Monday, 25th November 2024

IND vs SA: ಎರಡನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

India's Likely XI For 2nd T20I vs South Africa

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟ20ಐ ಸರಣಿಯಲ್ಲಿ (IND vs SA) ಭಾರತ ತಂಡ ಶುಭಾರಂಭ ಕಂಡಿದೆ. ಶುಕ್ರವಾರ ಡರ್ಬನ್‌ನಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ರ (107 ರನ್‌) ಶತಕ ಹಾಗೂ ಸ್ಪಿನ್ನರ್‌ಗಳ ನೆರವಿನಿಂದ ಟೀಮ್‌ ಇಂಡಿಯಾ 61 ರನ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತ್ತು. ಭಾನುವಾರ ನಡೆಯಲಿರುವ ಎರಡನೇ ಟಿ20ಐ ಪಂದ್ಯದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಭಾರತ ತಂಡ ಎದುರು ನೋಡುತ್ತಿದೆ.

ಡರ್ಬನ್‌ನ ಕಿಂಗ್ಸ್‌ಮೀಡ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡ, ವರುಣ್‌ ಚಕ್ರವರ್ತಿ (25ಕ್ಕೆ 3) ಹಾಗೂ ರವಿ ಬಿಷ್ಣೋಯ್‌ (28ಕ್ಕೆ 3) ಅವರ ಸ್ಪಿನ್‌ ಮೋಡಿಗೆ ನಲುಗಿ ಕೇವಲ 141 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಆ ಮೂಲಕ ಹರಿಣ ಪಡೆ ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿತ್ತು.

ಇದೀಗ ಉಭಯ ತಂಡಗಳು ಜಿಕೆಬೆರಾಗೆ ತಲುಪಿದ್ದು, ನವೆಂಬರ್‌ 10 ರಂದು ಎರಡನೇ ಟಿ20ಐ ಪಂದ್ಯಕ್ಕೆ ಸಜ್ಜಾಗುತ್ತಿವೆ. ಮೊದಲನೇ ಟಿ20 ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆದಿದ್ದು, ಎರಡನೇ ಪಂದ್ಯದಲ್ಲಿಯೂ ಅದೇ ಪ್ಲೇಯಿಂಗ್‌ XI ಅನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಆದರೆ, ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಸೂಕ್ತ ಆಟಗಾರರೊಂದಿಗೆ ಭರ್ತಿಯಾಗಿದೆ. ಹಾಗಾಗಿ ರಮಣ್‌ದೀಪ್‌ ಸಿಂಗ್‌ ಮತ್ತು ಜಿತೇಶ್‌ ಶರ್ಮಾ ಅವರು ಎರಡನೇ ಟಿ20 ಪಂದ್ಯದಲ್ಲಿಯೂ ಬೆಂಚ್‌ ಕಾಯಬೇಕಾಗುತ್ತದೆ. ಭಾರತ ತಂಡ ಆರಂಭಿಕ ಮೂರೂ ಪಂದ್ಯಗಳನ್ನು ಗೆದ್ದು ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡರೆ, ಆಗ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಕೊನೆಯ ಪಂದ್ಯದಲ್ಲಿ ಅವಕಾಶ ಸಿಗಬಹುದು.

ಆದರೆ, ತಂಡದ ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಯಶ್‌ ದಯಾಳ್‌ ಮತ್ತು ವೈಶಾಖ್‌ವಿಜಯ್‌ಕುಮಾರ್‌ ಅವರು ಮೊದಲನೇ ಪಂದ್ಯದಲ್ಲಿ ಬೆಂಚ್‌ ಕಾದಿದ್ದರು. ಕನ್ನಡಿಗ ವೈಶಾಖ್‌ ವಿಜಯ್‌ಕುಮಾರ್‌ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಆದರೆ, ಒಂದು ಪಂದ್ಯದ ಬಳಿಕ ಆಟಗಾರರನ್ನು ಕೈ ಬಿಡುವುದು ಕಠಿಣ ಕೆಲಸ. ಆದರೆ, ಎಲ್ಲಾ ಆಟಗಾರರಿಗೆ ಅವಕಾಶ ನೀಡುವುದು ಕೂಡ ಇಲ್ಲಿ ತುಂಬಾ ಮುಖ್ಯ. ಆದರೆ, ವೈಶಾಖ್‌ ವಿಜಯ್‌ಕುಮಾರ್‌ಗೆ ಅವಕಾಶ ನೀಡಬೇಕೆಂದರೆ, ಆವೇಶ್‌ ಖಾನ್‌ ಅವರನ್ನು ಕೈ ಬಿಡಬೇಕಾಗುತ್ತದೆ. ಈ ನಿರ್ಧಾರವನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಕೈಗೊಳ್ಳುವುದು ಅನುಮಾನ.

ಮೊದಲನೇ ಪಂದ್ಯ ಗೆದ್ದ ಅದೇ ಆಟಗಾರರನ್ನು ಎರಡನೇ ಪಂದ್ಯಕ್ಕೆ ನಾಯಕ ಸೂರ್ಯಕುಮಾರ್‌ ಯಾದವ್‌ ಹಾಗೂ ಹಂಗಾಮಿ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಉಳಿಸಿಕೊಳ್ಳಬಹುದು.

ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಅಭಿಷೇಕ್‌ ಶರ್ಮಾ (ಓಪನರ್‌), 2. ಸಂಜು ಸ್ಯಾಮ್ಸನ್‌ (ಓಪನರ್‌, ವಿಕೆಟ್‌ ಕೀಪರ್‌), 3. ಸೂರ್ಯಕುಮಾರ್‌ ಯಾದವ್‌ (ನಾಯಕ, ಬ್ಯಾಟ್ಸ್‌ಮನ್‌), 4.ತಿಲಕ್‌ ವರ್ಮಾ (ಬ್ಯಾಟ್ಸ್‌ಮನ್‌), 5. ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್)‌, 6. ರಿಂಕು ಸಿಂಗ್‌ (ಬ್ಯಾಟ್ಸ್‌ಮನ್‌), 7.ಅಕ್ಷರ್‌ ಪಟೇಲ್‌ (ಆಲ್‌ರೌಂಡರ್‌), 8. ರವಿ ಬಿಷ್ಣೋಯ್‌ (ಸ್ಪಿನ್ನರ್‌), 9. ವರುಣ್‌ ಚಕ್ರವರ್ತಿ (ಸ್ಪಿನ್ನರ್‌), 10. ಅರ್ಷದೀಪ್‌ ಸಿಂಗ್‌ (ವೇಗದ ಬೌಲರ್‌), 11. ಆವೇಶ್‌ ಖಾನ್‌/ ವೈಶಾಖ್‌ ವಿಜಯ್‌ಕುಮಾರ್‌

ಈ ಸುದ್ದಿಯನ್ನು ಓದಿ: IND vs SA: ತಮ್ಮ ಬ್ಯಾಟಿಂಗ್‌ ಯಶಸ್ಸಿನ ಶ್ರೇಯವನ್ನು ಸೂರ್ಯಗೆ ಸಮರ್ಪಿಸಿದ ಸಂಜು ಸ್ಯಾಮ್ಸನ್‌!