Monday, 25th November 2024

Rohit Sharma: ನಿರ್ಧಾರ ಬದಲಿಸಿದ ರೋಹಿತ್‌; ಮೊದಲ ಪಂದ್ಯದ ರಜೆ ವಾಪಸ್‌

ಮುಂಬಯಿ: ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಅವರ​ ಪತ್ನಿ ರಿತಿಕಾ 2ನೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿರುವ ಕಾರಣ, ರೋಹಿತ್‌(rohit sharma) ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್‌(Border-Gavaskar Trophy) ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸ್ವತಃ ರೋಹಿತ್‌ ಕೂಡ ಮೊದಲ ಪಂದ್ಯವನ್ನು ಆಡುವ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ್ದರು. ಆದರೆ ಇದೀಗ ರೋಹಿತ್‌ ತಮ್ಮ ನಿಲುವನ್ನು ಬದಲಾಯಿಸಿದಂತಿದೆ. ನವೆಂಬರ್‌ 10 ರಂದು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳುವ ಭಾರತ ತಂಡದೊಂದಿಗೆ ರೋಹಿತ್‌ ಕೂಡ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೇ ಬಿಸಿಸಿಐ ಕೋಚ್‌ ಗೌತಮ್‌ ಗಂಭೀರ್‌ ಮತ್ತು ರೋಹಿತ್‌ ಶರ್ಮ ಜತೆ ಸತತ 6 ಗಂಟೆಗಳ ಕಾಲ ಸಭೆ ನಡೆಸಿ ಡ್ರಿಲ್‌ ಮಾಡಿತ್ತು. ಇದರ ಬೆನ್ನಲ್ಲೇ ರೋಹಿತ್‌ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಒಂದೊಮ್ಮೆ ರೋಹಿತ್‌ ತಮ್ಮ ರಜೆಯನ್ನು ರದ್ದುಗೊಳಿಸಿ ಆಸೀಸ್‌ ಪ್ರವಾಸ ಕೈಗೊಂಡರೆ ಇದರ ಹಿಂದೆ ಬಿಸಿಸಿಐಯ ಕಠಿಣ ಕ್ರಮ ಇದೆ ಎನ್ನಬಹುದು.

ಭಾರತ ತಂಡದ ಆಟಗಾರರು ನವೆಂಬರ್‌ 10 ರಂದು ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಆ ಬಳಿಕ ಆಸೀಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಲಿದ್ದಾರೆ. ಹೆಚ್ಚುವರಿ ಅಭ್ಯಾಸ ನಡೆಸಲೆಂದೇ  ಭಾರತ “ಎ’ ವಿರುದ್ಧ ಆಡಬೇಕಿದ್ದ ತ್ರಿದಿನ ಅಭ್ಯಾಸ ಪಂದ್ಯವನ್ನು ರದ್ದು ಮಾಡಿದೆ. ಗಾಯಕ್ವಾಡ್‌ ನೇತೃತ್ವದ ಭಾರತ ʼಎʼ ತಂಡದ ವಿರುದ್ಧ ರೋಹಿತ್‌ ಶರ್ಮ ಪಡೆ ಪರ್ಥ್‌ನಲ್ಲಿ ಅಭ್ಯಾಸ ಪಂದ್ಯವೊಂದನ್ನು (ನ.15-17) ಆಡಬೇಕಿತ್ತು. ಆದರೆ, ಕೋಚ್‌ ಗೌತಮ್‌ ಗಂಭೀರ್‌ ಮತ್ತು ತಂಡದ ಕೆಲವು ಹಿರಿಯ ಆಟಗಾರರು ಹೆಚ್ಚುವರಿ ಅಭ್ಯಾಸದ ಅವಧಿಯನ್ನು ಬಯಸಿದ್ದರಿಂದ ಈ ಪಂದ್ಯವನ್ನು ಕೈಬಿಡಲಾಗಿದೆ.

ಇದನ್ನೂ ಓದಿ BCCI Meeting: ಗಂಭೀರ್‌, ರೋಹಿತ್‌ಗೆ ಸತತ 6 ಗಂಟೆ ಬಿಸಿಸಿಐ ಡ್ರಿಲ್‌

ಭಾರತ ಹಿಂದಿನೆರಡೂ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಭ್ಯಾಸ ಪಂದ್ಯವನ್ನಾಡಿಯೇ ಟೆಸ್ಟ್‌ ಸರಣಿಯನ್ನು ಆಡಲಿಳಿದಿತ್ತು. ಈ ಬಾರಿ ತವರಿನಲ್ಲೇ ಬ್ಯಾಟಿಂಗ್‌ ವೈಫಲ್ಯ ಕಂಡ ಕಾರಣ ಅಭ್ಯಾಸ ಪಂದ್ಯಕ್ಕಿಂತ ಹೆಚ್ಚುವರಿ ನೆಟ್‌ ಅಭ್ಯಾಸ ನಡೆಸುವ ಯೋಜನೆ ಭಾರತದ್ದು.

ನವೆಂಬರ್ 22ರಿಂದ ಜನವರಿ 7ರವರೆಗೆ ಐದು ಪಂದ್ಯಗಳು ನಡೆಯಲಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಡಿಲೇಡ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಕಳೆದ 4 ಸರಣಿಗಳಲ್ಲಿ ಗೆದ್ದು ಬೀಗಿದೆ. 2016-17ರಲ್ಲಿ 2-1 (ತವರಿನ ಸರಣಿ), 2018-19ರಲ್ಲಿ 2-1 (ಆಸ್ಟ್ರೇಲಿಯದಲ್ಲಿ), 2020- 21ರಲ್ಲಿ 2-1 (ಆಸ್ಟ್ರೇಲಿಯದಲ್ಲಿ) ಹಾಗೂ 2022-23ರಲ್ಲಿ 2-1 (ತವರಿನ ಸರಣಿ) ಅಂತರದಿಂದ ಭಾರತ ಜಯ ಸಾಧಿಸಿತ್ತು.