Sunday, 24th November 2024

Aadhar Card update: 10 ವರ್ಷಗಳಿಂದ ಆಧಾರ್​ ಕಾರ್ಡ್ ಅಪ್‌ಡೇಟ್‌ ಮಾಡಿಲ್ವಾ? ಕೊನೆಯ ದಿನ, ವಿವರ ಇಲ್ಲಿದೆ

aadhar card

ಬೆಂಗಳೂರು: ಹತ್ತು ವರ್ಷಗಳಿಂದ ನೀವು ನಿಮ್ಮ ಆಧಾರ್‌ ಕಾರ್ಡ್‌ ವಿವರಗಳನ್ನು ಅಪ್‌ಡೇಟ್‌ (Aadhar Card update) ಮಾಡಿಲ್ಲ ಎಂದಾದರೆ ಇದೀಗ ಅದಕ್ಕೆ ಅವಕಾಶವನ್ನು ಸರ್ಕಾರ ನೀಡಿದೆ. ಈ ವರ್ಷದ ಡಿಸೆಂಬರ್ 14 ರವರೆಗೆ ಉಚಿತ ನವೀಕರಣ ಅವಕಾಶ ಲಭ್ಯವಿದೆ.

ಆಧಾರ್‌ ಪ್ರತಿಯೊಬ್ಬ ಭಾರತೀಯರಿಗೂ ಬಹಳ ಮುಖ್ಯವಾದ ದಾಖಲಾತಿ. ಪಡಿತರ ಚೀಟಿ, ವಾಹನ ಪರವಾನಗಿ, ಪಾನ್ ಕಾರ್ಡ್​, ಬ್ಯಾಂಕ್ ಖಾತೆ ಹೀಗೆ ಹಲವು ದಾಖಲಾತಿ ಪಡೆಯಲು ಸೇವಾ ಕೇಂದ್ರಗಳಿಗೆ ಭೇಟಿ ಕೊಟ್ಟಾಗಲೂ ಮೊದಲು ಕೇಳುವುದೇ ಆಧಾರ್​ ಕಾರ್ಡ್.‌ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯ ಚೀಟಿಯಲ್ಲಿ ಅಗತ್ಯ ತಿದ್ದುಪಡಿಯನ್ನು ಮಾಡಿಕೊಳ್ಳಲು ಸರ್ಕಾರ ಇದೀಗ ಗಡುವು ನೀಡಿದೆ.

ಯುಐಡಿಎಐ (UIDAI) ಕೆಲವು ದಿನಗಳಿಂದ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಸೂಚಿಸುತ್ತಿದೆ. ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್ ನವೀಕರಿಸದವರಿಗೆ ಈ ಗಡುವು ಅನ್ವಯಿಸುತ್ತದೆ. ನವೀಕರಿಸದವರ ಆಧಾರ್ ಕಾರ್ಡ್‌ಗಳನ್ನು ಸರ್ಕಾರ ರದ್ದುಗೊಳಿಸಬಹುದು ಎಂಬ ಎಚ್ಚರಿಕೆಯ ಗಂಟೆಯೂ ಕೇಳಿಬಂದಿದೆ.

ಮಾಡುವುದು ಹೇಗೆ?

ಆಧಾರ್ ಕಾರ್ಡ್‌ನಲ್ಲಿ ಫೋಟೋ ಮತ್ತು ವಿಳಾಸವನ್ನು ಬದಲಾಯಿಸಲು ಬಯಸುವವರು ಆನ್‌ಲೈನ್‌ನಲ್ಲಿ ಪ್ರಸ್ತುತ ಉಚಿತವಾಗಿ ನವೀಕರಿಸಬಹುದಾಗಿದೆ. ‘ಮೈ ಆಧಾರ್’ ಪೋರ್ಟಲ್ ಮೂಲಕ ಈ ಉಚಿತ ಸೇವೆಗಳು ಲಭ್ಯವಿವೆ. ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ನಿವಾಸ ಪ್ರಮಾಣಪತ್ರ, ಉದ್ಯೋಗ ಖಾತ್ರಿ ಯೋಜನೆ ಜಾಬ್ ಕಾರ್ಡ್, ಲೇಬರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಸಿಜಿಎಚ್‌ಎಸ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್‌ನಂತಹ ದಾಖಲೆಗಳನ್ನು ಬಳಸಿಕೊಂಡು ಆಧಾರ್ ಅನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು. ಅವಧಿ ಮುಗಿದ ನಂತರ ನೀವು ನವೀಕರಿಸಿದರೆ, ಇದಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹತ್ತು ವರ್ಷಗಳಷ್ಟು ಹಳೆಯದಾದ ಆಧಾರ್‌ನಲ್ಲಿ ಮಾಹಿತಿಯನ್ನು ನವೀಕರಿಸಲು ಯುಐಡಿಎಐ ಡಿಸೆಂಬರ್ 14ರವರೆಗೆ ಸಮಯ ನೀಡಿದೆ.

ಈ ಗಡುವನ್ನು ಈಗಾಗಲೇ ಮೂರು ಬಾರಿ ವಿಸ್ತರಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಈ ಹಿಂದೆ ಮೊದಲು ಮಾರ್ಚ್ 14, ನಂತರ ಜೂನ್ 14, ಅದಾದ ಬಳಿಕ ಸೆಪ್ಟೆಂಬರ್ 14, ಮತ್ತೀಗ ಡಿಸೆಂಬರ್ 14ರವರೆಗೆ ಅವಕಾಶ ನೀಡಲಾಗಿದೆ. ಉಚಿತ ಆಧಾರ್ ನವೀಕರಣದ ಗಡುವನ್ನು ಕೇಂದ್ರ ಮತ್ತೊಮ್ಮೆ ವಿಸ್ತರಿಸುತ್ತದೆಯೇ ಎಂಬುದು ತಿಳಿಯದು.

ಹೀಗೆ ಮಾಡಿ:

ಮೊದಲು ನಿಮ್ಮ ಮೊಬೈಲ್​ನಲ್ಲಿ ‘ಮೈ ಆಧಾರ್’ ಪೋರ್ಟಲ್​ ತೆರೆದರೆ ಅಲ್ಲಿ ಅನೇಕ ಆಯ್ಕೆಗಳು ನಿಮಗೆ ಕಾಣಸಿಗುತ್ತವೆ.
ಮೊದಲು https://myaadhaar.uidai.gov.in ವೆಬ್‌ಸೈಟ್ ತೆರೆಯಿರಿ.
ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾಗಳನ್ನು ನಮೂದಿಸಿ. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಓಟಿಪಿ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ.
ಡಾಕ್ಯುಮೆಂಟ್ ನವೀಕರಣ ವಿಭಾಗಕ್ಕೆ ಹೋಗಿ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ಪರಿಶೀಲಿಸಿ.
ಬದಲಾವಣೆಯ ಅಗತ್ಯವಿರುವ ವಿವರಗಳನ್ನು ಮಾತ್ರ ಗುರುತಿಸಿ ಮತ್ತು ಪರಿಶೀಲನೆಗಾಗಿ ಸಂಬಂಧಿತ ಮೂಲ ದಾಖಲೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ.
ಇದರಲ್ಲಿ ಕೊಡಲಾದ ಸೇವಾ ವಿನಂತಿ ಸಂಖ್ಯೆಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ, ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಬಹುದು.

ಇದನ್ನೂ ಓದಿ: Supreme Court: ಆಧಾರ್‌ ಕಾರ್ಡ್ ಹುಟ್ಟಿದ ದಿನಾಂಕಕ್ಕೆ ದಾಖಲೆ ಅಲ್ಲ: ಸುಪ್ರೀಂ ಕೋರ್ಟ್