Friday, 22nd November 2024

Balochistan Blast: ಪಾಕಿಸ್ತಾನದ ರೈಲು ನಿಲ್ದಾಣದಲ್ಲಿ ಭೀಕರ ಸ್ಫೋಟ; 20 ಮಂದಿ ಸಾವು

Balochistan Blast

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ ಕ್ವೆಟ್ಟಾ ರೈಲ್ವೆ ನಿಲ್ದಾಣ (Quetta railway station)ದಲ್ಲಿ ಶನಿವಾರ (ನ. 9) ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ (Balochistan Blast).

ʼʼಮೇಲ್ನೋಟಕ್ಕೆ ಇದು ಆತ್ಮಾಹುತಿ ಬಾಂಬ್‌ ದಾಳಿ ಎನಿಸುತ್ತಿದ್ದು, ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆʼʼ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಬಲೂಚ್ ತಿಳಿಸಿದ್ದಾರೆ. ದಾಳಿ ವೇಳೆ ಘಟನಾ ಸ್ಥಳದಲ್ಲಿ ಸುಮಾರು 100 ಮಂದಿ ನೆರೆದಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ಪೊಲೀಸರು ಮತ್ತು ಭದ್ರತಾ ಪಡೆಗಳು ಘಟನೆಯ ಸ್ಥಳಕ್ಕೆ ತಲುಪಿವೆ. ಬಾಂಬ್ ನಿಷ್ಕ್ರಿಯ ದಳವು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುತ್ತಿದೆ ಎಂದು ಬಲೂಚಿಸ್ತಾನ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ತಿಳಿಸಿದ್ದಾರೆ. ಅಲ್ಲಿನ ಆಸ್ಪತ್ರೆಗಳಲ್ಲಿ ‘ತುರ್ತು ಪರಿಸ್ಥಿತಿ’ ಘೋಷಿಸಲಾಗಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಕ್ವೆಟ್ಟಾ ನಿಲ್ದಾಣ ಜಾಫರ್ ಎಕ್ಸ್‌ಪ್ರೆಸ್‌ ಬೆಳಗ್ಗೆ 9:00 ಗಂಟೆಗೆ ಪೇಶಾವರಕ್ಕೆ ಹೊರಡಬೇಕಿತ್ತು. ಆದರೆ ಸ್ಫೋಟ ಸಂಭವಿಸಿದಾಗ ಅದು ಇನ್ನೂ ಫ್ಲಾಟ್‌ಫಾರ್ಮಗೆ ಬಂದಿರಲಿಲ್ಲ. ಇದರಿಂದ ಹೆಚ್ಚಿನ ಸಾವು-ನೋವು ತಪ್ಪಿದೆ. ಪ್ಲಾಟ್ ಫಾರ್ಮ್ ಬಳಿಯ ನಿಲ್ದಾಣದ ಬುಕಿಂಗ್ ಕಚೇರಿಯನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ಸಂಭವಿಸಿದೆ. ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳಿ ತಿಳಿಸಿವೆ.

ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ದಾಳಿಯನ್ನು ಖಂಡಿಸಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭದ್ರತಾ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಬಲೂಚಿಸ್ತಾನ ಸರ್ಕಾರ ಬದ್ಧವಾಗಿದೆ ಎಂದು ಅವರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

ಭದ್ರತೆ ಹೆಚ್ಚಳ

ಸ್ಫೋಟದ ಹಿಂದಿನ ಕಾರಣ ಮತ್ತು ಉದ್ದೇಶವನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇತ್ತ ಹೆಚ್ಚಿನ ದಾಳಿಗಳನ್ನು ತಡೆಗಟ್ಟಲು ಈ ಪ್ರದೇಶದ ಪ್ರಮುಖ ಸಾರಿಗೆಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪುರಾವೆಗಳನ್ನು ಸಂಗ್ರಹಿಸಲು ಮತ್ತು ಸ್ಫೋಟದ ಸ್ವರೂಪದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರಿಗಳು ಬಾಂಬ್ ನಿಷ್ಕ್ರಿಯ ಘಟಕಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಲೂಚಿಸ್ತಾನದಲ್ಲಿ ದಾಳಿ ಪ್ರಕರಣ ಹೆಚ್ಚಾಗುತ್ತಿದ್ದು, ಕಳವಳವನ್ನುಂಟು ಮಾಡಿದೆ. ತನ್ನ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಈ ಪ್ರದೇಶದಿಂದ ಭಯೋತ್ಪಾದನೆಯ ಪಿಡುಗನ್ನು ತೊಡೆದುಹಾಕಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಈ ವರ್ಷದ ಆಗಸ್ಟ್‌ನಲ್ಲಿ ಬಲೂಚಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 23 ಜನರು ಮೃತಪಟ್ಟಿದ್ದರು. ಭಯೋತ್ಪಾದಕರು ಪ್ರಯಾಣಿಕರನ್ನು ಬಸ್ಸಿನಿಂದ ಇಳಿಯುವಂತೆ ಬಲವಂತಪಡಿಸಿ ಬಳಿಕ ಗುಂಡಿನ ದಾಳಿ ನಡೆಸಿದ್ದರು. ಭಯೋತ್ಪಾದಕರು 10 ವಾಹನಗಳಿಗೆ ಬೆಂಕಿ ಹಚ್ಚಿದ್ದರು.

ಈ ಸುದ್ದಿಯನ್ನೂ ಓದಿ: ಬಲೂಚಿಸ್ತಾನದಲ್ಲಿ ಭಯೋತ್ಪಾದಕ ದಾಳಿ: 23 ಜನರ ಸಾವು