Friday, 22nd November 2024

Mohammad Reza Shah: 18 ಟನ್‌ ಫುಡ್‌, 25,000 ಬಾಟಲಿ ವೈನ್! ಮರುಭೂಮಿಯಲ್ಲೇ ಕಾಡು ಸೃಷ್ಟಿಸಿ ಅದ್ಧೂರಿ ಪಾರ್ಟಿ!

Mohammad Reza Shah

ಸುತ್ತಲೂ ಸಾವಿರಾರು ಪಕ್ಷಿಗಳ ಚಿಲಿಪಿಲಿ, ಗಿಡ-ಮರಗಳ ಹಸಿರು ಕಂಪು, ಜಗಮಗಿಸುವ ವೇದಿಕೆ, ಅಲ್ಲೆ ಸಮೀಪದಲ್ಲಿ ಬಾಯಲ್ಲಿ ನೀರೂರಿಸುವ ರಸದೌತಣ. ಟೇಬಲ್‌ ಮೇಲೆ ಪೇರಿಸಿಟ್ಟ 18 ಟನ್‌ಗಳಷ್ಟು ಆಹಾರ, 25,000 ಬಾಟಲಿ ವೈನ್, ನೂರಾರು ವಿಮಾನ ಹಾರಾಟ, ಒಂದಾ ಎರಡಾ… ಯಾವುದನ್ನೂ ನೋಡಲಿ, ಯಾವುದನ್ನು ಬಿಡಲಿ ಅನ್ನುವಷ್ಟು ಕಣ್ಣಿಗೆ ಹಬ್ಬದಂತೆ ಆ ವಾತಾವರಣ ಸಜ್ಜಾಗಿತ್ತು. ದೇಶದ ಆಗರ್ಭ ಶ್ರೀಮಂತ ಮುಖೇಶ್‌ ಅಂಬಾನಿ ಯಾವುದೋ ಪಾರ್ಟಿ ಆಯೋಜಿಸಿರಬೇಕು ಎಂದು ಎಂದು ನೀವೆಂದುಕೊಂಡಿದ್ದರೆ ನಿಮ್ಮ ಊಹೆ ನೂರಕ್ಕೆ ನೂರರಷ್ಟು ಸುಳ್ಳು. ಇದನ್ನು ಆಯೋಜಿಸಿದ್ದು ಇರಾನ್‍ನ ಆಗಿನ ಆಡಳಿತಗಾರ ಮೊಹಮ್ಮದ್ ರೆಜಾ ಷಾ ಪಹ್ಲಿವಿ(Mohammad Reza Shah).ಇದು ಜಗತ್ತಿನ ಅದ್ದೂರಿ ಪಾರ್ಟಿಯಾಗಿತ್ತಂತೆ. ಆಗಿನ 65 ದೇಶಗಳ ಮುಖ್ಯಸ್ಥರು ಈ ಔತಣಕೂಟದಲ್ಲಿ ಭಾಗವಹಿಸಿದ್ದರಂತೆ. ಮೊಹಮ್ಮದ್ ರೆಜಾ ಷಾ ಬಗ್ಗೆ ಇನ್ನಷ್ಟು ಆಸಕ್ತಿದಾಯಕವಾದ ವಿಷಯಗಳು ಇಲ್ಲಿವೆ ಓದಿ.

ಈ ಪಾರ್ಟಿ ಆಯೋಜಿಸಲು ಕಾರಣವೇನು?
ಆಧುನಿಕ ಕಾಲದಲ್ಲಿ, ಇರಾನ್ ಅನ್ನು ಸಾಮಾನ್ಯವಾಗಿ ಕಟ್ಟುನಿಟ್ಟಾದ ಇಸ್ಲಾಮಿಕ್ ರಾಷ್ಟ್ರವೆಂದು ನೋಡಲಾಗುತ್ತದೆ. ಆದರೆ ಕೇವಲ ಐವತ್ತು ವರ್ಷಗಳ ಹಿಂದೆ, ಇಲ್ಲಿನ ಮಹಿಳೆಯರು ಪಾಶ್ಚಾತ್ಯ ಉಡುಪುಗಳನ್ನು ಧರಿಸಿ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.  ಇದಕ್ಕೆ ಕಾರಣ 1941 ರಲ್ಲಿ, ಮೊಹಮ್ಮದ್ ರೆಜಾ ಷಾ ಎಂಬ ಶ್ರೀಮಂತ ಆಡಳಿತಗಾರ ಅಧಿಕಾರದಿಂದ. ಮೊಹಮ್ಮದ್ ರೆಜಾ ಷಾ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ, ಉದಾರವಾದಿ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಹಿಜಾಬ್‌ನಂತಹ ಸಾಂಪ್ರದಾಯಿಕ ಅಭ್ಯಾಸಗಳನ್ನು ವಿರೋಧಿಸುವ ಮೂಲಕ ದೇಶವನ್ನು ಆಧುನೀಕರಿಸಲು ಅವರು ಪ್ರಯತ್ನಿಸಿದ್ದರಂತೆ. ಆದರೆ ಇದಕ್ಕೆ ಧಾರ್ಮಿಕ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ  ಅವರ ಆಡಳಿತದ ವಿರುದ್ಧ ಮಾತನಾಡಿದರೆ ಜೈಲುವಾಸವೇ ಗತಿಯಾಗಿತಂತೆ.

Mohammad Reza Shah

1971ರಲ್ಲಿ ಪರ್ಸೆಪೊಲಿಸ್‍ನಲ್ಲಿ ಪರ್ಷಿಯನ್ ಸಾಮ್ರಾಜ್ಯದ 2,500 ನೇ ವಾರ್ಷಿಕೋತ್ಸವಕ್ಕಾಗಿ ಷಾ ಭವ್ಯವಾದ ಪಾರ್ಟಿಯೊಂದನ್ನು ಆಯೋಜಿಸಿದ್ದರಂತೆ. ಮರುಭೂಮಿಯಲ್ಲಿ ನಡೆದ ಭವ್ಯ ಆಚರಣೆಯಲ್ಲಿ 65 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರಂತೆ. ಮಾಧ್ಯಮ ವರದಿಗಳ ಪ್ರಕಾರ, ಈ ಕಾರ್ಯಕ್ರಮಕ್ಕೆ ಖರ್ಜಾಗಿದ್ದು ಬರೋಬ್ಬರಿ 100 ಮಿಲಿಯನ್ ಡಾಲರ್.

ಈ ಕಾರ್ಯಕ್ರಮವು 1971ರಲ್ಲಿ ನಡೆದಿದ್ದರೂ, ಇದರ ಯೋಜನೆಯನ್ನು  ಒಂದು ವರ್ಷ ಮುಂಚಿತವಾಗಿ ಮಾಡಲಾಗಿತ್ತಂತೆ. ಟೆಹ್ರಾನ್‍ನಲ್ಲಿ ಅಂತಹ ಭವ್ಯ ಸಮಾರಂಭಕ್ಕೆ  ಅಗತ್ಯವಾದ ವಸತಿ ಸೌಕರ್ಯಗಳ ಕೊರತೆಯಿದೆ ಎಂಬುದನ್ನು ತಿಳಿದ ಷಾ ಈ ಕಾರ್ಯಕ್ರಮವನ್ನು  ಬಂಜರು ಮರುಭೂಮಿಯ ಮಧ್ಯದಲ್ಲಿ ನಡೆಸುವ ನಿರ್ಧಾರವನ್ನು ಮಾಡಿದ್ದರಂತೆ.

ಪರ್ಸೆಪೊಲಿಸ್ ಎಂದು ಕರೆಯಲ್ಪಡುವ ಈ ಪ್ರದೇಶವು ಪರ್ಷಿಯಾದ ಮೊದಲ ಚಕ್ರವರ್ತಿಯಾದ ಸೈರಸ್ ದಿ ಗ್ರೇಟ್ ಅವರ ಸಮಾಧಿಗೆ ನೆಲೆಯಾಗಿದ್ದರೂ, ವಿಶಾಲವಾದ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮಕ್ಕಾಗಿ ವೇದಿಕೆ ಸಿದ್ಧಪಡಿಸಲಾಗಿತ್ತು.ಇಲ್ಲಿ ವಿಶೇಷ ಸಸ್ಯಗಳು ಮತ್ತು ಗಿಡಗಳನ್ನು ನೆಡಲಾಗಿತ್ತು. ಯುರೋಪ್ ನಿಂದ 50,000 ಪಕ್ಷಿಗಳನ್ನು ತಂದರಂತೆ.  ಮಾಧ್ಯಮ ವರದಿಗಳ ಪ್ರಕಾರ, ಮರುಭೂಮಿಯನ್ನು ಕಾಡಿನಂತೆ ಕಾಣಲು ಮಾಡಲು 50,000 ಪಕ್ಷಿಗಳನ್ನು ತಂದರಂತೆ. ಆದಾಗ್ಯೂ, ಮರುಭೂಮಿ ಪರಿಸರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ ಅವು ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು.

ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಮರುಭೂಮಿಯಲ್ಲಿ ಡೇರೆಗಳ ತಾತ್ಕಾಲಿಕ ನಗರವನ್ನು ನಿರ್ಮಿಸಲಾಗಿತ್ತು. ಡೇರೆಗಳಿಗೆ ಅಗತ್ಯವಾದ ವಸ್ತುಗಳನ್ನು ಸಾಗಿಸಲು ಫ್ರಾನ್ಸ್‌ನಿಂದ 40 ಟ್ರಕ್‍ಗಳು ಮತ್ತು 100 ವಿಮಾನಗಳನ್ನು ತರಲಾಗಿತ್ತು. ಹಾಗೇ 18 ಟನ್ ಆಹಾರ, ಮತ್ತು 25,000 ಬಾಟಲಿ ವೈನ್ ಅನ್ನು, ಗಣ್ಯರಿಗೆ ಬಡಿಸಲು 180 ವೈಟರ್‌ಗಳನ್ನು ನಿಯೋಜಿಸಲಾಗಿತ್ತಂತೆ. ಹಾಗೇ ಪ್ರಪಂಚದಾದ್ಯಂತದ ಭೇಟಿ ನೀಡುವ ರಾಜರು, ರಾಣಿಯರು ಮತ್ತು ರಾಜಕೀಯ ವ್ಯಕ್ತಿಗಳ ಸುರಕ್ಷತೆಗಾಗಿ  ಭದ್ರತೆಯನ್ನು ಹೆಚ್ಚಿಸಲಾಯಿತು. ಈ ಪಾರ್ಟಿ ದುಂದುವೆಚ್ಚದ ಪಾರ್ಟಿಯಾಗಿತ್ತು. ಹಾಗಾಗಿ  ಈ ಆಚರಣೆಯನ್ನು ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಎಂದು ಕರೆಯಲಾಗಿತ್ತು.

ಇದನ್ನೂ ಓದಿ:ಎರಡೂ ಕಾಲಿಲ್ಲದ ಭಿಕ್ಷುಕ ಸೇರಿ ಮೂವರಿಂದ ಸಂಶೋಧಕಿ ಮೇಲೆ ಅತ್ಯಾಚಾರ

ಈ ಕಾರ್ಯಕ್ರಮದಲ್ಲಿ ಷಾ ಮಾಡಿದ  ದುಂದುವೆಚ್ಚಕ್ಕೆ ಸಾರ್ವಜನಿಕರಿಂದ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿತ್ತಂತೆ.  ಈ ವಿರೋಧ ವಿಶೇಷವಾಗಿ ಅಯತೊಲ್ಲಾ ಖೊಮೇನಿ ಬೆಂಬಲಿಗರನ್ನು ಬಲಪಡಿಸಿತಂತೆ. 1979 ರ ಹೊತ್ತಿಗೆ, ಹೆಚ್ಚುತ್ತಿರುವ ಈ ಉದ್ವಿಗ್ನತೆ ಪರಿಸ್ಥಿತಿ ಷಾ ಅವರ ಗಡೀಪಾರಿಗೆ ಕಾರಣವಾಯಿತು.  ಆದರೆ ಈ ನಡುವೆ ಖೊಮೇನಿ ಇರಾನ್‍ಗೆ ಮರಳಿ ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಯನ್ನು ಘೋಷಿಸಿದರು. ಹೊಸ ಆಡಳಿತವು ಹಿಜಾಬ್ ಧರಿಸದ ಮಹಿಳೆಯರಿಗೆ ಕಠಿಣ ಶಿಕ್ಷೆ ಸೇರಿದಂತೆ ಇಸ್ಲಾಮಿಕ್ ಕಾನೂನನ್ನು ಜಾರಿಗೆ ತಂದಿತು.