ್ತ ಮಹಿಳೆ ಭುವನೇಶ್ವರದ ಉತ್ಕಲ್ ಯೂನಿವರ್ಸಿಟಿ ಆಫ್ ಕಲ್ಚರ್‌ನಿಂದ  ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದಳಂತೆ. ಕುಟುಂಬದೊಂದಿಗೆ ಸಂಬಂಧ ಕಡಿದುಕೊಂಡ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಪಾದಚಾರಿ ಮೇಲ್ಸೇತುವೆಗಳಲ್ಲಿ ವಾಸವಾಗಿದ್ದಳು. ಮಹಿಳೆ ತನ್ನ ಊರಾದ ಒಡಿಶಾಗೆ ಮರಳಲು ನಿರಾಕರಿಸಿದ್ದಾಳೆ ಎನ್ನಲಾಗಿದೆ.