Monday, 25th November 2024

IND vs AUS: ಆಸೀಸ್‌ ಪ್ರವಾಸಕ್ಕೂ ಮುನ್ನ ಆಟಗಾರರಿಗೆ ಮಹತ್ವದ ಸಲಹೆ ನೀಡಿದ ಕಪಿಲ್‌ ದೇವ್‌

ಮುಂಬಯಿ: ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗ ಎದುರಿಸಿದ್ದ ಟೀಮ್‌ ಇಂಡಿಯಾದ(IND vs AUS) ಕಳಪೆ ಪ್ರದರ್ಶನದ ಬಗ್ಗೆ ಈಗಾಗಲೇ ಹಲವು ಮಾಜಿ ಆಟಗಾರರು ಟೀಕೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾರ್ಡರ್‌-ಗವಾಸ್ಕರ್‌(Border-Gavaskar Trophy) ಟೆಸ್ಟ್‌ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿ ನಿಂತಿರುವ ಭಾರತ ತಂಡಕ್ಕೆ ಮಾಜಿ ನಾಯಕ, ಹಾಗೂ ಆಟಗಾರ ಕಪಿಲ್‌ ದೇವ್‌(Kapil Dev) ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್‌ ದೇವ್‌, ʼಭಾರತೀಯ ಆಟಗಾರರು ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಮನೆಯಲ್ಲಿ ಕುಳಿತು ಫಾರ್ಮ್‌ ಬಗ್ಗೆ ಎಷ್ಟೇ ಚಿಂತಿಸಿದರೂ ಪ್ರಯೋಜನವಿಲ್ಲ. ಫಾರ್ಮ್‌ ಕಂಡುಕೊಳ್ಳಬೇಕಾದರೆ ಮೊದಲು ಅಭ್ಯಾಸ ನಡೆಸಿ. ಕೆಟ್ಟ ಸಮಯವನ್ನು ಎದುರಿಸುತ್ತಿರುವಾಗ, ಅಭ್ಯಾಸವು ಏಕೈಕ ತ್ವರಿತ ಪರಿಹಾರವಾಗಿದೆ. ನೀವು ಹೆಚ್ಚು ಅಭ್ಯಾಸ ಮಾಡಿದರೆ, ನೀವು ಉತ್ತಮರಾಗುತ್ತೀರಿʼ ಎಂದು ಬ್ಯಾಟರ್‌ಗಳಿಗೆ ಕಪಿಲ್‌ ಸಲಹೆ ನೀಡಿದ್ದಾರೆ.

ʼತಂಡದ ಆಟಗಾರರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನೀವು ಕಳೆದುಕೊಂಡಿರುವ ಫಾರ್ಮ್‌ ಮತ್ತೆ ಕಂಡು ಕೊಳ್ಳಬೇಕಾದರೆ ಹೆಚ್ಚಿನ ಅಭ್ಯಾಸ ಅಗತ್ಯ. ಚಿಂತಿಸಿ ಫಲವಿಲ್ಲ. ಅದರ ಬದಲು ಮೈದಾನಕ್ಕಿಳಿದು ನಿಮ್ಮ ಕೈ ಮತ್ತು ಬ್ಯಾಟ್‌ಗಳಿಗೆ ಹೆಚ್ಚಿನ ಕೆಲಸ ಕೊಡಿ. ಆಗ ತನ್ನಿಂದ ತಾನೇ ನಿಮ್ಮ ಫಾರ್ಮ್‌ ಮರಳಿ ಬರಲಿದೆʼ ಎಂದು ಹೇಳಿದರು.

ಇದನ್ನೂ ಓದಿ IND vs AUS: ಸರ್ಫರಾಝ್‌ ಖಾನ್‌ ಬದಲು ದೃವ್‌ ಜುರೆಲ್‌ ಸ್ಥಾನ ನೀಡಿ ಎಂದ ಆಕಾಶ್‌ ಚೋಪ್ರಾ!

ಕಿವೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಪೂರ್ವಭಾವಿಯಾಗಿ ಹಿರಿಯ ಆಟಗಾರರು ದುಲೀಪ್​ ಟ್ರೋಫಿಯಲ್ಲಿ ಆಡದೆ ಕಾರ್ಯದೊತ್ತಡದ ನೆಪ ನೀಡಿದ್ದರು. ಈಗಿನ ಹಿರಿಯ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ ಆಡುವುದನ್ನು ಕಡೆಗಣಿಸಿದ್ದರಿಂದಲೇ ಕಿವೀಸ್​ ವಿರುದ್ಧ ವೈಟ್​ವಾಶ್‌​ ಮುಖಭಂಗ ಎದುರಾಯಿತೇ ಎಂದು ವಿಶ್ಲೇಷಿಸಲಾಗುತ್ತಿದೆ. ವಿರಾಟ್​ ಕೊಹ್ಲಿ 2013 ಮತ್ತು ರೋಹಿತ್​ ಶರ್ಮ 2015ರಲ್ಲಿ ಕೊನೆಯದಾಗಿ ರಣಜಿ ಟ್ರೋಫಿಯಲ್ಲಿ ಆಡಿದ್ದಾರೆ. ಸಚಿನ್​ ತೆಂಡುಲ್ಕರ್​ 200 ಟೆಸ್ಟ್​ ಜತೆಗೆ 110 ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದ್ದರೆ, 117 ಟೆಸ್ಟ್​ ಆಡಿರುವ ಕೊಹ್ಲಿ ಆಡಿರುವುದು 32 ಪ್ರಥಮ ದರ್ಜೆ ಪಂದ್ಯ ಮಾತ್ರ. ರೋಹಿತ್​ ಶರ್ಮ 18 ವರ್ಷಗಳ ವೃತ್ತೀಜಿವನದಲ್ಲಿ 61 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದಾರೆ.

ಭಾರತದ ಅಂಕ ಗಳಿಕೆ ಶೇ.58.33ಕ್ಕೆ ಇಳಿದಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ (ಶೇ.62.50) ಅಗ್ರಸ್ಥಾನಕ್ಕೇರಿದೆ. ಶ್ರೀಲಂಕಾ (ಶೇ.55.56) 3, ನ್ಯೂಜಿಲೆಂಡ್​ (54.55) 4 ಮತ್ತು ದಕ್ಷಿಣ ಆಫ್ರಿಕಾ (ಶೇ.54.17) 5ನೇ ಸ್ಥಾನದಲ್ಲಿದೆ. ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಎಲ್ಲ 5 ತಂಡಗಳೂ ಈಗ ಫೈನಲ್​ಗೇರುವ ಅವಕಾಶ ಜೀವಂತ ಉಳಿಸಿಕೊಂಡಿವೆ.

ಭಾರತ ತಂಡ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇತರ ಯಾವ ಫಲಿತಾಂಶಗಳನ್ನೂ ಅವಲಂಬಿಸದೆ ನೇರವಾಗಿ ಫೈನಲ್​ ಪ್ರವೇಶಿಸಬೇಕಾದರೆ ಆಸ್ಟ್ರೆಲಿಯಾ ಪ್ರವಾಸದ 5 ಟೆಸ್ಟ್​ಗಳಲ್ಲಿ 4ರಲ್ಲಿ ಗೆದ್ದು, 1ರಲ್ಲಿ ಡ್ರಾ ಸಾಧಿಸಿ 4-0 ಯಿಂದ ಸರಣಿ ವಶಪಡಿಸಿಕೊಳ್ಳಬೇಕಾಗುತ್ತದೆ. ಆಗ ಶೇ. 65.79 ಅಂಕಗಳೊಂದಿಗೆ ಭಾರತ ಫೈನಲ್​ಗೇರಬಹುದಾಗಿದೆ. ಇದರ ಹೊರತಾಗಿ ಭಾರತ ತಂಡ ಆಸೀಸ್​ನಲ್ಲಿ 2-3ರಿಂದ ಸರಣಿ ಸೋತರೂ ಫೈನಲ್​ಗೇರುವ ಅವಕಾಶವಿರುತ್ತದೆ. ಆದರೆ ಆಗ ಇತರ ಸರಣಿಗಳ ಫಲಿತಾಂಶವೂ ಭಾರತಕ್ಕೆ ವರವಾಗಿ ಬರಬೇಕಾಗುತ್ತದೆ.