Friday, 15th November 2024

BS Yediyurappa: ಬಿಎಸ್‌ವೈ, ಶ್ರೀರಾಮುಲು ಮೇಲೆ ತನಿಖೆ ತೂಗುಗತ್ತಿ, ಪ್ರಾಸಿಕ್ಯೂಷನ್‌ಗೆ ನ್ಯಾಯಮೂರ್ತಿ ಶಿಫಾರಸು

bsy sriramulu

ಬೆಂಗಳೂರು: ಕೋವಿಡ್‌ ಹಗರಣ (Covid scam) ತನಿಖೆಯ ಮಧ್ಯಂತರ ವರದಿಯಿಂದ ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಅಂದಿನ ಆರೋಗ್ಯ ಸಚಿವರಾಗಿದ್ದ ಬಿ. ಶ್ರೀರಾಮುಲು (B Sriramulu) ಅವರಿಗೆ ಸಂಕಷ್ಟ ಎದುರಾಗಿದೆ. ಇಬ್ಬರ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ (Prosecution) ವರದಿ ನೀಡಿರುವ ನ್ಯಾಯಮೂರ್ತಿಗಳು ಶಿಫಾರಸು ಮಾಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಕೊರೊನಾ ಹಗರಣ ಮತ್ತೆ ಸದ್ದು ಮಾಡುತ್ತಿದೆ. 2020ರಲ್ಲಿ ಕೊರೊನಾ ಕಾಯಿಲೆ ನಿರ್ವಹಣೆಯಲ್ಲಿ ಅಂದಿನ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿತ್ತು ಎನ್ನುವ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ಕೋವಿಡ್ ಹಗರಣದ ಬಗ್ಗೆ ತನಿಖೆಗಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿತ್ತು. ಇದೀಗ ಕೋವಿಡ್ ಅಕ್ರಮಗಳ ಬಗ್ಗೆ ಜಸ್ಟಿಸ್ ಮೈಕೆಲ್ ಡಿ ಕುನ್ಹಾ ಅವರು ದಾಖಲೆ ಸಮೇತ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮವೆಸಗಿದ ಅಂದಿನ ಸಿಎಂ ಯಡಿಯೂರಪ್ಪ ಮತ್ತು ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಶಿಫಾರಸು ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೂ ಶಿಫಾರಸು ಮಾಡಲಾಗಿದೆ.

ಚೀನಾ ಜೊತೆ ವಹಿವಾಟು ನಿರ್ಬಂಧ ಸಂದರ್ಭದಲ್ಲೇ ದೇಶೀಯ ಸಂಸ್ಥೆಗಳು ಸರಬರಾಜು ಅವಕಾಶ ಇದ್ದರೂ ಹೆಚ್ಚು ಹಣ ನೀಡಿ ಚೀನಾದಿಂದ ಪಿಪಿಇ ಕಿಟ್ ಖರೀದಿ ಮಾಡಲಾಗಿತ್ತು. 3 ಲಕ್ಷ ಪಿಪಿಇ ಕಿಟ್ ಖರೀದಿಯಲ್ಲಿ 14 ಕೋಟಿ ಭ್ರಷ್ಟಾಚಾರ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ದೇಶಿ ಕಂಪನಿಗಳಿಗಿಂತ ಮೂರು ಪಟ್ಟು ಹೆಚ್ಚಳ ದರ ನೀಡಿ ಖರೀದಿ ಮಾಡಲಾಗಿತ್ತು. ಸಪ್ಲೈನಲ್ಲೂ ಕಡಿಮೆ ಸರಬರಾಜು, ಹಣ ಪಾವತಿ ಮಾಡಿದ ಮೇಲೆಯೂ ಮರು ಪರಿಷ್ಕರಣೆ ಮಾಡಿ ಮತ್ತೆ ಖರೀದಿ ಮಾಡಿರುವ ಆರೋಪವನ್ನು ಅಂದಿನ ರಾಜ್ಯ ಸರ್ಕಾರ ಎದುರಿಸಿತ್ತು.

2021ರ ಜುಲೈ- ಆಗಸ್ಟ್‌ನಲ್ಲಿ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ ಬಿಡುಗಡೆ ಮಾಡಿದ ವರದಿಯಲ್ಲಿ ಕೋವಿಡ್ ಹಗರಣದ ಬಗ್ಗೆ ಗಂಭೀರ ಆರೋಪಗಳಿದ್ದವು. 2023ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆ ಮಾಡಿತ್ತು.

ಇದನ್ನೂ ಓದಿ: BS Yediyurappa: ಸಿಎಂ ಆಗಿದ್ದಾಗ ಸಾವಿರಾರು ಕೋಟಿ ಹೊಡೆದಿದ್ದರು ಯಡಿಯೂರಪ್ಪ: ಯತ್ನಾಳ್ ಆರೋಪ!