ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ (Maharashtra assembly election) ಮುನ್ನ ಶನಿವಾರ ಅಕೋಲಾದಲ್ಲಿ ನಡೆದ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್ (Congress) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ತನ್ನ ಆಡಳಿತದ ಅಡಿಯಲ್ಲಿ ರಾಜ್ಯಗಳನ್ನು ಆರ್ಥಿಕ ಮೂಲಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಎಲ್ಲಿ ರಚನೆಯಾಗುತ್ತದೆಯೋ, ಆ ರಾಜ್ಯದಲ್ಲಿ ಕುಟುಂಬ ರಾಜಕಾರಣ ನಡೆಯುತ್ತದೆ ಹಾಗೂ ರಾಜ್ಯಗಳನ್ನು ಎಟಿಎಂ(ATM) ತರದಲ್ಲಿ ಬಳಸಿಕೊಳ್ಳುತ್ತದೆ. ಮಹಾರಾಷ್ಟ್ರವನ್ನು ಕಾಂಗ್ರೆಸ್ನ ಎಟಿಎಂ ಆಗಲು ನಾವು ಬಿಡುವುದಿಲ್ಲ ಎಂದು ಗುಡುಗಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ʼʼಕಾಂಗ್ರೆಸ್ನವರು ಸಂವಿಧಾನ ಹಾಗೂ ಬಾಬ ಸಹೇಬ್ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ. ಆದರೆ ಆ ಪಕ್ಷದ ಯಾರಾದರು ಒಬ್ಬರು ಅವರ ಆದರ್ಶಗಳನ್ನು ಅನುಸರಿಸುತ್ತಾರಾ?ʼʼ ಎಂದು ಪ್ರಶ್ನಿಸಿದರು. ʼʼಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುವವರಿಗೆ ನಾನು ಸವಾಲು ಹಾಕುತ್ತೇನೆ. ಅವರು ಎಂದಾದರೂ ಬಾಬಾ ಸಾಹೇಬರ ಜನ್ಮಸ್ಥಳವಾದ ಪಂಚತೀರ್ಥಕ್ಕೆ ಹೋಗಿದ್ದಾರೆಯೇ?ʼʼ ಎಂದು ವಾಗ್ದಾಳಿ ನಡೆಸಿದರು.
#WATCH | Akola, Maharashtra: Prime Minister Narendra Modi says, "… Wherever Congress forms government, that state becomes an ATM for the Congress' royal family… These days, Himachal Pradesh, Karnataka, and Telangana have become their ATMs. In the name of elections in… pic.twitter.com/paZPabUmez
— ANI (@ANI) November 9, 2024
ʼʼಜಮ್ಮು ಮತ್ತು ಕಶ್ಮೀರದಲ್ಲಿ ಹಿಂದೆ ಹಿಂಸಾಚರಗಳು ನಡೆಯುತ್ತಿದ್ದವು. ಈಗ ಅದು ನಿಂತಿದೆ. ದೇಶಕ್ಕೆ ಒಂದು ಕಾನೂನಾದರೆ ಕಾಶ್ಮೀರಕ್ಕೆ ಒಂದು ಕಾನೂನು ಯಾಕೆ? ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ಯಾಕೆ ವಿಶೇಷ ಸ್ಥಾನವನ್ನು ರದ್ದು ಮಾಡಲಿಲ್ಲ? ಬಾಯಲ್ಲಿ ಸಂವಿಧಾನ ಹಾಗೂ ಬಾಬಾ ಸಾಹೇಬರ ತತ್ವಗಳನ್ನು ಹೇಳುತ್ತಾರೆ. ಆದರೆ ಒಂದನ್ನೂ ಆಚರಣೆಗೆ ತರುವುದಿಲ್ಲʼʼ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಇನ್ನೂ ಅನುಸರಿಸುತ್ತಿದೆ. ಒಂದು ಜಾತಿಯ ವಿರುದ್ದ ಇನ್ನೊಂದು ಜಾತಿಯನ್ನು ಎತ್ತಿ ಕಟ್ಟುವ ಕೆಲಸ ನಡೆಸುತ್ತಿದೆ ಎಂದ ಅವರು ತಮ್ಮ ಭಾಷಣದಲ್ಲಿ ಹರಿಯಾಣದ ಚುನಾವಣಾ ಫಲಿತಾಂಶದ ಬಗ್ಗೆ ಉಲ್ಲೇಖಿಸಿದರು. ಹರಿಯಾಣದ ಜನ ಕಾಂಗ್ರೆಸ್ನ ಗ್ಯಾರಂಟಿಗಳಿಗೆ ಮಾರು ಹೋಗಿಲ್ಲ ಎಂದರು.
ಮಹಾ ವಿಕಾಸ್ ಅಘಾಡಿ ಮೈತ್ರಿಯನ್ನು ಟೀಕಿಸಿದ ಮೋದಿ, ಮಹಾರಾಷ್ಟ್ರದಲ್ಲಿನ ಭ್ರಷ್ಟಾಚಾರದ ವಿರುದ್ದ ವಾಗ್ದಾಳಿ ನಡೆಸಿದರು. “ಮಹಾರಾಷ್ಟ್ರದ ಮತದಾರರಿಗೆ ಮನವಿ ಮಾಡುತ್ತೇನೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ (ಮಹಾ ಮೈತ್ರಿ)ಗೆ ನಿಮ್ಮ ಆಶೀರ್ವಾದ ಪಡೆಯಲು ನಾನು ಬಂದಿದ್ದೇನೆ” ಎಂದು ಹೇಳಿದರು. ನ. 9ರ ಮಹತ್ವವನ್ನು ಹೇಳುತ್ತಾ, ರಾಮ ಮಂದಿರದ ಕುರಿತು 2019ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು. ಕೊನೆಯಲ್ಲಿ ಮಹಾರಾಷ್ಟ್ರ ಜನ ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದೀರಿ. ಈ ಬಾರಿಯೂ ಅದನ್ನು ಮುಂದುವರೆಸಿ ಎಂದು ಕರೆ ನೀಡಿದರು.